ಗುರುವಾರ , ಜೂನ್ 24, 2021
22 °C
ಮೈತ್ರಿ ಚುನಾವಣಾ ಪ್ರಚಾರ ಸಭೆ

ಪ್ರಧಾನಿ ಮೋದಿ ನಂಬಿಕೆ ದ್ರೋಹಿ: ಚಂದ್ರಬಾಬು ನಾಯ್ಡು ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಆಂಧ್ರಪ್ರದೇಶ ರಾಜ್ಯಕ್ಕೆ ಪ್ರತ್ಯೇಕ ಸ್ಥಾನಮಾನ ಸೇರಿದಂತೆ ಹಲವು ಭರವಸೆಗಳನ್ನು ಈಡೇರಿಸುವುದಾಗಿ ಹೇಳಿ ತೆಲುಗು ದೇಶಂ ಪಕ್ಷದ ಬೆಂಬಲ ಪಡೆದು ಪ್ರಧಾನಿಯಾದ ನಂತರ ನರೇಂದ್ರ ಮೋದಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ವಾಗ್ದಾಳಿ ನಡೆಸಿದರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತ್ಯೇಕ ಸ್ಥಾನಮಾನಕ್ಕಾಗಿ 29 ಬಾರಿ ನವದೆಹಲಿಗೆ ಹೋಗಿ ಮನವಿ ಮಾಡಿದರೂ ಮೋದಿ ಅದರ ಬಗ್ಗೆ ಚಕಾರ ಎತ್ತಲಿಲ್ಲ. ಚಾಯ್‍ವಾಲಾ ಎಂದು ಹೇಳಿಕೊಳ್ಳುವ ಮೋದಿ ಐದು ವರ್ಷಗಳ ಕಾಲ ಬರೀ ಸುಳ್ಳುಗಳನ್ನು ಹೇಳುತ್ತಾ, ವಿದೇಶಿ ವ್ಯಾಮೋಹದಿಂದ ವಿದೇಶಗಳನ್ನು ಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸತ್ಯ ಹಾಗೂ ಅಹಿಂಸೆಯನ್ನೆ ಜೀವನ ಪರ್ಯಂತ ಪ್ರತಿಪಾದಿಸಿದ ರಾಷ್ಟ್ರಪಿತ ಮಹಾತ್ಮಗಾಂಧಿ ಹುಟ್ಟಿದ ಗುಜರಾತ್‍ನಲ್ಲಿ ಜನಿಸಿದ ಪ್ರಧಾನಿ ನರೇಂದ್ರ ಮೋದಿ ಪ್ರತಿನಿತ್ಯ ಸುಳ್ಳುಗಳನ್ನು ಸತ್ಯವೆಂದು ಹೇಳಿ ಜನರನ್ನು ನಂಬಿಸಿ ಮೋಸ ಮಾಡುತ್ತಿರುವುದು ದುರ್ದೈವದ ಸಂಗತಿ. ಮೋದಿ ವಿದೇಶಗಳಿಂದ ಕಪ್ಪುಹಣ ತಂದಿಲ್ಲ. ಬಡವರ ಖಾತೆಗೆ ರೂ.15 ಲಕ್ಷ ಹಣ ಹಾಕಿಲ್ಲ. ರೂ.500, 1000 ಮುಖಬೆಲೆ ನೋಟುಗಳನ್ನು ರದ್ದು ಮಾಡಿ ಜನಸಾಮಾನ್ಯರನ್ನು ಸಂಕಟಕ್ಕೆ ದೂಡಿದರು. ಅದರ ಪರಿಣಾಮವಾಗಿ 350ಕ್ಕೂ ಹೆಚ್ಚು ಜನರು ಮೃತಪಟ್ಟರು. ಅವರ ಸಾಂತ್ವನ ಹೇಳುವ ಸೌಜನ್ಯವನ್ನು ಪ್ರಧಾನಿ ತೋರಿಸಲಿಲ್ಲ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇನೆಂದು ಹೇಳುವ ಪ್ರಧಾನಿ ಈ ಚುನಾವಣೆಯಲ್ಲಿ ಟನ್‍ಗಳ ಪ್ರಮಾಣದಲ್ಲಿ ಹೆಲಿಕಾಪ್ಟರ್‍ನಲ್ಲಿ ಹಣ ತಂದು ಹಂಚುತ್ತಿದ್ದಾರೆ. ಇದು ಯಾರ ಹಣ, ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದ ಮೋದಿ ರೈತರ ಆದಾಯ ದುಪ್ಪಟ್ಟ ಮಾಡುವುದಿರಲಿ, ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ಮನುಷ್ಯತ್ವ ತೋರಿಸಲಿಲ್ಲ. ರೈತರ ಸಾಲಮನ್ನಾ ಮಾಡಲಿಲ್ಲ. ನದಿಗಳ ಜೋಡಣೆ ಮಾಡಲಿಲ್ಲ. ಆದರೆ ತಾವು ಗೋದಾವರಿ ಮತ್ತು ಕೃಷ್ಣಾ ನದಿಗಳನ್ನು ಜೋಡಣೆ ಮಾಡಿ ತೋರಿಸಿರುವುದಾಗಿ ಹೇಳಿದಾಕ್ಷಣ ನೆರೆದಿದ್ದ ಜನ ಜಯಘೋಷಗಳೊಂದಿಗೆ ಹರ್ಷೋದ್ಗಾರ ವ್ಯಕ್ತಪಡಿಸಿದರು.

ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ 350 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿಕೆ ಕೊಟ್ಟರು. ಆದರೆ ಪಾಕಿಸ್ತಾನ ಪ್ರಧಾನಿ ಒಬ್ಬರೂ ಸತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ವಿವಿಧ ಸಂಸ್ಥೆಗಳು ದಾಳಿಯಿಂದ ಯಾವುದೇ ಹಾನಿಯಾಗಿಲ್ಲವೆಂದು ನೈಜ ವರದಿ ನೀಡಿವೆ. ಅದೇ ವರದಿಗಳ ಬಗ್ಗೆ ವಿರೋಧ ಪಕ್ಷಗಳು ಮತ್ತು ದೇಶವಾಸಿಗಳು ಹೇಳಿದರೆ ದೇಶದ್ರೋಹಿ ಪಟ್ಟವನ್ನು ಕಟ್ಟುವ ದುಸ್ಥಿತಿ ನಿರ್ಮಾಣ ಮಾಡಲಾಗಿದೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್, ಜೆಡಿಎಸ್, ತೆಲುಗುದೇಶಂ ಮತ್ತಿತರ ವಿರೋಧ ಪಕ್ಷಗಳ ಮುಖಂಡರ ಮನೆಗಳ ಮೇಲೆ ಐಟಿ ದಾಳಿ ನಡೆಸಿ ಹೆದರಿಸುವ ಮೂಲಕ ಅಧಿಕಾರವನ್ನು ಅತಿರೇಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದಾಗ್ಯೂ ಚುನಾವಣಾ ಆಯೋಗದ ಕಮೀಷನರ್ ಏನು ಮಾಡುತ್ತಿದ್ದಾರೆ ಎಂದು ನಾಯ್ಡು ಪ್ರಶ್ನಿಸಿದರು.

ನರೇಂದ್ರ ಮೋದಿ ದೇಶದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಪ್ರಜಾಸತ್ತೆ ನಾಶವಾಗುತ್ತದೆ. ಮುಂದಿನ ದಿನಗಳಲ್ಲಿ ಚುನಾವಣೆಗಳು ನಡೆಯುವುದಿಲ್ಲ. ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಅಪಾಯವಿದೆ. ಕಾರಣ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಕಾಂಗ್ರೆಸ್, ಜೆಡಿಎಸ್, ತೆಲುಗುದೇಶಂ ಮತ್ತಿತರ ಪಕ್ಷಗಳು ದೇಶದಲ್ಲಿ ಮಹಾಘಟ್‍ಬಂಧನ್ ಆಂದೋಲನ ಆರಂಭಿಸಿವೆ. ಆದ್ದರಿಂದ ಹೈದ್ರಾಬಾದ್ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್, ಗುಲ್ಬರ್ಗಾ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲಿಸಿ ಮತ ಹಾಕುವ ಮೂಲಕ ಅಭಿವೃದ್ದಿಪರ ಚಿಂತನೆಯುಳ್ಳ ರಾಹುಲ್‍ಗಾಂಧಿ ಅವರ ಕೈ ಬಲಪಡಿಸಬೇಕು ಎಂದು ಚಂದ್ರಬಾಬು ನಾಯ್ಡು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿದರು. ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಸಿಸಿ ಕಾರ್ಯದರ್ಶಿ ಶೈಲೇಂದ್ರನಾಥ ಸಾಖೆ, ಶಿವರಾಜ ತಂಗಡಗಿ, ಕೆಪಿಸಿಸಿ ಕಾರ್ಯದರ್ಶಿ ರಾಮಚಂದ್ರಭಟ್, ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ, ಕೆಪಿಸಿಸಿ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಕರಿಯಪ್ಪ, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಆರ್‍ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಕಾಳಿಂಗಪ್ಪ ವಕೀಲ, ನಗರಸಭೆ ಮಾಜಿ ಅಧ್ಯಕ್ಷರಾದ ಜಾಫರಅಲಿ ಜಾಗೀರದಾರ್, ಕೆ.ಮರಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವರಾಜ ಹಿರೇಗೌಡರ್, ದುರುಗಪ್ಪ ಗುಡಗಲದಿನ್ನಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ದಢೇಸುಗೂರು, ಮುಖಂಡರಾದ ಜಿ.ಸತ್ಯನಾರಾಯಣ, ಕೆ.ಜಿಲಾನಿಪಾಷಾ, ಬಿ.ಹರ್ಷ, ತಾಳೂರಿ ಸುಬ್ಬಾರಾವ್, ಚಿಟ್ಟೂರಿ ಶ್ರೀನಿವಾಸ, ಬಲೂಸು ಸುಬ್ರಮಣ್ಯಂ, ಲಿಂಗರಾಜ ಹಂಚಿನಾಳ ವೇದಿಕೆಯಲ್ಲಿದ್ದರು. ಹೊಸಳ್ಳಿ ಚನ್ನಬಸವ ನಿರೂಪಿಸಿದರು.

ಕನ್ನಡದಲ್ಲಿ ಭಾಷಣ

ಸಭೆಯಲ್ಲಿ ತಮ್ಮ ಭಾಷಣವನ್ನು ಕಸ್ತೂರಿ ಕನ್ನಡದಲ್ಲಿ ಆರಂಭಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ‘ಸಿಂಧನೂರು ಜನತೆಗೆ ನಮಸ್ಕಾರಗಳು. ತೆಲುಗು-ಕನ್ನಡಿಗರ ಸಂಬಂಧ ಮಧುರ ಮತ್ತು ಅನ್ಯೊನ್ಯವಾದದ್ದು. ಶ್ರೀಕೃಷ್ಣದೇವರಾಯರ ಕಾಲದಿಂದ ಕನ್ನಡಿಗರು ಹಾಗೂ ತೆಲುಗು ಭಾಷಿಕರು ಸಹೋದರರಾಗಿ ಬಾಳಿ ಬದುಕುತ್ತಾ ಬಂದಿದ್ದಾರೆ ಎಂದಾಗ ಸಭೆಯಲ್ಲಿ ಯುವಕರು ಜೈ ಬಾಬು ಜೈ ಜೈ ಬಾಬು ಎಂದು ಘೋಷಣೆ ಕೂಗುತ್ತಾ ಸಂಭ್ರಮಿಸಿದರು.

ಮಾತು ಮುಂದುವರಿಸಿದ ನಾಯ್ಡು ‘ಈ ಬಾರಿ ದೇಶದಲ್ಲಿ ರಾಹುಲ್‍ಗಾಂಧಿ ಪ್ರಧಾನಿಯಾದರೆ ತುಂಗಭದ್ರಾ ಜಲಾಶಯ ಆಂಧ್ರ ಮತ್ತು ಕನ್ನಡಿಗರ ಜೀವನದಿಯಾಗಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ರೈತರ ಎರಡನೇ ಬೆಳೆಗೆ ನೀರು ಸಿಗದಂತಾಗಿದೆ. ಕಾರಣ ಕರ್ನಾಟಕ ಸರ್ಕಾರದೊಂದಿಗೆ ಆಂಧ್ರಪ್ರದೇಶ ಸರ್ಕಾರ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು