ರಾಯಚೂರು: ತಾಲ್ಲೂಕಿನ ಬಿಜನಗೇರಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ 2023-2024 ಹಾಗೂ 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯಡಿಯಲ್ಲಿ ಕಾಮಗಾರಿ ನಿರ್ವಹಿಸದೇ ಅನುದಾನ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಜಾಗೃತಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒಗೆ ಮನವಿ ಸಲ್ಲಿಸಿದರು. ರಾಯಚೂರು ತಾಲ್ಲೂಕಿನ ಬಿಜನಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲ ಕಾಮಗಾರಿಗಳನ್ನೇ ಮಾಡಿಲ್ಲ. ಬೋಗಸ್ ಬಿಲ್‌ಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.
ಬಿಜನಗೇರಾ ಪಿಡಿಒ ಹಾಗೂ ಅಧ್ಯಕ್ಷರು ಸೇರಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 15ನೇ ಹಣಕಾಸಿನ ಯೋಜನೆಯ ಕಾಮಗಾರಿಗಳಲ್ಲೂ ಅವ್ಯವಹಾರ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು. ಪಿಡಿಒ ವರ್ಗಾವಣೆ ಮಾಡಬೇಕು. ನರೇಗಾ ಯೋಜನೆಯಡಿ ಎರಡು ವರ್ಷಗಳಿಂದ ನಡೆದ ಎಲ್ಲ ಕಾಮಗಾರಿಗಳ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜಾಧ್ಯಕ್ಷ ಅಬ್ರಾಹಂ ಜಾಗೀರಪನ್ನೂರು, ಜಿಲ್ಲಾ ಘಟಕದ ಉಪಾಧ್ಯಕ್ಷ ರಾಜೇಂದ್ರ, ದೇವೇಂದ್ರ ಯಾದವ, ಪದಾಧಿಕಾರಿಗಳಾದ ಕೃಷ್ಣಶಾಸ್ತ್ರೀ, ಎಸ್.ರವಿ ಹಾಗೂ ಪ್ರಶಾಂತ್ ಗುಡಹಾಳ ಪಾಲ್ಗೊಂಡಿದ್ದರು