ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಇಪಿಯಲ್ಲಿ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ- ಡಾ.ಹರೀಶ ರಾಮಸ್ವಾಮಿ

ರಾಯಚೂರು ವಿವಿ ಕುಲಪತಿ
Last Updated 5 ಜನವರಿ 2022, 13:57 IST
ಅಕ್ಷರ ಗಾತ್ರ

ರಾಯಚೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಲ್ಲಿ ವಿದ್ಯಾಭ್ಯಾಸಕ್ಕೆ ಕೊಟ್ಟಿರುವ ಪ್ರಾಮುಖ್ಯತೆ ಶ್ಲಾಘನೀಯವಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಹರೀಶ ರಾಮಸ್ವಾಮಿ ಹೇಳಿದರು.

ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಎಲ್ಲ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಎನ್‌ಇಪಿ ಸಂಯೋಜಕರು ಮತ್ತು ನೋಡಲ್ ಅಧಿಕಾರಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಎನ್‌ಇಪಿ ಕುರಿತಾಗಿ ಈಗಾಗಲೇ ರಾಯಚೂರು ವಿಶ್ವವಿದ್ಯಾಲಯದಲ್ಲಿ 13 ಕಾರ್ಯಕ್ರಮಗಳು ಆನ್‌ಲೈನ್, ಆಫ್‌ಲೈನ್ ಹಮ್ಮಿಕೊಂಡಿದ್ದೇವೆ. ಇನ್ನೂ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಉದ್ಯೋಗಾರ್ಹ ಕೌಶಲ್ಯ ಅಭಿವೃದ್ಧಿಯು ಇಂದಿನ ಪೀಳಿಗೆಗೆ ಅವಶ್ಯ ಎಂದರು.

ಅಪೇಕ್ಷಿತ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗಾಧಾರಿತ ಶಿಕ್ಷಣ ನೀಡಲು ರಾಯಚೂರು ವಿಶ್ವವಿದ್ಯಾಲಯವು ಸದಾ ಸಿದ್ಧವಿದೆ. ವಿದ್ಯಾರ್ಥಿಗಳನ್ನು ಉದ್ಯೋಗ ಶೀಲರನ್ನಾಗಿಸುವ, ಮುಕ್ತವಾಗಿ ವಿಷಯಗಳನ್ನು ಆಯ್ಕೆಮಾಡಿ ಕಲಿತು ಪರಿಣಿತಿಯನ್ನು ಹೊಂದುವ, ಸಮಕಾಲಿನ ಬದುಕಿಗೆ ಅಗತ್ಯವಾದ ತಂತ್ರಜ್ಞಾನ, ಕಲಿಕೆಗೆ ಸಾಕಷ್ಟು ಅವಕಾಶಗಳು ಎನ್‌ಇಪಿಯಲ್ಲಿವೆ ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಸದುಪಯೋಗ ಪಡೆದುಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ಮುಖ್ಯವಾಗಿ ಮಾನವೀಯ ಮೌಲ್ಯಗಳು, ಶಿಸ್ತು, ಸಮಯಪ್ರಜ್ಞೆ, ಆಯೋಜನಾ ಪದ್ದತಿ ಹೊಂದಿದಾಗ ಶಿಕ್ಷಣದಲ್ಲಿ ಅಂದುಕೊಂಡ ಕಾರ್ಯ ಸಿದ್ದಿಯಾಗುವುದು ಎಂದು ಹೇಳಿದರು.

ಕರ್ನಾಟಕ ಉಚ್ಛ ಶಿಕ್ಷಣ ಮಂಡಳಿ ವಿಶೇಷಾಧಿಕಾರಿ ಡಾ.ಎಂ.ಜಯಪ್ಪ ಮಾತನಾಡಿದರು. ರಾಯಚೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಯರಿಸ್ವಾಮಿ ಎಂ. ಮಾತನಾಡಿ, ಈ ಕಾರ್ಯಾಗಾರದ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅವಶ್ಯವಾಗಿ ತಿಳಿದು ಅದರ ಸದುಪಯೋಗ ಪಡೆದುಕೊಂಡು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಸವರಾಜ ತಳ್ಳೂರು, ಕಲಘಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶೈಲಜಾ ಎಸ್. ಹುದ್ದಾರ, ಬೆಂಗಳೂರಿನ ಬ್ರೆಟ್ ಸೊಲ್ಯೂಷನ್ಸ್ ಮುಖ್ಯಸ್ಥ ಅಶೋಕ ಹೆಗೆಡೆ, ಮುಖ್ಯ ನಿರ್ವಾಹಕ ನಂದಕಿಶೋರ ವಿ. ಬಲ್ಲಾಳ, ಬ್ಯಾಂಕಿಂಗ್ ತರಬೇತಿ, ನ್ಯಾಸ್ಕಾಮ್‌ನ ಮುಖ್ಯಸ್ಥ ದಿನೇಶ್‌ಕುಮಾರ, ಪಾಣಿಗ್ರಾಹಿ ಮತ್ತು ಬಿಸಿಎ ಗೋಕಟೆ ವಾಣಿಜ್ಯ ಕಾಲೇಜಿನ ಸಂಯೋಜಕ ಪ್ರೊ.ವೇಣುಗೋಪಾಲ ಜಾಲಿಹಾಳ ಮಾತನಾಡಿ, ಸಂವಾದ ನಡೆಸಿದರು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿಶ್ವನಾಥ ಎಂ. ಸ್ವಾಗತಿಸಿದರು. ಇಂಗ್ಲಿಷ್‌ ವಿಭಾಗದ ಉಪನ್ಯಾಸಕ ಅನಿಲ ಅಪ್ರಾಳ್ ನಿರೂಪಿಸಿದರು. ಸಮಾಜಕಾರ್ಯ ವಿಭಾಗದ ಡಾ.ರಶ್ಮಿರಾಣಿ ಅಗ್ನಿಹೋತ್ರಿ ಪ್ರಾರ್ಥಿಸಿದರು, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಫತ್ತೇಪುರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT