ಭಾನುವಾರ, ಮಾರ್ಚ್ 26, 2023
24 °C

ಕ್ರೀಡೆಗಳು ಉತ್ಸಾಹ ಹೆಚ್ಚಿಸುತ್ತವೆ: ಎಸ್‌ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕ್ರೀಡೆಗಳು ಉತ್ಸಾಹವನ್ನು ಹೆಚ್ಚಿಸುತ್ತವೆ. ಒತ್ತಡದ ಕೆಲಸದ ಮಧ್ಯೆಯೂ ಪತ್ರಕರ್ತರು ಕ್ರಿಕೆಟ್‌ ಪಂದ್ಯ ಆಡುತ್ತಿರುವುದು ಸಂತೋಷದ ಸಂಗತಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಹೇಳಿದರು.

ನಗರದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ರಾಯಚೂರು ರಿಪೋರ್ಟರ್ಸ್‌ ಗಿಲ್ಡ್‌ನಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರು ಒಂದೇ ಕಡೆಗೆ ಸ್ನೇಹಿತರಾಗಿ ಸೇರಿ ಆಟವಾಡುವುದು ನಿಜಕ್ಕೂ ಖುಷಿಯ ವಿಚಾರ. ಆಟದಲ್ಲಿ ಸೋಲು, ಗೆಲುವು ಸಹಜ. ಅದನ್ನು ಮುಖ್ಯವಾಗಿ ತೆಗೆದುಕೊಳ್ಳಬಾರದು. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಮಹತ್ವದ್ದಾಗಿದೆ. ಇದನ್ನು ಹೀಗೇ ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ರಾಜಣ್ಣ ಅವರು ಮಾತನಾಡಿ, ದಿನಕ್ಕೊಂದು ತಾಸು ವ್ಯಾಯಾಮ; ದಿನವಿಡೀ ಆರಾಮ ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೈಹಿಕವಾಗಿ ಸದೃಢವಾಗಿದ್ದರೆ ಮನಸ್ಸು ಕೂಡಾ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಿದರು.

ರಾಯಚೂರು ರಿಪೋರ್ಟ್‌ರ್ಸ್‌ ಗಿಲ್ಡ್‌ ಕಾರ್ಯದರ್ಶಿ ವಿಜಯ ಜಾಗಟಗಲ್‌ ಸ್ವಾಗತಿಸಿದರು. ಗಿಲ್ಡ್‌ ಅಧ್ಯಕ್ಷ ಚನ್ನಬಸವಣ್ಣ, ಪತ್ರಕರ್ತರಾದ ವೆಂಕಟಸಿಂಗ್‌, ಬಸವರಾಜ ನಾಗಡಗಿನ್ನಿ, ಶಿವಮೂರ್ತಿ ಹಿರೇಮಠ ಇದ್ದರು.

ಅನಿಲ ಕುಂಬ್ಳೆ ತಂಡಕ್ಕೆ ಗೆಲುವು: ಬಸವರಾಜ ನಾಗಡದಿನ್ನಿ ನಾಯಕತ್ವದ ‘ರಾಹುಲ್‌ ದ್ರಾವಿಡ್‌ ತಂಡ’, ವೆಂಕಟಸಿಂಗ್‌ ನಾಯಕತ್ವದ ‘ಸುನೀಲ ಗವಾಸ್ಕರ್‌ ತಂಡ’ ಹಾಗೂ ಚನ್ನಬಸವಣ್ಣ ನಾಯಕತ್ವದ ‘ಅನಿಲ ಕುಂಬ್ಳೆ ತಂಡ’ ತಂಡಗಳ ಮಧ್ಯೆ 8 ಓವರ್‌ಗಳ ಪಂದ್ಯಾವಳಿಗಳು ನಡೆದವು. ಅನಿಲ ಕುಂಬ್ಳೆ ತಂಡವು ಎರಡೂ ತಂಡಗಳ ವಿರುದ್ಧ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆಯಿತು. ಸುನೀಲ ಗವಾಸ್ಕರ್‌ ತಂಡದ ವಿರುದ್ಧ ಗೆಲುವು ಸಾಧಿಸಿದ ರಾಹುಲ್‌ ದ್ರಾವಿಡ್‌ ತಂಡವು ಎರಡನೇ ಸ್ಥಾನ ಪಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.