ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಬದಲಾಗದ ಬಡವರ ಪರಿಸ್ಥಿತಿ: ಕೆ.ಸೋಮಶೇಖರ್ ಯಾದಗಿರಿ

ಎಸ್‌ಯುಸಿಐ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
Last Updated 2 ಏಪ್ರಿಲ್ 2019, 13:38 IST
ಅಕ್ಷರ ಗಾತ್ರ

ರಾಯಚೂರು: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಾಗಿ ಕೆ.ಸೋಮಶೇಖರ್ ಯಾದಗಿರಿ ಅವರು ಜಿಲ್ಲಾ ಚುನಾವಣಾಧಿಕಾರಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮೊದಲು ನೂರಾರು ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ಗಮನ ಸೆಳೆದರು.

ನಗರದ ಶಹೀದ್ ಭಗತ್‌ಸಿಂಗ್ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಚುನಾವಣಾದಿಕಾರಿಗಳ ಕಚೇರಿಗೆ ತಲುಪಿದರು.

ಮೆರವಣಿಗೆ ಪೂರ್ವ ಶಿಕ್ಷಣ ತಜ್ಞ ಪಂಡಿತ್ ತಾರಾನಾಥ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಆನಂತರ ಮಾತನಾಡಿದ ಸೋಮಶೇಖರ್‌ ಅವರು, ‘ಎರಡು ಬಂಡವಾಳಶಾಹಿ ಗುಂಪುಗಳು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನೇತೃತ್ವದಲ್ಲಿ ನಮ್ಮನ್ನು ಆಳುತಿವೆ. ಐದು ಅಥವಾ ಹತ್ತು ವರ್ಷಕ್ಕೊಮ್ಮೆ ಪಕ್ಷಗಳು ಬದಲಾಗುತ್ತವೆ, ಮಂತ್ರಿಗಳು ಬದಲಾಗುತ್ತಾರೆ. ಆದರೆ ಅವರೆಲ್ಲರ ಧೋರಣೆ ಒಂದೇ. ಶ್ರೀಮಂತರ ಅಭಿವೃದ್ಧಿ ಹಾಗೂ ದುಡಿಯುವ ಜನರ ಹಾಗೂ ಕಾರ್ಮಿಕರ ಶೋಷಣೆ. ಇದರ ವಿರುದ್ಧ ಜಾಗೃತರಾಗಿ ಹೋರಾಟ ಕಟ್ಟಬೇಕಾಗಿದೆ ಎಂದರು.

ಈ ಭಾಗದ ಜನರ ಸಮಸ್ಯೆಗಳಾದ ಶುದ್ಧ ಕುಡಿಯುವ ನೀರು, ನೀರಾವರಿ ಯೋಜನೆಗಳು ಉದ್ಯೋಗ ಸೃಷ್ಟಿಗಾಗಿ ಬೇಕಾದ ಔದ್ಯೋಗಿಕರಣ ನೆನೆಗುದಿಗೆ ಬಿದ್ದಿವೆ. ಜೀವನೋಪಾಯಕ್ಕಾಗಿ ಜನ ಗುಳೆ ಹೋಗುವ ಪರಿಸ್ಥಿತಿ ದಶಕಗಳು ಕಳೆದರೂ ಬದಲಾಗಿಲ್ಲ. ತೀವ್ರ ಬರಗಾಲದಿಂದಾಗಿ ರೈತರು ಕಂಗಾಲಾಗಿದ್ದಾರೆ. ಫಸಲ ಭೀಮಾ ಯೋಜನೆ ರೈತರಿಗೆ ಸ್ಥೈರ್ಯ ತುಂಬುವ ಬದಲಾಗಿ ಬಂಡವಾಳಿಗರ ಖಜಾನೆ ತುಂಬಿದೆ. ಲಕ್ಷಾಂತರ ಕೋಟಿ ಹಣ ವಿಮಾ ಕಂಪನಿಗಳು ಲೂಟಿ ಹೊಡೆದಿವೆ. ಇಂತಹ ಮೋಸಗಳ ಬಗ್ಗೆ ಯವ ಜನಪ್ರತಿನಿಧಿಯು ಮಾತನಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

‘ಬಂಡವಾಳಿಗರ ಪರ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ಅನ್ನು ತಿರಸ್ಕರಿಸಿ ಜನ ಸಾಮಾನ್ಯರ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಮಹಿಳೆಯರ ಹಾಗೂ ಮಕ್ಕಳ ರಕ್ಷಣೆ ಇನ್ನಿತರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಧ್ವನಿಸಲು ಜನ ಹೋರಾಟದ ಧ್ವನಿ ಮೊಳಗಿಸಲು ಎಸ್‌ಯುಸಿಐ(ಸಿ) ಪಕ್ಷದ ಅಭ್ಯರ್ಥಿಯಾದ ನನ್ನನ್ನು ಆರಿಸಿ ಕಳಿಸಬೇಕು’ ಎಂದು ಮನವಿ ಮಾಡಿದರು.

ವಿಜಯಪುರ ಜಿಲ್ಲಾ ಕಾರ್ಯದರ್ಶಿ ಭಗವಾನ್ ರೆಡ್ಡಿ ಮಾತನಾಡಿ, ‘ನಮ್ಮ ಪಕ್ಷ ದೇಶದ 20 ರಾಜ್ಯಗಳ ಮೂರು ಕೇಂದ್ರಾಡಳಿತ ಪ್ರದೇಶಗಳ 119 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿದೆ. ಜನ ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಂತಹ ಅಭ್ಯರ್ಥಿಗಳೇ ಚುಣಾವಣೆಗೆ ಅಭ್ಯರ್ಥಿಗಳಾಗಿ ಕಣದಲ್ಲಿ ಇದ್ದಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಯಚೂರು ಜಿಲ್ಲೆಯ ಸಂಘಟನಾ ಸಮಿತಿ ಕಾರ್ಯದರ್ಶಿ ಡಾ. ಚಂದ್ರಗಿರೀಶ್ ಮಾತನಾಡಿ, ಚುನಾವಣೆಯನ್ನು ಹೋರಾಟವೆಂದು ಪರಿಗಣಿಸಿ ಚುನಾವಣೆಯಲ್ಲಿ ಸ್ಪರ್ದಿಸಿದೆ. ಎಲ್ಲಾ ಭ್ರಷ್ಟ ಪಕ್ಷಗಳ ವಿರುದ್ಧ ನಮ್ಮ ಹೋರಾಟವಿದೆ. ತಮಗೇ ಮೋಸ ಮಾಡುವ ಪಕ್ಷಗಳನ್ನು ಸೋಲಿಸಬೇಕು ಎಂದು ಹೇಳಿದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಚಂದ್ರಗಿರೀಶ್, ವಿಜಯಪುರ ಜಿಲ್ಲಾ ಕಾರ್ಯದರ್ಶಿ ಬಿ ಭಗವಾನ್ ರೆಡ್ಡಿ, ಯಾದಗಿರಿಯ ಶರಣಗೌಡ ಗೂಗಲ್ , ಎನ್. ಎಸ್. ವೀರೇಶ್ ಇದ್ದರು.

ಮೆರವಣಿಗೆಯಲ್ಲಿ ಜಿಲ್ಲಾ ಸಂಚಲನಾ ಸಮಿತಿ ಸದಸ್ಯರಾದ ಶರಣಪ್ಪ ಉದ್ಬಾಳ್, ರಾಮಣ್ಣ ಎಂ, ಚನ್ನಬಸವ ಜಾನೇಕಲ್, ಯಾದಗಿರಿ ಸಮಿತಿಯ ಸದಸ್ಯರಾದ ಡಿ. ಉಮಾದೇವಿ, ರಾಮಲಿಂಗಪ್ಪ ಬಿ ಎನ್, ಸೈದಪ್ಪ ಎಹ್ ಪಿ. ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT