ಶನಿವಾರ, ನವೆಂಬರ್ 28, 2020
24 °C

ಭೌತಿಕ, ಬೌದ್ಧಿಕ ಎರಡೂ ರೀತಿ ರಾಯಚೂರು ವಿವಿ ಕಟ್ಟಬೇಕಿದೆ: ಹರೀಶ ರಾಮಸ್ವಾಮಿ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಯಚೂರು ವಿಶ್ವವಿದ್ಯಾಲಯವು ಸ್ಥಾಪನೆಯಾಗಿ ಎರಡು ವರ್ಷಗಳಾದರೂ ಗುಲಬರ್ಗಾ ವಿಶ್ವವಿದ್ಯಾಲಯದ ಭಾಗವಾಗಿಯೇ ಮುಂದುವರಿದಿದೆ. ವಿಶೇಷ ಅಧಿಕಾರಿಗಳನ್ನು ನೇಮಕಗೊಳಿಸಿ, ಬದಲಾವಣೆ ಮಾಡುತ್ತಾ ಬಂದಿದ್ದ ರಾಜ್ಯ ಸರ್ಕಾರವು, ಕರ್ನಾಟಕ ವಿಶ್ವವಿದ್ಯಾಲಯದ ಡಾ.ಹರೀಶ ರಾಮಸ್ವಾಮಿ ಅವರನ್ನು ನೂತನ ವಿಶ್ವವಿದ್ಯಾಲಯಕ್ಕೆ ಪ್ರಥಮ ಕುಲಪತಿಯಾಗಿ ನೇಮಕಗೊಳಿಸಿದೆ. ಅಧಿಕಾರ ವಹಿಸಿಕೊಂಡಿರುವ ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನ ಇಲ್ಲಿದೆ..

* ರಾಯಚೂರು ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಹುದ್ದೆಗೆ ಆಯ್ಕೆಯಾದ ಬಗ್ಗೆ?

– ಕುಲಪತಿ ಹುದ್ದೆಗಾಗಿ ಅರ್ಜಿ ಹಾಕಿದ್ದೆ, ಆದರೆ ಜವಾಬ್ದಾರಿ ವಹಿಸುವ ಬಗ್ಗೆ ಅನುಮಾನ ಇತ್ತು. ಕುಲಪತಿ ಹುದ್ದೆಗೆ ಆಯ್ಕೆಯಾದ ವಿಷಯ ಗೊತ್ತಾದಾಗ ನಿಜಕ್ಕೂ ಬಹಳ ಸಂತೋಷ ಆಯ್ತು. ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡಲು ಬದ್ಧತೆ ಇಟ್ಟುಕೊಂಡಿದ್ದೇನೆ. ಈ ಕುಲಪತಿ ಎಂಬುದು ಅಧಿಕಾರದ ಹುದ್ದೆಯಲ್ಲ. ಅದೊಂದು ಗೌರವದ ಸ್ಥಾನ. ಅದರ ಮೂಲಕ ಹೊಸ ಆಲೋಚನೆಗಳನ್ನು ಮತ್ತು ಹೊಸ ಆಡಳಿತವನ್ನು ಕೊಡಬೇಕು ಎನ್ನುವ ಆಸೆ ನನ್ನದು.

* ಹೊಸ ವಿಶ್ವವಿದ್ಯಾಲಯದ ರೂಪುರೇಷೆ ಹೇಗಿರಬೇಕು?

– ನನ್ನ ದೃಷ್ಟಿಯಲ್ಲಿ ರಾಯಚೂರು ವಿಶ್ವವಿದ್ಯಾಲಯವು ಮೂರು ರೀತಿಯಲ್ಲಿ ಮಾದರಿ ಆಗಬೇಕಿದೆ. ಇದರ ಬೆಳವಣಿಗೆ ವಿದ್ಯಾರ್ಥಿಸ್ನೇಹಿ ಆಗಿರಬೇಕು. ಶೈಕ್ಷಣಿಕ ವಾತಾವರಣ ಸಂಪೂರ್ಣ ಉದ್ಯೋಗಾಧಾರಿತ ಇರಬೇಕು. ಮೂರನೆಯದಾಗಿ ನವೀನ ಮಾದರಿ ಬೋಧನೆ ಮಾಡುವ ಬೋಧಕರನ್ನು ಪ್ರೋತ್ಸಾಹಿಸುವುದು.

* ವಿಶ್ವವಿದ್ಯಾಲಯ ಕಟ್ಟುವುದಕ್ಕೆ ಏನೇನು ಸವಾಲುಗಳಿವೆ?

– ಒಂದನೆಯದ್ದು; ಗುಲಬರ್ಗಾ ವಿಶ್ವವಿದ್ಯಾಲಯದಿಂದ ಬೇರ್ಪಡಿಸುವ ಕೆಲಸ ಆಗಬೇಕಿದೆ. ಆರ್ಥಿಕವಾಗಿ ಸದೃಢತೆ ತರಬೇಕಿದೆ. ಎಲ್ಲೆಲ್ಲಿ ನೆರವು ಸಿಗುತ್ತದೆಯೋ ಅಲ್ಲಿಂದ ಪಡೆಯಬೇಕು. ಹಿಂದುಳಿದ ಜಿಲ್ಲೆ ಎಂದು ಗುರುತಿಸಿರುವುದರಿಂದ ಸರ್ಕಾರೇತರ ಸಂಸ್ಥೆಗಳಿಂದಲೂ ಒಂದಿಷ್ಟು ಕಾರ್ಯಗಳನ್ನು ಮಾಡಿಸಬೇಕಿದೆ. ಸರ್ಕಾರದಿಂದ ಮಾತ್ರ ವಿಶ್ವವಿದ್ಯಾಲಯ ನಡೆಸುವುದಕ್ಕೆ ಆಗುವುದಿಲ್ಲ. ಕೆಲವು ಕಂಪೆನಿಗಳಿಂದ ಸಿಎಸ್‌ಆರ್‌ ಹಣದಲ್ಲಿ ಉತ್ತಮ ಕೆಲಸ ಮಾಡಿಸಬಹುದು.

ಯರಗೇರಾ ಕ್ಯಾಂಪಸ್‌ ಈಗಾಗಲೇ ಹಸಿರುಮಯ ಇದೆ. ಪರಿಸರಸ್ನೇಹಿ ಕ್ಯಾಂಪಸ್‌ ಉಳಿಸಿಕೊಂಡು ಹೋಗುವುದು. ಅದರಲ್ಲೇ ಮಳೆ ನೀರು ಕೊಯ್ಲು ವಿಧಾನ ಅಳವಡಿಸಲಾಗುವುದು. ಇದಕ್ಕೆಲ್ಲ ಜನಸಹಾಯ, ಸಂಘಗಳ ಸಹಾಯ ಬೇಕಾಗುತ್ತದೆ. ನೂತನ ಕಟ್ಟಡಗಳನ್ನೆಲ್ಲ ಹಸಿರುಸ್ನೇಹಿ ಮಾದರಿಯಲ್ಲಿ ನಿರ್ಮಾಣ ಮಾಡಬೇಕು ಎನ್ನುವ ಪರಿಕಲ್ಪನೆ ಇದೆ. ವಿದ್ಯಾರ್ಥಿಗಳಿಗೆ ಹಸಿರು ಗ್ರಂಥಾಲಯ ಒದಗಿಸಬೇಕು. ಕ್ರಿಯಾಶೀಲತೆ ಅಭಿವೃದ್ಧಿ ಮಾಡುವ ಕೆಲಸ ಆಗಬೇಕಿದೆ.
ಉನ್ನತ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕೊಡಬೇಕು. ಐಎಎಸ್‌ ತರಬೇತಿ ಒದಗಿಸಬೇಕು. ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವುದು ಮೂಲ ಉದ್ದೇಶ. ನನ್ನ ಕನಸನ್ನು ಸಾಕಾರಗೊಳಿಸಲು ಸರ್ಕಾರದಿಂದ ಅಗತ್ಯವಾದ ಬೆಂಬಲ ಸಿಗಬೇಕು.

* ಸರ್ಕಾರದಿಂದ ನೆರವು ಪಡೆಯುವುದಕ್ಕೆ ಯೋಜನೆಗಳೇನು?

– ಸರ್ಕಾರದಿಂದ ಈಗಾಗಲೇ ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ ಬಂದಿದೆ. ಆದರೆ, ಅದು ಗುಲಬರ್ಗಾ ವಿಶ್ವವಿದ್ಯಾಲಯದ ಅನುದಾನದಲ್ಲಿಯೇ ಸೇರಿಕೊಂಡಿದೆ ಎಂಬುದಾಗಿ ಸುಳಿವು ನೀಡಿದ್ದಾರೆ. ಪ್ರತ್ಯೇಕವಾಗುವ ಬಗ್ಗೆ ಚರ್ಚಿಸಿ ಅನುದಾನ ಪಡೆಯುವ ಕೆಲಸ ಆಗಬೇಕಿದೆ. ಸದ್ಯದ ಸಂದರ್ಭದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮಾಡಬೇಕಿದೆ.
ಕಟ್ಟಡ ನಿರ್ಮಿಸಿದ ವ್ಯಕ್ತಿ ಎಂದು ಗುರುತಿಸುವಂತೆ ಕುಲಪತಿ ಹುದ್ದೆಯಲ್ಲಿದ್ದು ಹೋಗುವುದು ನನ್ನ ಉದ್ದೇಶವಲ್ಲ. ಏಕಕಾಲಕ್ಕೆ ಶೈಕ್ಷಣಿಕ ಪ್ರಗತಿ ಆಗಬೇಕು. ನಿರ್ಮಾಣವಾದ ಕಟ್ಟಡಗಳನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ವಿಶ್ವವಿದ್ಯಾಲಯಕ್ಕೆ ತಂದುಕೊಡಬೇಕು; ಎನ್ನುವುದು ನನ್ನ ಆಲೋಚನೆ.

* ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪ್ರತ್ಯೇಕಗೊಳಿಸುವ ಕಾರ್ಯ ಯಾವಾಗ?

–ನವೆಂಬರ್‌ 13 ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಅವರೊಂದಿಗೆ ಸಭೆ ಇದೆ. ಅಲ್ಲಿರುವ ಎಲ್ಲ ವಿಭಾಗಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಈ ಹಿಂದೆ ಇದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಯೊಬ್ಬರು ರಾಯಚೂರು ವಿಶ್ವವಿದ್ಯಾಲಯಕ್ಕೇ ಏನೇನು ಬೇರ್ಪಡಿಸಬೇಕು ಎನ್ನುವ ವರದಿ ಸಿದ್ಧಪಡಿಸಿ ಕೊಟ್ಟಿದ್ದಾರೆ. ಅದೇ ವರದಿಗಳನ್ನಾಧರಿಸಿ ಈಗ ಚರ್ಚಿಸಲಾಗುವುದು. ಪ್ರಸಕ್ತ ಶೈಕ್ಷಣಿಕ ವರ್ಷ ಪ್ರವೇಶ ಪ್ರಕ್ರಿಯೆಯನ್ನು ಈಗಾಗಲೇ ಗುಲಬರ್ಗಾ ವಿಶ್ವವಿದ್ಯಾಲಯ ಮಾಡುತ್ತಿದೆ. ಮುಂದಿನ ವರ್ಷದಿಂದ ರಾಯಚೂರು ವಿಶ್ವವಿದ್ಯಾಲಯ ಪ್ರತ್ಯೇಕವಾಗಿ ಶೈಕ್ಷಣಿಕ ಚಟುವಟಿಕೆ ಆರಂಭಿಸುವ ನಿಟ್ಟಿನಲ್ಲಿ ಪೂರ್ವತಯಾರಿ ಮಾಡಿಕೊಳ್ಳುತ್ತೇನೆ.

* ರಾಯಚೂರು ವಿವಿಯಲ್ಲಿ ಅನುದಾನವಿಲ್ಲ, ಹುದ್ದೆಗಳು ಖಾಲಿ ಇವೆ. ಈ ಕೊರತೆ ಸರಿದೂಗಿಸಲು ಯೋಜನೆ?

– ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಹುದ್ದೆಗಳು ಖಾಲಿ ಪರಿಸ್ಥಿತಿ ಇರುವುದು ಸಾಮಾನ್ಯ. ಬೇರ್ಪಡಿಸುವ ಪ್ರಕ್ರಿಯೆ ಆರಂಭಿಸಿದ ಬಳಿಕ, ರಾಯಚೂರು ಕ್ಯಾಂಪಸ್‌ನಲ್ಲಿ ಈಗಾಗಲೇ ಇರುವ ಸಿಬ್ಬಂದಿ, ಬೋಧಕರ ಪೈಕಿ ಆಸಕ್ತರು ಗುಲಬರ್ಗಾ ವಿವಿ ವ್ಯಾಪ್ತಿಗೆ ಮರಳಲು ಅಭಿಪ್ರಾಯ ಪಡೆಯಲಾಗುವುದು. ಇದೆಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಹುದ್ದೆಗಳ ಸ್ಪಷ್ಟತೆ ಸಿಕ್ಕಕೂಡಲೇ ಹೊಸದಾಗಿ ನೇಮಕ ಮಾಡಬೇಕಿರುವ ಹುದ್ದೆಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಎಲ್ಲ ಹಂತದಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು