ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ನಗರಸಭೆ ಸೂಪರ್‌ಸೀಡ್‌ಗೆ ಆಗ್ರಹ

Last Updated 17 ಜೂನ್ 2022, 12:32 IST
ಅಕ್ಷರ ಗಾತ್ರ

ಸಿಂಧನೂರು: ಕಲುಷಿತ ನೀರು ಪೂರೈಸುವ ಮೂಲಕ ಏಳು ಜನರ ಸಾವಿಗೆ ಮತ್ತು 60ಕ್ಕೂ ಹೆಚ್ಚು ಜನರು ಅಸ್ವಸ್ಥಗೊಳ್ಳಲು ಕಾರಣವಾದ ರಾಯಚೂರು ನಗರಸಭೆಯನ್ನು ಸೂಪರ್‌ಸೀಡ್‌ ಮಾಡಬೇಕು. ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಪಿಐ (ಎಂಎಲ್) ಲಿಂಬರೇಷನ್ ವತಿಯಿಂದ ಶುಕ್ರವಾರ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರಾಯಚೂರು ನಗರಸಭೆಯಿಂದ ಕಳೆದ 15 ದಿನಗಳ ಹಿಂದೆ ಸ್ಲಂ ಪ್ರದೇಶ ಸೇರಿದಂತೆ ವಿವಿಧ ವಾರ್ಡ್‍ಗಳಲ್ಲಿ ಪೂರೈಕೆಯಾದ ಕಲುಷಿತ ನೀರು ಕುಡಿದು 60ಕ್ಕೂ ಹೆಚ್ಚು ಜನರು ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಇನ್ನೂ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ನೋವು ಸಂಭವಿಸುವ ಸಾಧ್ಯತೆಯಿದೆ. ಇದರಿಂದ ಕುಟುಂಬಗಳು ಆತಂಕದಲ್ಲಿವೆ ಎಂದರು.

ಓವರ್ ಹೆಡ್ ಟ್ಯಾಂಕ್ ಸೇರಿದಂತೆ ನೀರಿನ ಮೂಲಗಳನ್ನು ಕಳೆದ 20 ವರ್ಷಗಳಿಂದ ಸ್ವಚ್ಛಗೊಳಿಸದಿರುವುದು ರಾಯಚೂರು ನಗರಸಭೆಯ ನಾಚಿಕೆಗೇಡಿನ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಸಿಪಿಐ (ಎಂಎಲ್) ಲಿಂಬರೇಷನ್ ರಾಯಚೂರು ಜಿಲ್ಲಾ ಘಟಕದ ಸದಸ್ಯ ನಾಗರಾಜ ಪೂಜಾರ್ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲೆಂದರಲ್ಲಿ ಒಡೆದ ನೀರಿನ ಪೈಪ್‍ಲೈನ್‍ಗಳು, ಹೆಚ್ಚುತ್ತಿರುವ ಸೋರಿಕೆ, ಪೈಪ್‍ಲೈನ್‍ನಲ್ಲಿ ಚರಂಡಿ ನೀರು ಸೇರ್ಪಡೆ, ಓವರ್‌ಹೆಡ್‌ ಟ್ಯಾಂಕ್‍ಗಳ ಅಸ್ವಚ್ಛತೆ, ಪೂರೈಕೆಯಾಗುತ್ತಿರುವ ನೀರಿನ ಮಾದರಿಗಳ ಪರೀಕ್ಷೆ ಸಕಾಲಕ್ಕೆ ಆಗದಿರುವುದು. ಹೀಗೆ ಹತ್ತು ಹಲವು ಸಮಸ್ಯೆಗಳಿದ್ದರೂ ಕನಿಷ್ಠ ಈ ಬಗ್ಗೆ ನಗರಸಭೆ ಆಡಳಿತ ಮಂಡಳಿ ಕಾಳಜಿ ವಹಿಸದೇ ಇರುವುದು ದುರಂತಕ್ಕೆ ಕಾರಣವಾಗಿದೆ ಎಂದು ದೂರಿದರು.

ಕಲುಷಿತ ನೀರು ಕುಡಿದು ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ ₹ 50 ಲಕ್ಷ ಪರಿಹಾರ ನೀಡಬೇಕು. ರಾಯಚೂರು ನಗರಸಭೆಯ ಎಲ್ಲ ವಾರ್ಡ್‍ಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು. ಪೂರೈಸುವ ನೀರಿನ ಮಾದರಿಗಳನ್ನು ಪ್ರತಿದಿನವೂ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಸಮಿತಿ ಸದಸ್ಯ ಪಿ.ಪಿ.ಅಪ್ಪಣ್ಣ ಬೆಂಗಳೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT