ಗುರುವಾರ , ಮೇ 26, 2022
23 °C
ಬಂಧಿಖಾನೆ ಉತ್ತರ ವಲಯದ ಡಿಐಜಿ ಸೋಮಶೇಖರ್‌ ಹೇಳಿಕೆ

ರಾಯಚೂರು: ಹೊಸ ಜಿಲ್ಲಾ ಕಾರಾಗೃಹ ನಿರ್ಮಾಣಕ್ಕೆ ತಯಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಹೊಸದೊಂದು ಜಿಲ್ಲಾ ಕಾರಾಗೃಹಕ್ಕಾಗಿ ಈಗಾಗಲೇ 19.16 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದ್ದು, ನಿರ್ಮಾಣ ಕಾಮಗಾರಿ ಆರಂಭಿಸುವುದಕ್ಕೆ ತಯಾರಿ ಮಾಡಲಾಗುತ್ತಿದೆ ಎಂದು ಬಂಧಿಖಾನೆ ಉತ್ತರ ವಲಯದ ಡಿಐಜಿ ಸೋಮಶೇಖರ್‌ ಹೇಳಿದರು.

ನಗರದ ಮಧ್ಯೆಭಾಗದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಗುರುವಾರ ಭೇಟಿನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾರಾಗೃಹಕ್ಕೆ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಕುರಿತಾಗಿ ನಗರಸಭೆಗೆ ಕೋರಲಾಗಿತ್ತು. ಈಗಾಗಲೇ ನಗರಸಭೆ ಎಂಜಿನಿಯರುಗಳು ಸ್ಥಳ ಪರಿಶೀಲಿಸಿದ್ದು, ಕಾಮಗಾರಿ ಆರಂಭಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಆದಷ್ಟು ಶೀಘ್ರ ಭೂಮಿಪೂಜೆ ನೆರವೇರಿಸಿ ಕಟ್ಟಡ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ರಾಯಚೂರಿನಲ್ಲಿ ಜಿಲ್ಲಾ ಕಾರಾಗೃಹ ನಿರ್ಮಾಣದ ಪ್ರಸ್ತಾವನೆಯು ಹಲವು ವರ್ಷಗಳಿಂದ ಬಾಕಿ ಇದೆ. ಮುಂಬರುವ ದಿನಗಳಲ್ಲಿ ಕಾಮಗಾರಿ ತ್ವರಿತವಾಗಿ ಮಾಡುವುದಕ್ಕೆ ಸಿದ್ಧತೆ ಮಾಡಲಾಗಿದೆ. ಸದ್ಯ ಮೂಲಸೌಕರ್ಯಗಳ ಸಂಪರ್ಕ ಒದಗಿಸುವುದಕ್ಕೆ ಅಧ್ಯತೆ ವಹಿಸಲಾಗುತ್ತಿದ್ದು, ನಗರಸಭೆಯಿಂದ ಬೇಗನೆ ಮಾಡಿಕೊಡುವ ನಿರೀಕ್ಷೆ ಇದೆ ಎಂದರು.

ಬೀದರ್‌ ಹಾಗೂ ವಿಜಯಪುರ ಜಿಲ್ಲೆಗಳಲ್ಲೂ ₹100 ಕೋಟಿ ವೆಚ್ಚದಲ್ಲಿ ನೂತನ ಜಿಲ್ಲಾ ಕಾರಾಗೃಹಗಳ ನಿರ್ಮಾಣ ನಡೆಯುತ್ತಿದೆ. ಮೊದಲ ಹಂತದ ಕಾಮಗಾರಿಯು ಮುಕ್ತಾಯ ಹಂತಕ್ಕೆ ತಲುಪಿವೆ. ಉದ್ಘಾಟನೆ ಸಮಾರಂಭ ಆಯೋಜಿಸುವ ಬಗ್ಗೆ ಅಲ್ಲಿಯೂ ಪೂರ್ವ ತಯಾರಿ ಮಾಡಿಕೊಳ್ಳುವುದಕ್ಕೆ ತಿಳಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ.ಆರ್. ಅಂದಾನಿ, ಉಪಜೈಲರ್‌ ಅಬ್ದುಲ್‌ ಷುಕೂರ್‌, ನಗರಸಭೆ ಎಂಜಿನಿಯರ್‌ ಕೃಷ್ಣ, ಶ್ರೀನಿವಾಸ ಕಸ್ಬೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.