ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ರಾಯಚೂರಿನಲ್ಲಿ ರಾಹುಲ್‌ ರ‍್ಯಾಲಿ

ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ 50 ಸಾವಿರ ಜನ ಭಾಗಿ ನಿರೀಕ್ಷೆ
Last Updated 18 ಏಪ್ರಿಲ್ 2019, 12:00 IST
ಅಕ್ಷರ ಗಾತ್ರ

ರಾಯಚೂರು: ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಏಪ್ರಿಲ್‌ 19 ರಂದು ಮಧ್ಯಾಹ್ನ 2 ಗಂಟೆಗೆ ರಾಯಚೂರಿಗೆ ಬರುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜು ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯ ಜಿಂದಾಲ್‌ ವಿಮಾನ ಬಿಲ್ದಾಣಕ್ಕೆ ಬಂದು ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ರಾಹುಲ್‌ ಗಾಂಧಿ ಬರುತ್ತಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಭಾಗವಹಿಸಲಿದ್ದು, ಕಾರ್ನೂಲ್‌ ಮೂಲಕ ಬರುತ್ತಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌. ಮುನಿಯಪ್ಪ, ವೀರಪ್ಪ ಮೊಯ್ಲಿ, ಸಚಿವ ವೆಂಕಟರಾವ್‌ ನಾಡಗೌಡ ಭಾಗವಹಿಸುವರು ಎಂದರು.

ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಈಗಾಗಲೇ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿದೆ. 50 ಸಾವಿರ ಜನರು ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆಯಾಗಿದೆ ಎಂದು ತಿಳಿಸಿದರು.

‘ರಾಜಕೀಯದಲ್ಲಿ ವೈಯಕ್ತಿಕ ಟೀಕೆ ಒಳ್ಳೆಯದಲ್ಲ ಎಂದು ಶಾಸಕ ಶಿವನಗೌಡ ನಾಯಕ ಅವರು ಸಿರವಾರದಲ್ಲಿ ಮಾಡಿದ್ದ ಭಾಷಣದ ಬಗ್ಗೆ ಹೇಳಿದರು. ಆ ಮಟ್ಟಕ್ಕಿಳಿದು ಚಾರಿತ್ರ್ಯವಧೆ ಹೇಳಿಕೆಯನ್ನು ನಾವೂ ನೀಡಬಹುದು. ಆದರೆ, ವೈಯಕ್ತಿಕ ಟೀಕೆಯನ್ನು ಕಾಂಗ್ರೆಸ್‌ ನಾಯಕರು ಮಾಡುವುದಿಲ್ಲ. ಯಾರೂ ಈ ರೀತಿ ಮಾತುಗಳನ್ನಾಡುತ್ತಾರೆ. ಅದನ್ನು ಜನರು ಗಮನಿಸುತ್ತಾರೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಮಾತನಾಡಿ, ‘ಚುನಾವಣೆ ಆಯೋಗಕ್ಕೆ ಬಿಜೆಪಿ ನಾಯಕರು ನೀಡಿರುವ ದೂರುಗಳ ಬಗ್ಗೆ ತಲೆಕಡಿಸಿಕೊಳ್ಳುವುದಿಲ್ಲ. ಹೇಳಿಕೆಗಳನ್ನು ತಿರುಚುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ನಾನು ಮಾತನಾಡಿದ ಸಂಪೂರ್ಣ ರೆಕಾರ್ಡಿಂಗ್‌ ನನ್ನ ಬಳಿ ಇದೆ. ಚುನಾವಣೆ ಆಯೋಗಕ್ಕೆ ಸಮರ್ಪಕ ಉತ್ತರವನ್ನು ಸಂದರ್ಭ ಬಂದಾಗ ಒದಗಿಸುತ್ತೇನೆ’ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಣ್ಣ ಇರಬಗೇರಾ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಎಂ.ವಿರೂಪಾಕ್ಷಿ, ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶಗೌಡ ಪಾಟೀಲ ಅತ್ತನೂರು, ನಗರಸಭೆ ಸದಸ್ಯ ಜಯಣ್ಣ, ಮುಖಂಡರಾದ ಪಾರಸಮಲ್‌ ಸುಖಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT