ಸಿಂಧನೂರು: ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ನಿಗದಿ ಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶಕ್ಕೆ ಕಲುಬುರಗಿ ಹೈಕೋರ್ಟ್ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಸಿಂಧನೂರು ನಗರದಲ್ಲಿ ಪರಿಶಿಷ್ಟ ಪಂಗಡದ ಸಂಖ್ಯೆ ಗಣಿನೀಯ ಪ್ರಮಾಣದಲ್ಲಿ ಕಡಿಮೆಯಿದ್ದು, ಒಬ್ಬರು ಮಾತ್ರ ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯರಿದ್ದಾರೆ. ಪರಿಶಿಷ್ಟ ಜಾತಿ ಸಮುದಾಯಕ್ಕೆ ಇಲ್ಲಿಯವರೆಗೆ ಅಧ್ಯಕ್ಷ ಸ್ಥಾನದ ಮೀಸಲಾತಿ ದೊರೆಯದೇ ಅನ್ಯಾಯವಾಗಿದೆಂದು ಪ್ರಶ್ನಿಸಿ ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಹಿನ್ನಲೆಯಲ್ಲಿ ಆ.14 ರಂದು ಹೈಕೋರ್ಟ್ ಕಲಬುರಗಿ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿ ಆಕ್ಷೇಪಣೆಗಳಿದ್ದರೆ ಆ.26 ರೊಳಗಾಗಿ ಸಲ್ಲಿಸುವಂತೆ ರಾಜ್ಯ ಸರ್ಕಾರದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ಈ ಕುರಿತು ಆ.29 ರಂದು ವಿಚಾರಣೆಯನ್ನು ನ್ಯಾಯಾಲಯ ಕಾಯ್ದಿರಿಸಿದೆ.
ಚುನಾವಣೆ ಪ್ರಕ್ರಿಯೆ ಸ್ಥಗಿತ: ರಾಯಚೂರು ಜಿಲ್ಲಾಧಿಕಾರಿಗಳು ರಾಜ್ಯ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ 10ನೇ ಅವಧಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ರಾಯಚೂರು ನಗರಸಭೆ ಸೇರಿದಂತೆ ಜಿಲ್ಲೆಯ ಎಲ್ಲ ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‍ರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಿಸಿ ನಿಯಮಾವಳಿಗಳ ಪ್ರಕಾರ ಚುನಾವಣೆ ನಡೆಸುವಂತೆ ಸೂಚಿಸಿದ್ದಾರೆ.
ಆದರೆ, ಸಿಂಧನೂರು ನಗರಸಭೆಗೆ ತಡೆಯಾಜ್ಞೆ ಬಂದಿರುವುದರಿಂದ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಂಡಂತಾಗಿದೆ. ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಆ.29 ರಂದು ವಿಚಾರಣಾ ದಿನಾಂಕ ನಿಗದಿ ಪಡಿಸಿದ್ದು, ನ್ಯಾಯಾಲಯದ ಆದೇಶಕ್ಕಾಗಿ ನಗರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.