ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

Last Updated 8 ಮೇ 2022, 4:08 IST
ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಪರಿಶಿಷ್ಟರು ವಾಸಿಸುವ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು, ರಸ್ತೆ, ವಿದ್ಯುತ್‍ ಸಂಪರ್ಕ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಕೃಷ್ಣಪ್ಪ)ಯ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಬಳಿಕ ಶಾಸಕ ಡಿ.ಎಸ್‍ ಹೂಲಗೇರಿ ಅವರಿಗೆ ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ಪರಿಶಿಷ್ಟರ ಕೇರಿ, ದೊಡ್ಡಿ ಪ್ರದೇಶಗಳ ನಿವಾಸಿಗಳು ಅಗತ್ಯ ಸೌಲಭ್ಯ ಪಡೆಯಲು ಪರದಾಡುವುದು ಸಾಮಾನ್ಯವಾಗಿದೆ. ತಾಲ್ಲೂಕು ಮಟ್ಟದ ಮತ್ತು ಗ್ರಾಮ ಪಂಚಾಯಿಸಿ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾನಿರತರು
ಆರೋಪಿಸಿದರು.

ಕೃಷ್ಣಾ ಪ್ರವಾಹದ ನಡುಗಡ್ಡೆ ಪ್ರದೇಶಗಳ ಕರಕಲಗಡ್ಡಿ, ಮ್ಯಾದರಗಡ್ಡಿ, ವಕ್ಕಂಗಡ್ಡಿ ಸೇರಿದಂತೆ ಯರಗೋಡಿ ಪರಿಶಿಷ್ಟ ಕುಟುಂಬಗಳ ಸ್ಥಳಾಂತರ ಕೆಲಸ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಅಧಿಕಾರಿಗಳು ಸಹ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ವರ್ಷಕ್ಕೊಂದು ಸಮಸ್ಯೆ ಮುಂದಿಟ್ಟುಕೊಂಡು ಆಡಳಿತ ವ್ಯವಸ್ಥೆ ಕೆಲವರ ಮಾತು ಕೇಳಿ ಒಕ್ಕಲೆಬ್ಬಿಸುತ್ತ ಬಂದಿದೆ. ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಗುರುಗುಂಟಾ, ಗೌಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ದೊಡ್ಡಿ, ಕೇರಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಪಿಡಿಒಗಳನ್ನು ವರ್ಗಾವಣೆ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಪರಿಶಿಷ್ಟರಿಗೆ ಉದ್ಯೋಗ ಕಲ್ಪಿಸಿಕೊಡಬೇಕು. ವ್ಯಾಕರನಾಳ ಗುಡ್ಡದ ಮಾರ್ಗದಿಂದ ರಸ್ತೆ ಸಂಪರ್ಕ ಒದಗಿಸುವಂತೆ ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಹನುಮಂತಪ್ಪ ವೆಂಕಟಾಪುರ, ಪದಾಧಿಕಾರಿಗಳಾದ ಶರಣಪ್ಪ ಕಟ್ಟಿಮನಿ, ಆಜಪ್ಪ ಕರಡಕಲ್ಲ, ಬಸವರಾಜ ಬಂಕದಮನಿ, ಶೇಖರಪ್ಪ ಅಮೀನಗಡ, ಹನುಮಂತ ಆಶಿಹಾಳ, ಮೌನೇಶ ಸುಲ್ತಾನಪುರ, ಹನುಮಂತ ಮೆದಿಕಿನಾಳ, ತಿಮ್ಮಣ್ಣ ನಾಯಕ, ಜಯಪ್ಪ ಮೆದಿಕಿನಾಳ, ಲಕ್ಕಪ್ಪ ನಾಗರಹಾಳ, ದಾನಪ್ಪ ಮೆದಿಕಿನಾಳ, ಹನುಮಂತ ವ್ಯಾಕರನಾಳ, ವಿರೇಶ ವ್ಯಾಕರನಾಳ, ಹನುಮಂತ ಕಾರಲಕುಂಟಿ, ಛತ್ರಪ್ಪ ನಾಗಲಾಪುರ ಇದ್ದರು.

ನರೇಗಾ; ಕೆಲಸದ ಸಮಯ ಬದಲಾವಣೆಗೆ ಒತ್ತಾಯ

ರಾಯಚೂರು: ನರೇಗಾ ಕೆಲಸದ ಅವಧಿಯನ್ನು ಮಧ್ಯಾಹ್ನ 2ಕ್ಕೆ ನಿಗದಿ ಮಾಡಿದ್ದನ್ನು ಖಂಡಿಸಿ ಅಖಿಲ ಭಾರತ ರೈತ–ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್ ) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಈಚೆಗೆ ಆದೇಶ ಹೊರಡಿಸಿ ಆ್ಯಪ್ ಮೂಲಕ ನರೇಗ ಕೆಲಸವನ್ನು ನಿತ್ಯ ಬೆಳಿಗ್ಗೆ 11ರೊಳಗೆ ಹಾಗೂ ಮಧ್ಯಾಹ್ನ 2ರಿಂದ 5ರೊಳಗೆ ಫೋಟೋ ಹಾಕುವಂತೆ ತಿಳಿಸಿದೆ. ನರೇಗಾದ ಬಹುತೇಕ ಕಾರ್ಮಿಕರು ಅನಕ್ಷರಸ್ಥರಾಗಿದ್ದು ಆ್ಯಪ್ ಬಳಸಲು ಆಗುತ್ತಿಲ್ಲ. ಜಿಲ್ಲೆಯಲ್ಲಿ 40ರಿಂದ 42 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿಕೆಲಸದ ಅವಧಿಯನ್ನು ಮಧ್ಯಾಹ್ನ 2ರ ವರೆಗೆ ಹೆಚ್ಚಿಸಿದ್ದು ಖಂಡನೀಯ. ಬಿಸಿಲಿನಿಂದ ಬಳಲುವ ಕಾರ್ಮಿಕರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ದೂರಿದರು.

ಕೂಡಲೇ ಕೆಲಸದ ಅವಧಿಯಲ್ಲಿ ತಗ್ಗಿಸಿ ಮೊದಲಿನಂತೆ ಅವಧಿ ನಿಗದಿ ಮಾಡಬೇಕು. ಆ್ಯಪ್ ಫೋಟೋ ಹಾಕುವ ನಿಯಮ ಹಿಂಪಡೆಯಬೇಕು. ಕೂಲಿ ಮೊತ್ತಕಡಿತಗೊಳಿಸದೆ ಪಾವತಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ, ಅಂಚೆಹೊಸೂರು, ಜಿಲ್ಲಾಧ್ಯಕ್ಷ ಜಮಾಲುದ್ದೀನ್, ಪದಾಧಿಕಾರಿ ಚನ್ನಬಸವ ಜಾನೇಕಲ್, ಕಾರ್ತಿಕ್, ಮಲ್ಲಿಕಾರ್ಜುನ, ವೆಂಕಟೇಶ, ಮಹಮ್ಮದ್ ಅಲಿ, ಆದೆಪ್ಪ, ಉರುಕುಂದ, ರಮೇಶ, ಯಂಕಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT