ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐತಿಹಾಸಿಕ ಬುರುಜು ಹಾಳುಗೆಡವಿದ ಆಡಳಿತ

ಭವ್ಯ ಇತಿಹಾಸ ಸಾರುವ ಮುದಗಲ್‌ ಕೋಟೆ
Published 6 ಜುಲೈ 2024, 7:03 IST
Last Updated 6 ಜುಲೈ 2024, 7:03 IST
ಅಕ್ಷರ ಗಾತ್ರ

ಮುದಗಲ್: ಸ್ವಚ್ಛತೆ ಹೆಸರಿನಲ್ಲಿ ಇಲ್ಲಿನ ಪುರಸಭೆ ಆಡಳಿತವು ಶುಕ್ರವಾರ ಐತಿಹಾಸಿಕ ಕೋಟೆ ಬುರುಜು ಕೆಡವಿದೆ.

ಮೊಹರಂ ಹಬ್ಬದ ನಿಮಿತ್ತ ಮನೋರಂಜನೆಯ ಜೋಕಾಲಿ, ತೊಟ್ಟಿಲು ಹಾಕಲು ₹ 15 ಲಕ್ಷಕ್ಕೆ ಇಲ್ಲಿನ ಕೋಟೆ ಆವರಣವನ್ನು ಬಾಡಿಗೆ ನೀಡಲಾಗಿದ್ದು,  ಇದರ ನಿಮಿತ್ತ ಬಾಡಿಗೆದಾರರಿಗೆ ಸ್ಥಳಾವಕಾಶ ಕಲ್ಪಿಸಲು ಪುರಸಭೆಯು ಜೆಸಿಬಿ ಯಂತ್ರ ಬಳಕೆ ಮಾಡಿ ಐತಿಹಾಸಿಕ ಕೋಟೆ ಧ್ವಂಸ ಮಾಡಿದೆ.

ಕೋಟೆಯ ಕಲ್ಲುಗಳನ್ನು ಅಲ್ಲಿರುವ ಕಂದಕಕ್ಕೆ ಹಾಕಿ ಅದರ ಮೇಲೆ ಮರಮ ಹಾಕಿ ಮುಚ್ಚಲಾಗಿದೆ.  ಕೋಟೆ ಧ್ವಂಸದ ಬಗ್ಗೆ ಪಟ್ಟಣದ ನಿವಾಸಿಗಳು ವಿರೋಧ ವ್ಯಕ್ತಪಡಿಸಿದರೂ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಪುರಸಭೆ ಹಣದ ಆಸೆಗಾಗಿ ಐತಿಹಾಸಿಕ ಕೋಟೆ ಬುರುಜು ಕೆಡವಿರುವುದು ಖಂಡನೀಯ ಎಂದು ಶರಣಪ್ಪ ಕಟ್ಟಿಮನಿ ದೂರಿದರು.

‘ಕೋಟೆ ಭಾಗ ಸ್ವಚ್ಛ ಮಾಡಲು ಪ್ರಾಚ್ಯವಸ್ತು ಇಲಾಖೆ ಇಲ್ಲವೇ ಪ್ರವಾಸೋದ್ಯಮ ಇಲಾಖೆಯಿಂದ ಪುರಸಭೆ ಅಧಿಕಾರಿಗಳು ಅನುಮತಿ ಪಡೆದಿಲ್ಲ. ಚಾವಡಿ ಕಟ್ಟಿಯ ಹಿಂಭಾಗದ ಸ್ಥಳದಲ್ಲಿ ಜೋಕಾಲಿ–ತೊಟ್ಟಿಲು ಹಾಕಲು ಸ್ಥಳ ನೀಡಿದ್ದೇವೆ ಎಂದು ಕಡತದಲ್ಲಿ ಎಂದು ನಮೂದಿಸಿದ್ದಾರೆ. ಐತಿಹಾಸಿಕ ಸ್ಮಾರಕ ಸ್ಥಳದಿಂದ 300 ಮೀಟರ್‌ ಅಂತರದಲ್ಲಿ ಸ್ಥಳ ಬಳಕೆ ಮಾಡಲು ನಿಷೇಧವಿದೆ. ಆದರೂ ಕೋಟೆಗೆ ಹೊಂದಿಕೊಂಡು ಜೋಕಾಲಿ, ತೊಟ್ಟಿಲು ಹಾಕಲಾಗುತ್ತಿದೆ. ಇವುಗಳನ್ನು ಅಳವಡಿಸಲು ನಿಷೇಧಿತ ಪ್ರದೇಶದಲ್ಲಿ ಭಾರಿ ವಾಹನಗಳನ್ನೂ ಬಳಸಿದ್ದಾರೆ’ ಎಂದು ಸ್ಥಳೀಯರು ದೂರಿದ್ದಾರೆ.

ಕೋಟೆ ಬುರುಜು ಕೆಡವಿದ್ದಲ್ಲದೇ  ಬೇರೆಡೆಯಿಂದ ಮರಂ ತಂದು ಕಂದಕ ಮುಚ್ಚಿರುವುದರಿಂದ ಕಂದಕದಲ್ಲಿ ನಿಂತ ನೀರು ಬೇರೆಡೆ ಹರಿಯಲು ಆಗದೆ ನಿಂತಲ್ಲೆ ನಿಂತು ಗಬ್ಬೇದ್ದು ನಾರುತ್ತಿವೆ. ಮಲೀನ ನೀರು ಹೊರ ಹಾಕಲು ಪುರಸಭೆಯ ಹಣ ಬಳಕೆ ಮಾಡಿ ಟ್ರ್ಯಾಕ್ಟರ್ ಅಳವಡಿಸಿ ನೀರು ಹೊರ ಹಾಕಲಾಗುತ್ತಿದೆ.

ಮುದಗಲ್ ಕೋಟೆಗೆ ಐತಿಹಾಸಿಕ ಮಹತ್ವವಿದೆ. ಗ್ರೀಕ್ ಪ್ರವಾಸಿ ಟಾಲಮಿಯ ಎ ಗೈಡ್ ಟು ಜಿಯಾಗ್ರಫಿ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದಂತೆ ಮುದಗಲ್ ಕ್ರಿ.ಶ.150ರಲ್ಲಿ ಅಸ್ತಿತ್ವದಲ್ಲಿತ್ತು. ಮೌರ್ಯರು, ಕಲ್ಯಾಣ ಚಾಲುಕ್ಯರು, ದೇವಗಿರಿ ಯಾದವರು, ಕದಂಬ, ಕುಮ್ಮಟ ದುರ್ಗಾದ ನಾಯಕರು, ಬಹುಮನಿ ಸುಲ್ತಾನರು, ವಿಜಯನಗರ ಅರಸರು, ವಿಜಯಪುರ ಆದಿಲ್‌ಶಾಹಿಗಳು, ಮೊಘಲರು ಹಾಗೂ ನಿಜಾಮರು ಸೇರಿ ಇನ್ನಿತರ ಅರಸರ ಆಡಳಿತ ನಡೆಸಿದ್ದರು ಎಂಬ ಉಲ್ಲೇಖವಿದೆ.

ದೇವಗಿರಿ ಯಾದವರ ದೊರೆ ಕೃಷ್ಣ ವರ್ಧಂತಿ ನಿಮಿತ್ತ ಕ್ರಿ.ಶ 1053 ರಲ್ಲಿ ಮುದ್ದಪ್ಪ ರೆಡ್ಡಿ ಎಂಬ ಜಮೀನದಾರ ಈ ಕೋಟೆ ನಿರ್ಮಿಸಿದ. ದೇವಗಿರಿ ಯಾದವರ ವಂಶದ ಭಿಲ್ಲಮನ ಆಡಳಿತದಲ್ಲಿ ಮಹಾಮಂಡಳೇಶ್ವರನಾದ ಕದಂಬ ಕುಲದ ಬಿಜ್ಜರಸ ಮುದಗಲ್ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ. ಇದು ಇಂದ್ರನ ಅಮರಾವತಿಗಿಂತಲೂ ಮಿಗಿಲಾಗಿತ್ತೆಂದು ಕ್ರಿ.ಶ.1215 ರ ಶಾಸನ ತಿಳಿಸುತ್ತದೆ. ಮುದಗಲ್ ಕೋಟೆ ಬಹುಮನಿ ಸುಲ್ತಾನರು, ವಿಜಯನಗರ ಅರಸರು, ವಿಜಯಪುರ ಆದಿಲ್‌ಶಾಹಿಗಳಿಗೆ ಪ್ರತಿಷ್ಠೆ ಕೇಂದ್ರವಾಗಿತ್ತು. ಗಡಿಭಾಗದ ಆಯಕಟ್ಟಿನ ಸೂಕ್ಷ್ಮ ಕೇಂದ್ರವಾಗಿದ್ದ ಮುದಗಲ್ ಆರ್ಥಿಕ-ವಾಣಿಜ್ಯ ವ್ಯಾಪಾರ ಕೇಂದ್ರವಾಗಿತ್ತು. ಮುದಗಲ್‌ ನಾಡು ವಿಜಯನಗರ ಅರಸರ ಏಳು-ಬೀಳಿನ ಪ್ರದೇಶವಾಗಿ, ಮುಸ್ಲಿಮರಿಗೆ ಕದನ ಕಣವಾಗಿ ಮಾರ್ಪಟಿದ್ದ ಮುದಗಲ್‌ಗೆ ಮುದಗಲ್ಲನಾಡು, ಮುದಗಲ್ಲಸೀಮೆ ಎಂದು ಕರೆಯಲಾಗಿದೆ. ವಿಜಯನಗರ ಅರಸರ ರಾಯಚೂರು ಜಿಲ್ಲೆಯಲ್ಲಿ ಮೊದಲು ಉಲ್ಲೇಖವಾದ ಶಾಸನ ಮುದಗಲ್‌ದಲ್ಲಿದೆ.

ಎರಡು ಸುತ್ತಿನ ಕೋಟೆಯಾಗಿದ್ದು, ಆಯತ ಆಕಾರದಲ್ಲಿ ಕಟ್ಟಲಾಗಿದೆ. ಅರ್ಧ ಎತ್ತರ ಪ್ರದೇಶದಲ್ಲಿ ಇನ್ನರ್ಧ ಸಮತಟ್ಟಾದ ಪ್ರದೇಶದಲ್ಲಿ ಬಲಿಷ್ಠವಾಗಿ ನಿರ್ಮಾಣಗೊಂಡಿದೆ. ಕೋಟೆ 1919 ಅಡಿ ಉದ್ದ ಹಾಗೂ 24 ಅಡಿ ಎತ್ತರವಿದೆ. 40 ಅಡಿ ಎತ್ತರ ಹಾಗೂ 160 ಅಡಿ ಅಗಲವುಳ್ಳ 16 ಬುರುಜುಗಳಿವೆ. ಕಾಟೇ ದರವಾಜ, ಫತೇದರವಾಜ ಎಂದು ಎರಡು ದೊಡ್ಡದಾದ ದ್ವಾರಗಳಿವೆ. ಕೋಟೆಯ ಒಳ ಭಾಗದಲ್ಲಿ ವಿವಿಧ ಅರಸರಿಗೆ ಸಂಬಂಧಿಸಿದ 100ಕ್ಕೂ ಹೆಚ್ಚು ಶಾಸನಗಳು ದೊರೆತಿವೆ.

ಇಲ್ಲಿನ ಮೊಹರಂ ಹಬ್ಬ ಮಾನವೀಯ ಮೌಲ್ಯ, ಕೋಮು ಸೌಹಾರ್ದ, ಜಾತ್ಯಾತೀತ ನಂಬಿಕೆ ಹುಟ್ಟಿಸಿ ಹಿಂದೂ- ಮುಸ್ಲಿಮರ ಭಾವನಾತ್ಮಕ ಸಂಬಂಧಗಳ ಬೆಸುಗೆ ಬೆಳೆಸಿದೆ. ಹೀಗಾಗಿ ಮುದಗಲ್ ಭವ್ಯವಾದ ಇತಿಹಾಸ ಮತ್ತು ಸಂಸ್ಕೃತಿಗಳ ಕುರುಹಾಗಿ ಇಂದಿಗೂ ಗುರುತಿಸಿಕೊಂಡಿದೆ.  ಮುದಗಲ್ ಚರಿತ್ರೆ ಮತ್ತು ಸಾಂಸ್ಕೃತಿಕ ಭವ್ಯ ಕುರುಹಾಗಿ ಇಂದಿಗೂ ಅಚ್ಚಳಿಯದ್ದೇ ಉಳಿದು ಬಂದಿದೆ. ಇಂತಹ ಭವ್ಯ ಇತಿಹಾಸ ಸಾರುವ ಕೋಟೆಯನ್ನು ಪುರಸಭೆ ನಾಶಮಾಡಲು ಮುಂದಾಗಿದೆ.

ಮುದಗಲ್ ಪ್ರವಾಸೋದ್ಯಮ ಇಲಾಖೆಗೆ ಸೇರಿರುವ ನಾಮಫಲಕ ಅಳವಡಿಸಿರುವುದು
ಮುದಗಲ್ ಪ್ರವಾಸೋದ್ಯಮ ಇಲಾಖೆಗೆ ಸೇರಿರುವ ನಾಮಫಲಕ ಅಳವಡಿಸಿರುವುದು
ಮುದಗಲ್ ಐತಿಹಾಸಿಕ ಕೋಟೆಯ ಕಂದಕದ ಮುಚ್ಚಿ ನಿಷೇಧಿತ ಸ್ಥಳದಲ್ಲಿ . ಜೋಕಾಲಿ/ತೊಟ್ಟಿಲು ಹಾಕಲು ಬಾರಿ ವಾಹನ ಬಳಕೆ ಮಾಡಿ ಸಾಮಾಗ್ರಿಗಳು ಇಳಿಸುತ್ತಿರುವುದು
ಮುದಗಲ್ ಐತಿಹಾಸಿಕ ಕೋಟೆಯ ಕಂದಕದ ಮುಚ್ಚಿ ನಿಷೇಧಿತ ಸ್ಥಳದಲ್ಲಿ . ಜೋಕಾಲಿ/ತೊಟ್ಟಿಲು ಹಾಕಲು ಬಾರಿ ವಾಹನ ಬಳಕೆ ಮಾಡಿ ಸಾಮಾಗ್ರಿಗಳು ಇಳಿಸುತ್ತಿರುವುದು

ಕೋಟೆ ಬುರುಜು ಕೆಡವಿದ ಪುರಸಭೆ ಮುಖ್ಯಾಧಿಕಾರಿಗಳ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.

-ಬಸವರಾಜ ಬಂಕದಮನಿ ಅಧ್ಯಕ್ಷ ಡಿಎಸ್‌ಎಸ್ ಮುದಗಲ್ ಘಟಕ

ಕೋಟೆ ಮೇಲೆ ಬೆಳೆದ ಗಿಡಗಳನ್ನು ತೆಗೆಯಲು ಜೆಸಿಬಿ ಬಳಕೆ ಮಾಡಿಕೊಂಡಿದ್ದೇವೆ. ಕೋಟೆ ಬುರುಜು ಕೆಡವಿಲ್ಲ.

-ನಬಿ ಎಂ.ಕಂದಗಲ್ ಮುಖ್ಯಾಧಿಕಾರಿ ಮುದಗಲ್ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT