ಶುಕ್ರವಾರ, ಡಿಸೆಂಬರ್ 6, 2019
21 °C

ರಾಯಚೂರು | ಹಾಳುಬಿದ್ದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿರುವ ನಗರದ ಬೀಜನಗೇರಾ ಮಾರ್ಗದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ನಿರ್ವಹಣೆಯಿಲ್ಲದೆ ಭೂತ ಬಂಗಲೆಯಾಗುತ್ತಿದೆ!

ಸುತ್ತಲೂ ಎತ್ತರವಾದ ಮುಳ್ಳಿನಪೊದೆಗಳು ಆವರಿಸಿಕೊಂಡಿದ್ದು, ಕಟ್ಟಡದ ಬಣ್ಣ ಮಾಸಿಹೋಗಿದ್ದಲ್ಲದೆ ಅಲ್ಲಲ್ಲಿ ಬಿರುಕು ಬಿಟ್ಟು ಶಿಥಿಲಗೊಂಡಿರುವುದು ಮೇಲ್ನೊಟಕ್ಕೆ ಮನವರಿಕೆ ಆಗುತ್ತದೆ. ನೂರಾರು ವಿದ್ಯಾರ್ಥಿಗಳು ಹಲವು ಸಂಕಷ್ಟಗಳನ್ನು ಎದುರಿಸಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪಾಲಿಟೆಕ್ನಿಕ್‌ ಕಾಲೇಜಿಗೆ ಬಾಲಕ, ಬಾಲಕಿಯರಿಗಾಗಿ ಪ್ರತ್ಯೇಕ ವಸತಿ ನಿಲಯಗಳನ್ನು ನಿರ್ಮಾಣ ಮಾಡಿದ್ದರೂ, ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎನ್ನುವ ಸ್ಥಿತಿ ಇದೆ. 

ವಸತಿ ನಿಲಯಗಳ ಕಾಮಗಾರಿ ಪೂರ್ಣಗೊಂಡು ಐದು ವರ್ಷಗಳಾದರೂ ಕೆಆರ್‌ಐಡಿಎಲ್‌ನಿಂದ ಹಸ್ತಾಂತರವಾಗಿಲ್ಲ. 36 ಎಕರೆ ವಿಶಾಲವಾಗಿರುವ ಕ್ಯಾಂಪಸ್‌, ವಿದ್ಯಾರ್ಥಿಗಳಿಗೆಲ್ಲ ವಿದ್ಯಾಭ್ಯಾಸ ಮಾಡಲು ನೆಮ್ಮದಿಯ ನೆಲೆಯಾಗಿತ್ತು. ಈಗ ಸಮಸ್ಯೆಗಳ ತಾಣವಾಗಿ ಮಾರ್ಪಟ್ಟಿದೆ. ಸೂಕ್ತವಾದ ಆವರಣ ಗೋಡೆ ನಿರ್ಮಿಸಿಕೊಳ್ಳದೆ ಇರುವುದರಿಂದ ಸರ್ಕಾರಿ ಜಾಗದ ಅತಿಕ್ರಮಣ ಶುರುವಾಗಿದೆ.

ಸಿಬ್ಬಂದಿಗಾಗಿ ನಿರ್ಮಿಸಿರುವ ವಸತಿಗೃಹಗಳು ಕೂಡಾ ಹಾಳು ಸುರಿಯುತ್ತಿವೆ. ಕಾಲೇಜಿನ ಕಿಟಕಿ ಗಾಜುಗಳು ಒಡೆದುಹೋಗಿವೆ. ಅವ್ಯವಸ್ಥೆಯ ಮಧ್ಯೆಯೇ ಜಿಲ್ಲೆಯಲ್ಲಿ ಅಸ್ತಿತ್ವ ಕಾಪಾಡಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಏಕೈಕ ಪಾಲಿಟೆಕ್ನಿಕ್‌ ಕಾಲೇಜು ಎಂದು ಗುರುತಿಸಿಕೊಂಡಿದೆ. ಈ ಕಾಲೇಜಿನಲ್ಲಿ ವೃತ್ತಿಪರ ತರಬೇತಿ ಪಡೆದು ದೇಶ, ವಿದೇಶಗಳಲ್ಲಿ ಉದ್ಯೋಗ ಪಡೆದಿರುವ ವಿದ್ಯಾರ್ಥಿಗಳಿದ್ದಾರೆ. ಕಾಲೇಜಿಗೆ ಹಿರಿಮೆ ಸಾಕಷ್ಟಿದ್ದರೂ ಸೌಲಭ್ಯಗಳಿಲ್ಲದ ಸೌಧವಾಗಿ ಉಳಿದುಕೊಂಡಿದೆ.

ಕಟ್ಟಡ ಕಾಮಗಾರಿ ಹಾಗೂ ಇತರೆ ಸೌಕರ್ಯಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಾಲೇಜು ಪ್ರಾಂಶುಪಾಲರು ಸರಣಿ ಪತ್ರಗಳನ್ನು ಬರೆಯುತ್ತಿದ್ದಾರೆ. ಆದರೆ, ಸಕಾರಾತ್ಮಕ ಪ್ರಕ್ರಿಯೆ ಸಿಗುತ್ತಿಲ್ಲ. ಸಮಸ್ಯೆಯನ್ನು ಜಿಲ್ಲೆಯ ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಜಿಲ್ಲಾಡಳಿತವು ಕಾಲೇಜಿನತ್ತ ಗಮನ ಹರಿಸುತ್ತಿಲ್ಲ. ಅನಿವಾರ್ಯವಾಗಿ ಕಾಲೇಜಿನ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ‘ಸರ್ಕಾರಿ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯ’ದಲ್ಲಿ ಆಶ್ರಯ ಪಡೆದುಕೊಂಡು ಓದುತ್ತಿದ್ದಾರೆ.

ಸದ್ಯ ಕಾಲೇಜಿನಲ್ಲಿ ಐದು ಕೋರ್ಸ್‌ಗಳಿದ್ದು, 665 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಪ್ರತಿಕ್ರಿಯಿಸಿ (+)