ಮಂಗಳವಾರ, ಆಗಸ್ಟ್ 3, 2021
24 °C
ಪ್ರತಿಶತ ಫಲಿತಾಂಶದಲ್ಲಿ ಬದಲಾವಣೆ ಆಗಿಲ್ಲ

ಪಿಯು ಫಲಿತಾಂಶ: ಜಿಲ್ಲೆ 4 ಸ್ಥಾನ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದ್ವಿತೀಯ ವರ್ಷದ ಪದವಿ ಪೂರ್ವ ಕಾಲೇಜು ಫಲಿತಾಂಶ ಸಾಧನೆಯಲ್ಲಿ ಜಿಲ್ಲೆಯು ಸತತ ಎರಡನೇ ವರ್ಷವೂ ಕುಸಿತವಾಗಿದೆ. ಇತರೆ ಜಿಲ್ಲೆಗಳ ಫಲಿತಾಂಶ ಸಾಧನೆಗಳ ಪಟ್ಟಿಯಲ್ಲಿ 2019-20ನೇ ವರ್ಷ 31 ನೇ ಸ್ಥಾನದಲ್ಲಿ ರಾಯಚೂರಿದೆ. 2018-19 ನೇ ಸಾಲಿನ ಫಲಿತಾಂಶದಲ್ಲಿ ಜಿಲ್ಲೆಯು 27 ನೇ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು.

2017-18 ನೇ ಸಾಲಿನಲ್ಲಿ ಜಿಲ್ಲೆ 26 ನೇ ಸ್ಥಾನದಲ್ಲಿತ್ತು. ಪ್ರತಿಶತ ಸಾಧನೆಯಲ್ಲಿ ಮೂರು ವರ್ಷವೂ ಶೇ 56 ರಲ್ಲಿ ಸ್ಥಿರವಾಗಿರುವುದು ಗಮನಾರ್ಹ. ಈ ವರ್ಷ ಶೇ 56.22 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಿಂದಿನ ವರ್ಷದ ಸಾಧನೆಗೆ ಹೋಲಿಕೆ ಮಾಡಿದರೆ ಶೇ 0.51 ರಷ್ಟು ಫಲಿತಾಂಶ ಕಡಿಮೆ ಬಂದಿದೆ. ಮೂರು ವರ್ಷಗಳಿಂದ ಪ್ರತಿಶತ ಫಲಿತಾಂಶವು ಶೇ 56 ರಲ್ಲಿಯೇ ಸ್ಥಿರವಾಗಿದೆ.

ಪುನರಾವರ್ತಿತ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಜಿಲ್ಲೆಯಲ್ಲಿ ಒಟ್ಟು 20,322 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 9,392 (ಶೇ 46.22) ವಿದ್ಯಾರ್ಥಿಗಳಷ್ಟೇ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಶೇ 56.47 ರಷ್ಟು ವಿದ್ಯಾರ್ಥಿಯರೆ ಉತ್ತೀರ್ಣರಾಗಿ ಮೇಲುಗೈ ಸಾಧಿಸಿದ್ದಾರೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಶೇ 61.15 ಪಾಸಾಗಿರುವ ಇಂಗ್ಲಿಷ್‌ ಮಾಧ್ಯಮದವರು ಮುಂದಿದ್ದಾರೆ.

ಪರೀಕ್ಷೆ ಬರೆದಿದ್ದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಲ್ಲಿ ಶೇ 41.37 ರಷ್ಟು ಮತ್ತು ಪರಿಶಿಷ್ಟ ಪಂಗಡದಲ್ಲಿ ಶೇ 40.59, ಪ್ರವರ್ಗ–1 ರಲ್ಲಿ ಶೇ 41, ಪ್ರವರ್ಗ–2ಎಯಲ್ಲಿ ಶೇ 50.36, ಪ್ರವರ್ಗ–2ಬಿಯಲ್ಲಿ ಶೇ 46.2, ಪ್ರವರ್ಗ–3ಎದಲ್ಲಿ ಶೇ 62.52, ಪ್ರವರ್ಗ–3ಬಿ ಶೇ 56.92, ಸಾಮಾನ್ಯ ಶೇ 51.81 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದು ಪಾಸಾಗಿರುವ ಒಟ್ಟು ವಿದ್ಯಾರ್ಥಿಗಳ ಅಂಕಿ–ಅಂಶಗಳನ್ನು ಹೋಲಿಸಿದಾಗ, ವಿಜ್ಞಾನ ವಿಭಾಗದವರು ಶೇ 65. 9 ಉತ್ತೀರ್ಣರಾಗುವ ಮೂಲಕ ಮುಂಚೂಣಿಯಲ್ಲಿದ್ದಾರೆ. ವಾಣಿಜ್ಯದಲ್ಲಿ ಶೇ 54.89 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ 35.86 ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದಾರೆ. ಪ್ರತಿ ವಿಭಾಗದಲ್ಲೂ ಪಾಸಾದ ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿಯರದ್ದೆ ಮೇಲುಗೈ ಇದೆ.

ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಗರದ ವಿದ್ಯಾರ್ಥಿಗಳಿಗಿಂತ ಪ್ರತಿಶತ ಹೆಚ್ಚು ಪಾಸಾಗಿದ್ದಾರೆ. ಪರೀಕ್ಷೆ ಬರೆದಿದ್ದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪೈಕಿ ಶೇ 46.42 ರಷ್ಟು ಪಾಸಾಗಿದ್ದಾರೆ. ಪರೀಕ್ಷೆ ಬರೆದಿದ್ದ ನಗರದ ವಿದ್ಯಾರ್ಥಿಗಳ ಪೈಕಿ ಶೇ 45.43 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪಿಯುಸಿ ವಿಜ್ಞಾನ ಕನ್ನಡ ಮಾಧ್ಯಮದಲ್ಲಿ ಎಂಟು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಬರೆದಿದ್ದರು. ಅದರಲ್ಲಿ ಮೂವರು ಉತ್ತೀರ್ಣರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.