ಭಕ್ತರ ಮನಸ್ಸಿಗೆ ಮುದ ನೀಡುವ ತಾಣ

7
ಕಾಯಕದ ಮಹತ್ವ ತಿಳಿಸುವ ಇರಕಲ್‍ ಶಿವಶಕ್ತಿ ಪೀಠ

ಭಕ್ತರ ಮನಸ್ಸಿಗೆ ಮುದ ನೀಡುವ ತಾಣ

Published:
Updated:

ಕವಿತಾಳ: ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಪಾರಂಪರಿಕ ವೈದ್ಯ ಚಿಕಿತ್ಸೆ, ಕೃಷಿ ಮತ್ತು ಉಪ ಕಸುಬಗಳು ಸೇರಿದಂತೆ ಹತ್ತು ಹಲವು ಭಿನ್ನ ಚಟುವಟಿಕೆಗಳ ಮೂಲಕ ಸಮೀಪದ ಇರಕಲ್‍ ಶಿವಶಕ್ತಿ ಪೀಠ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

12 ವರ್ಷಗಳ ಹಿಂದೆ ಒಣ ಬೇಸಾಯಕ್ಕೆ ಸೀಮಿತವಾಗಿದ್ದ ಜಮೀನು ಪ್ರಸ್ತುತ ವಿವಿಧ ಗಿಡ ಮರಗಳು ಮತ್ತು ಔಷಧೀಯ ಸಸ್ಯಗಳು ಸೇರಿದಂತೆ ಹಸಿರಿನಿಂದ ಕಂಗೊಳಿಸುತ್ತಿದೆ. ಪ್ರತಿ ಅಮಾವಾಸ್ಯೆಯಂದು ನಡೆಯುವ ‘ಸುಜ್ಞಾನ ಸಂಗಮ’ ಕಾರ್ಯಕ್ರಮ ಭಕ್ತರಿಗೆ ಆಧ್ಯಾತ್ಮಿಕ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಸಾಮೂಹಿಕ ವಿವಾಹ ಸಮಾರಂಭ, ಜಾನಪದ ವೈವಿಧ್ಯಗಳ ಪ್ರದರ್ಶನ ಹಾಗೂ ಸಿರಿಧಾನ್ಯ ಮೇಳ ಏರ್ಪಡಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಕಲ್ಪಿಸುತ್ತಿದೆ.

ಶಿವರಾತ್ರಿ ಹಬ್ಬದ ನಂತರ 9ನೇ ದಿನ ನಡೆಯುವ ಜಾತ್ರಾ ಮಹೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಾಧಕರಿಗೆ ‘ಕಾಯಕ ಶ್ರೇಷ್ಠ, ರೈತ ರತ್ನ, ಪಾರಂಪರಿಕ ವೈದ್ಯ ರತ್ನ, ವೀರಯೋಧ, ಕೃಷಿಕ ದಂಪತಿ, ಶರಣ ದಂಪತಿ, ಸೇರಿದಂತೆ 10 ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.

ಇಲ್ಲಿನ ಒಂದೂವರೆ ಎಕರೆ ಪ್ರದೇಶದಲ್ಲಿ ವಿವಿಧ ಗಿಡ ಮರಗಳು, ಔಷಧೀಯ ಸಸ್ಯಗಳು ಸೇರಿದಂತೆ ಈ ಭಾಗದಲ್ಲಿ ಅಪರೂಪ ಎನ್ನುವಂತ ಕೆಂಪು ಕಬ್ಬನ್ನು ಸಹಿತ ಬೆಳೆಸಲಾಗಿದೆ. ಗೋ ಶಾಲೆಯಲ್ಲಿ 10-15 ಹಸು ಮತ್ತು ಎಮ್ಮೆಗಳಿವೆ, ಮೊಲ ಸಾಕಾಣಿಕೆ ಮಾಡಲಾಗಿದೆ.

ಇಲ್ಲಿನ ಜ್ಞಾನಕ್ಷಿ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 250ಕ್ಕೂ ಹೆಚ್ಚು ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ವಸತಿ ಸಹಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ. ಅನಾಥ ಮಕ್ಕಳಿಗಾಗಿ ವಿಶೇಷ ಶಾಲೆಯನ್ನು ತೆರೆಯಲಾಗಿದೆ. ಉತ್ತಮ ನೈಜ ಪರಿಸರದಲ್ಲಿ ಮಕ್ಕಳಿಗೆ ಗುರುಕುಲ ಮಾದರಿಯ ಶಿಕ್ಷಣ ನೀಡಲಾಗುತ್ತಿದೆ. ಮಠದ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ರಾಜ್ಯ ಸರ್ಕಾರ ಮಠದ ಅಭಿವೃದ್ಧಿಗೆ ಬಜೆಟ್‍ನಲ್ಲಿ ₹ 1 ಕೋಟಿ ಅನುದಾನ ಘೋಷಣೆ ಮಾಡಿದೆ. ಮಠದ ಬೆಳವಣಿಗೆಗೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ನೀಡಿದ ಸಹಕಾರ ಸ್ಮರಣೀಯ ಎನ್ನುತ್ತಾರೆ ಬಸವಪ್ರಸಾದ ಸ್ವಾಮೀಜಿ.

ಸಮಗ್ರ ಕೃಷಿ ಪದ್ಧತಿ ಮತ್ತು ಅರಣ್ಯ ಕೃಷಿ ಬಗ್ಗೆ ಈ ಭಾಗದ ರೈತರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಜಮೀನಿನಲ್ಲಿ ಸಣ್ಣ ಪ್ರಮಾಣದಲ್ಲಿ ವಿವಿಧ ರೀತಿಯ ಹಣ್ಣಿನ ಗಿಡಗಳು ಮತ್ತು ಸಿರಿಧಾನ್ಯ ರಾಜ್ಯದ ವಿವಿಧೆಡೆ ಬೆಳೆಯುವಂತ ಅಪರೂಪದ ಬೆಳೆಗಳನ್ನು ಬೆಳೆದು ಮಾದರಿಯಾಗಿಸುವ ಗುರಿ ಹೊಂದಲಾಗಿದೆ ಎಂದು ಮಠದ ಭಕ್ತ ಸೂಗಪ್ಪ ಚಿಲ್ಕರಾಗಿ ತಿಳಿಸುತ್ತಾರೆ.

*
ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಬೇಕು, ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ.
-ಬಸವ ಪ್ರಸಾದ ಸ್ವಾಮೀಜಿ (ಇರಕಲ್‍ ಶಿವಶಕ್ತಿ ಪೀಠ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !