ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ | ಅರಣ್ಯ ಕಾಯ್ದೆ ಉಲ್ಲಂಘನೆ: ತಹಶೀಲ್ದಾರ್‌ಗೆ ನೋಟಿಸ್‌

Published 24 ಜೂನ್ 2024, 14:37 IST
Last Updated 24 ಜೂನ್ 2024, 14:37 IST
ಅಕ್ಷರ ಗಾತ್ರ

ಮಸ್ಕಿ (ರಾಯಚೂರು ಜಿಲ್ಲೆ): ಅರಣ್ಯ ಇಲಾಖೆಗೆ ಸೇರಿದ ಸಂರಕ್ಷಿತ ಪ್ರದೇಶದ 16 ಎಕರೆ ಜಮೀನನ್ನು ಮಸ್ಕಿ ತಹಶೀಲ್ದಾರ್ ಸುಧಾ ಅರಮನೆ ಅವರು ಖಾಸಗಿಯವರಿಗೆ ಅಕ್ರಮವಾಗಿ ಪಟ್ಟಾಮಾಡಿ ಪಹಣಿಯಲ್ಲಿ ನಮೂದಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ತಾಲ್ಲೂಕಿನ ತಲೆಖಾನ್ ಹೋಬಳಿಯ ಬಗ್ಗಲಗುಡ್ಡ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ ಸರ್ವೆ ನಂ 28ರ 447.3 ಎಕರೆ ಪೈಕಿ 16 ಎಕರೆ ರಕ್ಷಿತ ಪ್ರದೇಶದ ಅರಣ್ಯ ಭೂಮಿಯನ್ನು ಯರದೊಡ್ಡಿ ತಾಂಡಾದ 8 ಜನರಿಗೆ ಅರಣ್ಯ ಇಲಾಖೆ ನಿಯಮ ಉಲ್ಲಂಘಿಸಿ ತಹಶೀಲ್ದಾರ್ ಅವರು (ವರ್ಗಾವಣೆ ಸಂಖ್ಯೆಎಚ್–9/2023-24, 23-2-2024) ಹಂಚಿಕೆ ಮಾಡಿದ್ದಾರೆ.

ಎಸಿ ನ್ಯಾಯಾಲಯದಲ್ಲಿ ದೂರು ದಾಖಲು: ಮಸ್ಕಿ ತಾಲ್ಲೂಕಿನ ಬಗ್ಗಲಗುಡ್ಡದ ಅರಣ್ಯ ರಕ್ಷಿತ ಪ್ರದೇಶದ 16 ಎಕರೆಯನ್ನು 8 ಜನರಿಗೆ ತಲಾ 2 ಎಕರೆಯಂತೆ ಹಂಚಿಕೆ ಮಾಡಿರುವ ತಹಶೀಲ್ದಾರ್ ಅವರ ಕ್ರಮ ಪ್ರಶ್ನಿಸಿ ಲಿಂಗಸುಗೂರಿನ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ವಿದ್ಯಾಶ್ರೀ ದಿಡ್ಡಿಮನಿ ಅವರು 2024ರ ಜೂನ್‌ 6ರಂದು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಅರಣ್ಯ ಭೂಮಿ ಹಂಚಿಕೆಯನ್ನು ರದ್ದಪಡಿಸುವಂತೆ ಕೋರಿದ್ದಾರೆ.

ಜೂ 25ರಂದು ವಿಚಾರಣೆ: ಅರಣ್ಯ ಇಲಾಖೆ ನೀಡಿದ ದೂರಿನ ಮೇಲೆ ಮಸ್ಕಿ ತಹಶೀಲ್ದಾರ್ ಸುಧಾ ಅರಮನೆ ಹಾಗೂ ಅರಣ್ಯ ಇಲಾಖೆ ಭೂಮಿ ಪಟ್ಟಾ ಮಾಡಿಸಿಕೊಂಡ 8 ಜನರ ವಿರುದ್ಧ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಎಲ್ಲ 9 ಜನ ಪ್ರತಿವಾದಿಗಳಿಗೆ ಉಪವಿಭಾಗಾಧಿಕಾರಿ ನ್ಯಾಯಾಲಯವು ನೋಟಿಸ್‌ ಜಾರಿ ಮಾಡಿ ಜೂನ್ 25ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ಅರಣ್ಯ(ಸಂರಕ್ಷಣಾ) ಕಾಯ್ದೆ 1980ರ ಕಲಂ 2 ಪ್ರಕಾರ ಕೇಂದ್ರ ಸರ್ಕಾರದ ಪೂರ್ವ ಅನುಮತಿ ಇಲ್ಲದೇ ಯಾವುದೇ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ಬಳಸಿಕೊಳ್ಳುವುದಕ್ಕೆ ನಿಷೇಧವಿದೆ. ತಹಶೀಲ್ದಾರ್ ಅವರು ಅರಣ್ಯ ಇಲಾಖೆ ಕಾನೂನು ಉಲ್ಲಂಘಿಸಿದ್ದಲ್ಲದೆ ಹಿರಿಯ ಅಧಿಕಾರಿಗಳ ಗಮನಕ್ಕೂ ತಾರದೇ ಅರಣ್ಯ ಭೂಮಿಯನ್ನು 8 ಜನರಿಗೆ ಹಂಚಿಕೆ ಮಾಡಿದ್ದು ಸಂಶಯಗಳಿಗೆ ಎಡೆಮಾಡಿದೆ.

ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳಿಂದ ಸೂಕ್ತ ವರದಿ ಪಡೆಯದೇ ಏಕಪಕ್ಷೀಯವಾಗಿ ಭೂಮಿ ಹಂಚಿಕೆ ಮಾಡಲಾಗಿದ್ದು, ತಹಶೀಲ್ದಾರ್ ಕಚೇರಿಯ ಕೆಲವು ಸಿಬ್ಬಂದಿ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT