ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡಕಲ್ ಪ್ರೌಢಶಾಲೆಗೆ ಕಾಯಂ ಶಿಕ್ಷಕರಿಲ್ಲ

ಹುದ್ದೆ ಮಂಜೂರಾತಿಗೆ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ
Last Updated 4 ಡಿಸೆಂಬರ್ 2019, 12:09 IST
ಅಕ್ಷರ ಗಾತ್ರ

ಮಾನ್ವಿ: ತಾಲ್ಲೂಕಿನ ತಡಕಲ್ ಗ್ರಾಮ ಸೇರಿ ಐದು ಕಡೆ ಸರ್ಕಾರಿ ಪ್ರೌಢ ಶಾಲೆಗಳನ್ನು ಆರಂಭಿಸಿದ್ದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯು ಕಾಯಂ ಶಿಕ್ಷಕರ ಹುದ್ದೆಗಳ ನೇಮಕಕ್ಕೆ ನಿರ್ಲಕ್ಷ್ಯ ವಹಿಸಿರುವುದು ವಿದ್ಯಾರ್ಥಿಗಳ ತೊಂದರೆಗೆ ಕಾರಣವಾಗಿದೆ.

1ರಿಂದ 8ನೇ ತರಗತಿವರೆಗೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಹೊಂದಿದ್ದ ತಾಲ್ಲೂಕಿನ ಕವಿತಾಳದಲ್ಲಿ ಉರ್ದು ಮಾಧ್ಯಮ ಪ್ರೌಢಶಾಲೆ ಸೇರಿ ತಡಕಲ್, ಚೀಕಲಪರ್ವಿ, ಅರೋಲಿ ಹಾಗೂ ಮಲ್ಲಟ ಗ್ರಾಮಗಳಲ್ಲಿ 9 ಮತ್ತು 10ನೇ ತರಗತಿಗಳ ಪ್ರೌಢಶಾಲೆಗಳ ಆರಂಭಕ್ಕೆ ಕ್ರಮ ಕೈಗೊಂಡಿತ್ತು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಮಂಜೂರಾಗುವ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ನಿರ್ವಹಣೆ ಜವಾಬ್ದಾರಿಯನ್ನು ನಿರ್ದಿಷ್ಟ ಅವಧಿವರೆಗೆ ಮಂಡಳಿಯೇ ಹೊಂದಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ತಡಕಲ್‌ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು 52 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ₹ 98.26 ಲಕ್ಷ ವೆಚ್ಚದಲ್ಲಿ 7 ಕೊಠಡಿಗಳ ನೂತನ ಪ್ರೌಢಶಾಲಾ ಕಟ್ಟಡ ಕಾಮಗಾರಿ ಪ್ರಗತಿ ಹಂತದಲ್ಲಿದೆ.

ಶಾಲಾ ಕಟ್ಟಡ ನಿರ್ಮಾಣಕ್ಕೆ ಆಸಕ್ತಿವಹಿಸಿರುವ ಶಿಕ್ಷಣ ಇಲಾಖೆ ಹಾಗೂ ಕೆಕೆಆರ್‌ಡಿಬಿ ಅಧಿಕಾರಿಗಳು ಶಾಲೆಗಳಲ್ಲಿ ಕಾಯಂ ಶಿಕ್ಷಕರ ಹುದ್ದೆಗಳ ಆಡಳಿತಾತ್ಮಕ ಮಂಜೂರಾತಿಗೆ ಗಮನಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ದೂರು.

ಶಾಲೆಯಲ್ಲಿ ಕಾಯಂ ಶಿಕ್ಷಕರ ಹುದ್ದೆಗಳ ಇಲಾಖಾ ಮಂಜೂರಾತಿ ದೊರಕದ ಕಾರಣ ಅತಿಥಿ ಶಿಕ್ಷಕರ ನೇಮಕಕ್ಕೂ ಆಡಳಿತಾತ್ಮಕವಾಗಿ ಅವಕಾಶ ಇಲ್ಲದಾಗಿದೆ. ಕಾರಣ ಹತ್ತಿರದ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರನ್ನು ಸೇವೆಗೆ ಬಳಸಿಕೊಳ್ಳುತ್ತಿದ್ದಾರೆ.

ತಾತ್ಕಾಲಿಕವಾಗಿ ಉಟಕನೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ, ಬಾಗಲವಾಡ ಮತ್ತು ಪೋತ್ನಾಳ ಸರ್ಕಾರಿ ಪ್ರೌಢಶಾಲೆಗಳ ಇಬ್ಬರು ಶಿಕ್ಷಕರನ್ನು ವಾರದಲ್ಲಿ ೩ದಿನ ಎರವಲು ಸೇವೆ ಆಧಾರದಲ್ಲಿ ಈ ಶಾಲೆಗೆ ನಿಯುಕ್ತಿಗೊಳಿಸಲಾಗಿದೆ. ಇದೇ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಇಬ್ಬರು ಅತಿಥಿ ಶಿಕ್ಷಕರನ್ನು ಪ್ರೌಢಶಾಲೆಯ ತರಗತಿಗಳ ಬೋಧನೆಗೆ ಬಳಸಿಕೊಳ್ಳಲಾಗುತ್ತಿದೆ.

‘ವಿದ್ಯಾರ್ಥಿಗಳಿಗೆ ಸರಿಯಾದ ಬೋಧನಾ ವ್ಯವಸ್ಥೆಗಾಗಿ ಶಾಲೆಯಲ್ಲಿ ಪೂರ್ಣಪ್ರಮಾಣದ ಶಿಕ್ಷಕರನ್ನು ನೇಮಿಸಬೇಕು. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಈ ಶಾಲೆಗೆ ಶಿಕ್ಷಕ ಹುದ್ದೆಗಳ ಮಂಜೂರಾತಿಗೆ ಪ್ರಯತ್ನಿಸಬೇಕು’ ಎಂದು ಗ್ರಾಮದ ಮುಖಂಡ ಅಶೋಕ ತಡಕಲ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT