ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ವಹಿವಾಟಿಗೆ ಭೂಮಿಕೆ: ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ನಗದು ರಹಿತ ವಹಿವಾಟಿಗೆ ಉತ್ತೇಜನ
Last Updated 20 ಜನವರಿ 2020, 16:34 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಡಿಜಿಟಲ್ ವಹಿವಾಟಿಗೆ ಅನುಕೂಲವಾಗುವ ವಾತಾವರಣ ನಿರ್ಮಿಸಲು ಸಂಬಂಧಿಸಿದ ಇಲಾಖೆಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಸಂಪೂರ್ಣ ಡಿಜಿಟಲೈಜೇಷನ್ ಯೋಜನೆ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಿಜಿಟಲ್ ವ್ಯವಹಾರವು ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುತ್ತದೆ. ಇದರಿಂದ ನಗದು ವಹಿವಾಟು ಕಡಿಮೆಯಾಗಲಿದೆ. ಈ ದಿಸೆಯಲ್ಲಿ ನಗದು ರಹಿತ ವಹಿವಾಟಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲಾ ಆಟೋ ಚಾಲಕರಿಗೆ ಕ್ಯೂಆರ್ ಬಾರ್‌ಕೊಡ್ ಒದಗಿಸಬೇಕು. ವಾಣಿಜ್ಯ ವಹಿವಾಟು ನಡೆಸುವ ರೀಟೆಲ್ ಮಳಿಗೆಗಳ ವ್ಯಾಪಾರಕ್ಕೆ ಸ್ವೈಪಿಂಗ್ ಮಿಷನ್ ಕೊಡಿಸಿಕೊಡುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಎಲ್ಲಾ ಕುಟುಂಬದವರು ಯಾವುದಾದರೊಂದು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುತ್ತಾರೆ. ಅಲ್ಲದೇ ಸರ್ಕಾರದಿಂದ ವಿದ್ಯಾರ್ಥಿ ವೇತನ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕೂಡ ಬ್ಯಾಂಕ್ ಖಾತೆ ಇದ್ದೆ ಇರುತ್ತದೆ. ಹಾಗಾಗಿ ಅವರಲ್ಲಿ ನಗದು ರಹಿತ ವ್ಯವಹಾರ ಮಾಡಿದರೆ ಅದರಿಂದಾಗುವ ಅನುಕೂಲತೆಗಳ ಬಗ್ಗೆ ಜಾಗೃತಿ ಮೂಡಿಸಿ, ನಗದು ರಹಿತ ವಹಿವಾಟನ್ನು ಅನುಷ್ಠಾನಗೊಳಿಸುವಂತೆ ತಿಳಿಸಿದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೋಡಲ್ ಅಧಿಕಾರಿ ಪ್ರೇಮ್ ಸಿಂಗ್ ನಾಯಕ್ ಮಾತನಾಡಿ, ಇಂದಿನ ದಿನಮಾನಗಳಲ್ಲಿ ನಗದು ರಹಿತ ವ್ಯವಹಾರ ಮಾಡುವುದು ಅತ್ಯಂತ ಉಪಯುಕ್ತ, ನಗದು ವ್ಯವಹಾರ ಮಾಡುವಾಗ ಉಂಟಾಗುವ ಸಮಸ್ಯೆ ಇಲ್ಲಿ ಕಂಡು ಬರುವುದಿಲ್ಲ. ಅಲ್ಲದೇ ಆದಾಯವೂ ಹೆಚ್ಚಾಗಲಿದ್ದು, ವ್ಯವಹಾರವು ಸುಲಭವಾಗುತ್ತದೆ ಎಂದರು.

ಆರ್‌ಬಿಐನ ಲೀಡ್ ಡಿಸ್ಟಿಕ್ ಆಫೀಸರ್ ಆನಂದ್ ನಿಮ್ ಮಾತನಾಡಿ, ಬ್ಯಾಂಕ್ ಖಾತೆ ಹೊಂದಿರುವ ಎಲ್ಲಾ ಗ್ರಾಹಕರಿಗೂ ಸಂಬಂಧಸಿದ ಬ್ಯಾಂಕುಗಳು ಕಡ್ಡಾಯವಾಗಿ ಎಟಿಎಂ ಕಾರ್ಡ್‌ಗಳನ್ನು ಒದಗಿಸಲೇಬೇಕು. ಎಲ್ಲಾ ನಾಗರಿಕರು ಬ್ಯಾಂಕ್ ಖಾತೆಯನ್ನು ಹೊಂದಬೇಕು ಎಂದು ಹೇಳಿದರು.

ನಬಾರ್ಡ್ ಎಜಿಎಂ ಸತೀಶನ್ ಮಾತನಾಡಿ,ಮುದ್ರಾ ಯೋಜನೆಗೆ ಇದೀಗ ಕೇಂದ್ರ ಸರ್ಕಾರವೂ ಹೆಚ್ಚಿನ ಒತ್ತು ನೀಡಿದ್ದು, ಹೊಸದಾಗಿ ಜಾರಿಗೊಳಿಸಲಾಗಿರುವ ಮುದ್ರಸಾಲ ಯೋಜನೆಯಡಿ ಪಶು ಸಂಗೋಪನೆ ಇಲಾಖೆ ವ್ಯಾಪ್ತಿಯಲ್ಲಿ ₹1 ಲಕ್ಷ ವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಉತ್ತಮ ಫಲಾನುಭವಿಗಳು ದೊರೆತರೆ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲು ಅನುಕೂಲವಾಗುತ್ತದೆ ಈ ನಿಟ್ಟಿನಲ್ಲಿ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರೊಂದಿಗೆ ಚರ್ಚಿಸಿ ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಸ್. ಕುಲಕರ್ಣಿ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಜಿಲ್ಲೆ ಯೋಜನೆಯಡಿ ರಾಯಚೂರು ಆಯ್ಕೆ ಯಾಗಿರುವುದರಿಂದ ವಿವಿಧ ಸೂಚ್ಯಂಕಗಳ ಏರಿಕೆಗೆ ನಿಗಧಿಪಡಿಸಿರುವ ಮಾನದಂಡಗಳ ಉತ್ತೇಜನಕ್ಕೆ ಪ್ರತೀ ತಿಂಗಳು ಪ್ರಗತಿ ಪರಿಶೀಲನೆ ಸಭೆ ನಡೆಯುತ್ತದೆ. ಈ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಅಂಶಗಳನ್ನು ದಾಖಲಿಸಬೇಕು ಹಾಗಾಗಿ ಮಾಹಿತಿ ನೀಡುವಾಗ ನಿಖರವಾಗಿ ನೀಡಬೇಕು. ತಪ್ಪಾಗಿ ನೀಡಿದ್ದಲ್ಲಿ 3ನೇ ವ್ಯಕ್ತಿಯ ತಪಾಸಣಾ ವರದಿಯಲ್ಲಿ ಅದು ಕಂಡುಬರುತ್ತದೆ. ಹಾಗಾಗಿ ನಿಖರ ಮಾಹಿತಿ ನೀಡುವಂತೆ ಅವರು ಎಲ್ಲಾ ಬ್ಯಾಂಕರುಗಳಿಗೆ ತಾಕೀತು ಮಾಡಿದರು.

ಜಿಲ್ಲೆಯಲ್ಲಿ 70ಕ್ಕೂ ಅಧಿಕ ಹಾಲು ಸಹಕಾರ ಸೊಸೈಟಿಗಳನ್ನು ರಚಿಸಿದರೇ ಉದ್ಯೋಗ ದೊರೆಯಲಿದ್ದು, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಲು ಸೂಚಿಸಿದರು.

ಪ್ರೊಬೇಷನರಿ ಐಎಎಸ್ ಅಧಿಕಾರಿ ಯತೀಶ್ ಕುಮಾರ್, ಪ್ರಗತಿ ಕೃಷ್ಣ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಕೋಟ್ರಾ ನಾಯಕ್, ರಾಯಚೂರು ಅಂಚೆ ಇಲಾಖೆಯ ಮುಖ್ಯಸ್ಥ ಸೇತು ಮಾದವನ್ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಮ್ಯಾನೇಜರ್‌ಗಳು ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT