ಶಕ್ತಿನಗರ: ಡಿ.ರಾಂಪೂರು ಗ್ರಾಮದ ವೀರೇಶ ಅವರು ನರೇಗಾ ಯೋಜನೆಯಡಿ ಕೋಳಿ ಶೆಡ್ ನಿರ್ಮಾಣ ಮಾಡಿದ್ದು, ಉತ್ತಮ ಆದಾಯ ಪಡೆಯುತ್ತಿದ್ದಾರೆ.
ರಾಯಚೂರು ತಾಲ್ಲೂಕಿನ ಆತ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ.ರಾಂಪೂರು ಗ್ರಾಮದ ವೀರೇಶ ಅವರಿಗೆ 2 ಎಕರೆ ಕೃಷಿ ಭೂಮಿ ಇದೆ. ಪ್ರತಿವರ್ಷ ಭತ್ತ ಬೆಳೆಯುತ್ತಾರೆ. ಕೇವಲ ಕೃಷಿಯಿಂದಾಗಿ ಜೀವನ ನಿರ್ವಹಣೆ ಕಷ್ಟವಾದ ಕಾರಣ ನರೇಗಾ ಯೋಜನೆಯಡಿ ಕೂಲಿ ಕೆಲಸವನ್ನೂ ಮಾಡುತ್ತಾರೆ. ನರೇಗಾದಿಂದ ದೊರೆತ ಕೂಲಿ ಹಣವನ್ನು ಮನೆ ನಿರ್ವಹಣೆ ಹಾಗೂ ಕೃಷಿ ಚಟುವಟಿಕೆಗೆ ಬಳಸುತ್ತಿದ್ದಾರೆ.
ವೀರೇಶ ಅವರು ಕೋಳಿ ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ. ಕುಟುಂಬದೊಂದಿಗೆ ಕೆಲಸಕ್ಕೆ ಹೋದಾಗ ಕೋಳಿಗಳ ರಕ್ಷಣೆ ಹಾಗೂ ನಿರ್ವಹಣೆ ಸಮಸ್ಯೆಯಾಗುತ್ತಿತ್ತು. ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಯಡಿ ಕೋಳಿ ಸಾಕಾಣಿಕೆ ಶೆಡ್ ನಿರ್ಮಿಸಿಕೊಂಡಿದ್ದಾರೆ.
ಗ್ರಾಮ ಪಂಚಾಯಿತಿಯವರು 2022-23ನೇ ಸಾಲಿನಲ್ಲಿ ಅಂದಾಜು ₹62,000 ಸಾವಿರ ಮೊತ್ತದಲ್ಲಿ ಕೋಳಿ ಶೆಡ್ ನಿರ್ಮಿಸಿಕೊಟ್ಟಿದ್ದಾರೆ. ಕೂಲಿಗಾಗಿ ₹19 ಸಾವಿರ, ಸಾಮಗ್ರಿಗೆ ₹32,334 ಸಾವಿರ ವೆಚ್ಚ ಮಾಡಲಾಗಿದೆ. 62 ಮಾನವ ದಿನಗಳನ್ನು ಸೃಜಿಸಲಾಗಿದೆ.
3.75 X 2.06 ಮೀ ಅಳತೆಯ ಕೋಳಿ ಶೆಡ್‌ನಲ್ಲಿ ಭೀಮಾವರಂ ತಳಿಯ 8 ಕೋಳಿ, 8 ಹುಂಜ ಹಾಗೂ 15 ನಾಟಿ ಕೋಳಿಗಳನ್ನು ಸಾಕಿದ್ದಾರೆ. ಭೀಮಾವರಂ ತಳಿಯ ಹುಂಜಕ್ಕೆ ₹2,000, ಕೋಳಿಗೆ ₹1,500 ಬೆಲೆ ಇದೆ ಎಂದು ವೀರೇಶ ತಿಳಿಸಿದರು.
ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಯಡಿ ಕೋಳಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಸೌಲಭ್ಯದಿಂದ ಆರ್ಥಿಕ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ
ಚಂದ್ರಶೇಖರ ಪವಾರ ತಾ.ಪಂ ಇಒ ರಾಯಚೂರು
ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಯಡಿ ಸೌಲಭ್ಯ ಪಡೆದುಕೊಳ್ಳಲು ವಿಫಲ ಅವಕಾಶಗಳಿವೆ. ದುರ್ಬಲ ವರ್ಗದವರು ಇಂಥ ಸೌಲಭ್ಯಗಳನ್ನು ಪಡೆದುಕೊಂಡು ಸುಸ್ಥಿರವಾಗಿ ಅಭಿವೃದ್ಧಿ ಹೊಂದಬೇಕು