ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರಂತರ ವಿದ್ಯುತ್ ಕಡಿತ: ಗ್ರಾಹಕರು ಕಂಗಾಲು

ಶಕ್ತಿನಗರದಲ್ಲಿಯೇ ವಿದ್ಯುತ್ ಉತ್ಪಾದನಾ ಕೇಂದ್ರವಿದ್ದರೂ ಸಮಸ್ಯೆ ಅಬಾಧಿತ: ದೀಪದ ಕೆಳಗೆ ಕತ್ತಲು ಎಂಬಂಥ ಸ್ಥಿತಿ
Published : 25 ಸೆಪ್ಟೆಂಬರ್ 2024, 7:06 IST
Last Updated : 25 ಸೆಪ್ಟೆಂಬರ್ 2024, 7:06 IST
ಫಾಲೋ ಮಾಡಿ
Comments

ರಾಯಚೂರು: ನಗರ ಸೇರಿದಂತೆ ತಾಲ್ಲೂಕಿನಲ್ಲಿ ಜೆಸ್ಕಾಂ ನಿತ್ಯ ಅನಿಯಮಿತವಾಗಿ ವಿದ್ಯುತ್ ಕಡಿತಗೊಳಿಸುತ್ತಿರುವ ಕಾರಣ ಗ್ರಾಹಕರು ಹೈರಾಣಾಗುತ್ತಿದ್ದಾರೆ.

ಕೆಲವೆಡೆ ದುರಸ್ತಿ ನೆಪದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದರೆ, ಮತ್ತೆ ಕೆಲವಡೆ ಮಳೆ, ಗಾಳಿ ಇಲ್ಲದಿದ್ದರೂ ಪದೇ ಪದೇ ವಿದ್ಯುತ್‌ ವ್ಯತ್ಯಯ ಸಾಮಾನ್ಯವಾಗಿದೆ. ‌ವಿದ್ಯುತ್ ಸಮಸ್ಯೆಯಿಂದ ಸಾರ್ವಜನಿಕರು ಮನೆಯಲ್ಲಿ ಕೂರಲು ಆಗದಂತೆ ಸೆಕೆಗೆ ತತ್ತರಿಸುತ್ತಿದ್ದಾರೆ. ಅನೇಕರು ಕಚೇರಿ ಕಾರ್ಯಗಳನ್ನು ಮನೆಯಲ್ಲಿಯೇ ಮಾಡುತ್ತಿರುವುದರಿಂದ ಕೆಲಸಕ್ಕೆ ವ್ಯತ್ಯಯವಾಗುತ್ತಿದೆ.

ರಾಯಚೂರಿನ ಶಕ್ತಿನಗರದಲ್ಲಿಯೇ ವಿದ್ಯುತ್ ಉತ್ಪಾದನಾ ಕೇಂದ್ರವಿದೆ. ರಾಜ್ಯಕ್ಕೂ ಇಲ್ಲಿಂದಲೇ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ನಗರವಾಸಿಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದೇ ದೀಪದ ಕೆಳಗೆ ಕತ್ತಲು ಎಂಬಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ತಾಪಮಾನ ರಾಯಚೂರಿನಲ್ಲಿ ದಾಖಲಾಗುತ್ತಿದೆ. ಮಳೆಗಾಲವಿದ್ದರೂ ಬಿಸಿಲಿನ ಧಗೆ ಹೆಚ್ಚಾಗಿದೆ. ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ವೇಳೆ ಸುಮಾರು ಒಂದು ತಾಸಿನಿಂದ ಎರಡೂವರೆ ತಾಸಿನವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ.

ಸೆಕೆ ಹೆಚ್ಚಾಗಿ ಚಿಕ್ಕ ಮಕ್ಕಳು, ವೃದ್ಧರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ನಿದ್ರಾ ಭಂಗವಾಗುತ್ತಿದೆ.  ಎಲ್‌ಬಿಎಸ್ ನಗರ, ಸಿಯಾತಲಾಬ್, ಮಡ್ಡಿಪೇಟೆ, ಹರಿಜನವಾಡ ಸೇರಿದಂತೆ ಬಹುತೇಕ ಕೊಳೆಗೇರಿಗಳಲ್ಲಿ ಶೆಡ್‌ಗಳಲ್ಲಿ ವಾಸಿಸುವ ಜನರ ಸಮಸ್ಯೆ ಹೇಳತೀರದಾಗಿದೆ. ವಿದ್ಯುತ್ ಕಡಿತವಾದಾಗ ವಿಪರೀತ ಸೆಕೆಯಿಂದ ಮನೆಯ ಹೊರಗೆ ಕಟ್ಟೆ ಹಾಗೂ ಪಕ್ಕದ ಮನೆಗಳ ಮೇಲ್ಚಾವಣಿ ಮೇಲೆ ಮಲಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಎಲ್‌ಬಿಎಸ್ ನಗರ ನಿವಾಸಿ ವೀರೇಶ.

‘ರಾಯಚೂರು ನಗರದಲ್ಲಿ ನಿತ್ಯ ಸಂಜೆ, ರಾತ್ರಿ ಒಂದೂವರೆ ತಾಸು ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಜೆಸ್ಕಾಂ ಅಧಿಕಾರಿಗಳು ಕೆಲವೊಮ್ಮೆ ಮುನ್ಸೂಚನೆ ನೀಡಿದರೆ ಅನೇಕ ಬಾರಿ ಹೇಳುವುದೇ ಇಲ್ಲ. ಇಲಾಖೆಯ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದೇ ಇಲ್ಲ. ಅನೇಕ ಬಾರಿ ಟಿಸಿ ಸುಟ್ಟು ಹೋದರೆ ದುರಸ್ತಿಗಾಗಿ ದಿನಗಟ್ಟಲೇ ಕಾಯಬೇಕಾಗಿದೆ’ ಎಂದು ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟದ ಜಿಲ್ಲಾ ಸಂಚಾಲಕ ಅಜೀಜ್ ಜಾಗೀರದಾರ್ ಹೇಳುತ್ತಾರೆ.

‘ತಾಂತ್ರಿಕ ಸಮಸ್ಯೆ ಪರಿಹಾರ’

‘ಎಲ್‌ಬಿಎಸ್ ನಗರ ಆಶ್ರಯ ಕಾಲೊನಿ ಬಡಾವಣೆ ವೇಗವಾಗಿ ಬೆಳವಣಿಗೆಯಾಗುತ್ತಿದ್ದು ವಿದ್ಯುತ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಲೋಡ್ ಜಾಸ್ತಿಯಾಗಿ ವಿದ್ಯುತ್ ಕಡಿತವಾಗುತ್ತಿದೆ. ಪೊಲೀಸ್‌ ಕಾಲೊನಿ ಶಂಶಾಲಂ ದರ್ಗಾ ವ್ಯಾಪ್ತಿಯ ಕೆಲವು ಭಾಗ ಬೇರ್ಪಡಿಸಲಾಗಿದೆ. ತಾಂತ್ರಿಕ ಸಮಸ್ಯೆ ಸರಿಪಡಿಸಲಾಗುತ್ತಿದೆ’ ಎಂದು ಎಲ್‌ಬಿಎಸ್‌ ನಗರದ ಎಇಇ ವಿನಯಕುಮಾರ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT