ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಪ್ರವಾಹ: ಸೇತುವೆ, ದೇಗುಲ ಮುಳುಗಡೆ

Last Updated 2 ಆಗಸ್ಟ್ 2019, 19:00 IST
ಅಕ್ಷರ ಗಾತ್ರ

ಶಕ್ತಿನಗರ/ಲಿಂಗಸುಗೂರು (ರಾಯಚೂರು ಜಿಲ್ಲೆ): ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ನಾರಾಯಣಪುರ ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು ಗುರ್ಜಾಪುರ ಬ್ಯಾರೇಜ್ ಕಂ ಬ್ರಿಡ್ಜ್ (ಸೇತುವೆ) ಮುಳುಗಡೆ ಆಗುವ ಭೀತಿ ಎದುರಾಗಿದೆ. ಇನ್ನೂ ಒಂದೂವರೆ ಅಡಿ ನೀರು ಬಂದಲ್ಲಿ, ಸೇತುವೆ ಮುಳುಗಡೆಯಾಗಲಿದೆ. ಸಮೀಪದ ಕಾಡ್ಲೂರು ಗ್ರಾಮದ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಜಲಾವೃತವಾಗಿದೆ.

ನಾರಾಯಣಪುರ ಅಣೆಕಟ್ಟೆ ಕ್ರೆಸ್ಟ್‌ಗೇಟ್‌ಗಳಿಂದ ಹೆಚ್ಚುವರಿ 2.15 ಲಕ್ಷ ಕ್ಯುಸೆಕ್‌ ನೀರನ್ನು ಹರಿ ಬಿಡಲಾಗಿದ್ದು ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.

‘ರಾಯಚೂರು ಜಿಲ್ಲೆಯ ಗಡಿ ಪ್ರದೇಶದಲ್ಲಿ ಪ್ರವಾಹ ಹೆಚ್ಚಿರುವ ಕಾರಣ ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು. ಲಿಂಗಸುಗೂರು, ದೇವದುರ್ಗ,ರಾಯಚೂರು ತಾಲ್ಲೂಕುಗಳ ಬಹುತೇಕ ನದಿ ಪಾತ್ರದ ಗ್ರಾಮಗಳು ಹಾಗೂ ನಡುಗಡ್ಡೆ ಪ್ರದೇಶಗಳಲ್ಲಿ ಜನರಿಗೆ ಸಮಸ್ಯೆ ಉಂಟಾಗಿದೆ’ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದರು.

‘ನಡುಗಡ್ಡೆಗಳಲ್ಲಿ ಇರುವ ಜನರಿಗೆ ಅಗತ್ಯ ಪಡಿತರ ಮತ್ತು ಆರೋಗ್ಯ ಸಂಬಂಧಿ ವಸ್ತುಗಳ ಪೂರೈಕೆಗೆ ಜಿಲ್ಲಾ ಆಡಳಿತ ಕ್ರಮ ಕೈಗೊಂಡಿದೆ. ನದಿ ಪಾತ್ರದಲ್ಲಿ ತೆಪ್ಪ ಬಳಸಿ ನದಿ ದಾಟುವಂತಹ ಕಾರ್ಯಕ್ಕೆ ಕಡಿವಾಣ ಹಾಕಲಾಗಿದೆ. ಲಿಂಗಸುಗೂರು ತಾಲ್ಲೂಕು ತವದಗಡ್ಡಿ ಪ್ರದೇಶದ ಸಂತ್ರಸ್ತರು ಸುರಕ್ಷಿತವಾಗಿ ಶೀಲಹಳ್ಳಿಗೆ ಬಂದಿದ್ದಾರೆ‌‌’ ಎಂದರು.

ಯಾದಗಿರಿ:ಯಾದಗಿರಿ ಜಿಲ್ಲೆಯಶಹಾಪುರ ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಗೆ ಹೊಂದಿಕೊಂಡು ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿರುವ ಕಾರಣ ಶುಕ್ರವಾರ ಮಧ್ಯಾಹ್ನ 3ರಿಂದ ಶಹಾಪುರ-ದೇವದುರ್ಗ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT