ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು ಕೃಷಿ ವಿವಿಯಲ್ಲಿ ‘ಹಸಿರು ಪದವಿ ಧಾರಣೆ’

ವಿದ್ಯಾರ್ಥಿಗಳ ಮೂಲಕ ಪರಿಸರ ಸಂರಕ್ಷಣೆಗೆ ವಿಶೇಷ ಯೋಜನೆ
ಫಾಲೋ ಮಾಡಿ
Comments

ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಜೈವಿಕ ಉದ್ಯಾನ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ‘ಹಸಿರು ಪದವಿಧಾರಣೆ (ಗ್ರೀನ್‌ ಗ್ರ್ಯಾಜುಯೇಷನ್‌)’ ಹೆಸರಿನಲ್ಲಿ ವಿಶೇಷ ಯೋಜನೆಯೊಂದನ್ನು ಅನುಷ್ಠಾನ ಮಾಡಲಾಗಿದೆ.

ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಈ ವರ್ಷ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳು ತಲಾ ಒಂದು ಸಸಿ ನೆಡಬೇಕು. ಪದವಿಯುದ್ದಕ್ಕೂ ನಾಲ್ಕು ವರ್ಷಗಳವರೆಗೆ ಅದರ ಪಾಲನೆ, ಪೋಷಣೆಯ ಜವಾಬ್ದಾರಿಯನ್ನು ವಿದ್ಯಾರ್ಥಿಯೆ ನಿಭಾಯಿಸಬೇಕು. ಇದು ಕಡ್ಡಾಯ ನಿಯಮ. ಈಗಾಗಲೇ ಕಲಬುರ್ಗಿಯ ಕೃಷಿ ಪದವಿ ಕಾಲೇಜಿನಲ್ಲಿ ಸಸಿ ನೆಡುವ ಯೋಜನೆಯನ್ನು ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಶುಕ್ರವಾರ ಉದ್ಘಾಟಿಸಿದ್ದಾರೆ.

ಭೀಮರಾಯನ ಗುಡಿ ಹಾಗೂ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಕಾಲೇಜುಗಳಲ್ಲೂ ಹಸಿರು ಪದವಿಧಾರಣೆ ಯೋಜನೆ ಉದ್ಘಾಟನೆಗಾಗಿ ತಯಾರಿ ಮಾಡಲಾಗಿದೆ. ಇದಕ್ಕಾಗಿ ಸುಮಾರು 55 ವಿವಿಧ ತಳಿಗಳ ಸಸಿಗಳನ್ನು ಶಿರಸಿ ಹಾಗೂ ಕಾರವಾರಗಳಿಂದ ತರಿಸಿಕೊಳ್ಳಲಾಗಿದೆ. ಸಸಿಗಳ ಖರೀದಿ ಮತ್ತು ಅದರ ಪಾಲನೆ, ಪೋಷಣೆಗೆ ಬೇಕಾಗುವ ವೆಚ್ಚವನ್ನೆಲ್ಲ ವಿಶ್ವವಿದ್ಯಾಲಯವೇ ಭರಿಸುತ್ತದೆ. ಆದರೆ, ಪೋಷಣೆಯ ಸಂಪೂರ್ಣ ಜವಾಬ್ದಾರಿ ವಿದ್ಯಾರ್ಥಿಯದ್ದು.

‘ಫಿಲಿಪ್ಪಿನ್ಸ್‌ ದೇಶದಲ್ಲಿ ಒಬ್ಬ ವಿದ್ಯಾರ್ಥಿ ಕಡ್ಡಾಯವಾಗಿ 10 ಸಸಿಗಳನ್ನು ಬೆಳೆಸಬೇಕು ಎಂದು ಸರ್ಕಾರ ಅಧಿಕೃತ ಆದೇಶ ಮಾಡಿದೆ. ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳ ಹಿಂದೆಯೇ ಯೋಜನೆ ಅನುಷ್ಠಾನ ಮಾಡಲಾಗಿದೆ. ಇದೀಗ ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲೂ ಜಾರಿಗೆ ತರಲಾಗುವುದು. ಇದೊಂದು ದೀರ್ಘಕಾಲಿಕ ಯೋಜನೆಯಾಗಿದ್ದು, ಪರಿಸರ ಮತ್ತು ಮನುಷ್ಯರಿಗೂ ಇದರಿಂದ ಸಹಾಯವಾಗಲಿದೆ. ಎಲ್ಲ ರೀತಿಯ ಸಸಿಗಳನ್ನು ನೆಡುವ ಯೋಜನೆ ಇದೆ’ ಎಂದು ಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ರಾಯಚೂರು ವಿಶ್ವವಿದ್ಯಾಲಯದಲ್ಲಿ 700 ಎಕರೆ, ಭೀಮರಾಯನ ಗುಡಿ ಕ್ಯಾಂಪಸ್‌ನಲ್ಲಿ 300 ಎಕರೆ ಹಾಗೂ ಕಲಬುರ್ಗಿ ಕ್ಯಾಂಪಸ್‌ನಲ್ಲಿ 400 ಎಕರೆ ಜಾಗವಿದ್ದು, ಎಲ್ಲ ಕಡೆಗೂ ಮರಗಳನ್ನು ಬೆಳೆಸಬೇಕು ಎನ್ನುವ ಮಹದಾಸೆ ಈ ಯೋಜನೆಯ ಹಿಂದಿದೆ. ಪದವಿ ಪೂರ್ಣಗೊಳಿಸಿದ ನಂತರ ನೀಡುವ ಪ್ರಮಾಣಪತ್ರದಲ್ಲಿ ಮರದೊಂದಿಗೆ ವಿದ್ಯಾರ್ಥಿಯು ನಿಂತಿರುವ ಛಾಯಾಚಿತ್ರ ಮುದ್ರಿಸುವ ಬಗ್ಗೆಯೂ ಯೋಜಿಸಲಾಗಿದೆ.

‘ಕ್ಯಾಂಪಸ್‌ನೊಂದಿಗೆ ವಿದ್ಯಾರ್ಥಿಗಳ ಭಾವನಾತ್ಮಕ ಸಂಬಂಧ ಉಳಿಯುವ ಜೊತೆಗೆ ಪರಿಸರ ಸಂರಕ್ಷಣೆ ಮಾಡಿದ ಸಾರ್ಥಕತೆ ಸಿಗುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಶುದ್ಧ ಗಾಳಿ ತುಂಬಾ ಮುಖ್ಯವಾಗಿದೆ. ರಾಯಚೂರು ಜಿಲ್ಲೆಯಲ್ಲಿ ಶೇ 4 ರಷ್ಟು ಮಾತ್ರ ಅರಣ್ಯ ಇರುವುದು ಕಳವಳಕಾರಿ. ವಿಶ್ವವಿದ್ಯಾಲಯದಿಂದ ಸಾಧ್ಯವಾದಷ್ಟು ಮರಗಳನ್ನು ಬೆಳೆಸುವ ಕಾರ್ಯ ಆರಂಭಿಸಲಾಗಿದೆ’ ಎಂದು ಕೃಷಿ ಕಾಲೇಜಿನ ಡೀನ್‌ ಡಾ.ಡಿ.ಎಂ. ಚಂದರಗಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT