ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುವ ಹವ್ಯಾಸದಿಂದ ಎಲ್ಲವೂ ಸಾಧ್ಯ: ಕಲಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ಲಕ್ಷ್ಮೀ

Last Updated 4 ಮೇ 2019, 20:00 IST
ಅಕ್ಷರ ಗಾತ್ರ

ಪ್ರತಿಭಾನ್ವಿತೆಯ ವಿವರ

ಹೆಸರು: ಲಕ್ಷ್ಮೀ

ತಂದೆ: ಅಳ್ಳಪ್ಪ

ತಾಯಿ: ಪಾರ್ವತಿ

ಊರು: ಸಾಲಗುಂದಾ, ಸಿಂಧನೂರು ತಾಲ್ಲೂಕು

ಕಾಲೇಜು: ಸಂಕೇತ ಸ್ವತಂತ್ರ ಪದವಿಪೂರ್ವ ಕಾಲೇಜು, ಸಿಂಧನೂರು

ಪಡೆದ ಅಂಕ: 600/578 (ಶೇ 96.33)

ರಾಯಚೂರು: ಪಾಠದಲ್ಲಿ ಬರುವ ಇಸ್ವಿಗಳು ನನಗೆ ತುಂಬಾ ಇಷ್ಟ. ಒಂದೊಂದು ಇಸ್ವಿಗೆ ತನ್ನದೇ ಆದ ಇತಿಹಾಸ ಹಾಗೂ ಬೆಳವಣಿಗೆಗಳು ಇರುತ್ತವೆ. ಆಸಕ್ತಿಯಿಂದ ಎಲ್ಲವನ್ನು ಓದಿಕೊಂಡಿದ್ದರಿಂದ ನೆನಪಿನಲ್ಲಿ ಉಳಿಯುತ್ತವೆ. ಹೀಗಾಗಿ ಪರೀಕ್ಷೆ ಬರೆಯುವುದು ಕಷ್ಟವಾಗಲಿಲ್ಲ.

ಎಸ್ಸೆಸ್ಸೆಲ್ಸಿಯಲ್ಲಿ ಶೇ 88 ಅಂಕಗಳನ್ನು ಪಡೆದಿದ್ದೇನೆ. ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಳ್ಳಬಹುದಾಗಿತ್ತು. ಆದರೆ, ಕಲಾ ವಿಭಾಗದಲ್ಲಿಯೇ ಏನಾದರೂ ಸಾಧನೆ ಮಾಡಬೇಕೆನ್ನುವ ಛಲ ನನ್ನದು. ಈ ಛಲ ಇದ್ದುದರಿಂದ ನಿದ್ರೆ ಸರಿಯಾಗಿ ಬರುವುದಿಲ್ಲ. ಅಂದುಕೊಂಡಿದ್ದನ್ನು ಸಾಧಿಸುತ್ತೇನೆ. ರಾತ್ರಿ 11 ರವರೆಗೂ ಓದಿಕೊಳ್ಳುತ್ತೇನೆ, ಮತ್ತೆ ಬೆಳಿಗ್ಗೆ 4 ಗಂಟೆಗೆ ಎದ್ದು ಪಠ್ಯಪುಸ್ತಕಗಳನ್ನು ಓದುತ್ತೇನೆ.

ನಮ್ಮ ಕಾಲೇಜಿನ ಉಪನ್ಯಾಸಕರು ತುಂಬಾ ಚೆನ್ನಾಗಿ ಪಾಠ ಹೇಳಿಕೊಡುತ್ತಾರೆ. ಹೇಳಿದ ಪಾಠವನ್ನು ಮರಳಿ ಓದಿಕೊಂಡು ನೋಟ್ಸ್‌ ಬರೆದಿಟ್ಟುಕೊಳ್ಳುವ ಹವ್ಯಾಸ ಇರುವುದರಿಂದ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದಕ್ಕೆ ಸಾದ್ಯವಾಯಿತು. ಪಾಠ ಕೇಳಿದ ದಿನವೇ ಮತ್ತೆ ಓದಿಕೊಂಡು ನೋಟ್ಸ್‌ ಬರೆದಿಟ್ಟುಕೊಳ್ಳುತ್ತಿದ್ದೆ. ಯಾವುದನ್ನು ಬಾಕಿ ಉಳಿಸಿಕೊಳ್ಳುತ್ತಿರಲಿಲ್ಲ.

ಪಿಯುಸಿ ಪ್ರಥಮ ವರ್ಷ ಓದುವಾಗ ಪಠ್ಯ ಪುಸ್ತಕಗಳೊಂದಿಗೆ ದಿನಪತ್ರಿಕೆಗಳನ್ನು ಹಾಗೂ ಇತರೆ ಸಾಹಿತ್ಯ ಪುಸ್ತಕಗಳನ್ನು ಓದಿಕೊಳ್ಳುತ್ತಿದ್ದೆ. ಪ್ರಥಮ ಪಿಯುಸಿಯಲ್ಲೂ ಶೇ 94.5 ಅಂಕಗಳು ಬಂದವು. ದ್ವಿತೀಯ ಪಿಯುಸಿಯಲ್ಲಿ ಕೇವಲ ಪಠ್ಯಪುಸ್ತಕಗಳನ್ನು ಮಾತ್ರ ಓದಿಕೊಂಡಿದ್ದೇನೆ. ಓದಿದ್ದನ್ನು ಮೇಲಿಂದ ಮೇಲಿಂದ ಬರೆದಿಟ್ಟುಕೊಂಡಿದ್ದೇನೆ.

ಪಿಯುಸಿಯಲ್ಲಿ ಶಿಕ್ಷಣ, ರಾಜ್ಯಶಾಸ್ತ್ರ, ಇತಿಹಾಸ ಹಾಗೂ ಸಮಾಜಶಾಸ್ತ್ರ ವಿಷಯಗಳನ್ನು ಓದಿಕೊಂಡಿದ್ದೇನೆ. ಸಮಾಜಶಾಸ್ತ್ರ ಮತ್ತು ಕನ್ನಡ ಭಾಷಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳು ಬಂದಿವೆ. ಇಂಗ್ಲಿಷ್‌ ಭಾಷಾ ಪತ್ರಿಕೆಗೆ ಮಾತ್ರ 88 ಅಂಕಗಳು ಬಂದಿವೆ. ಪದವಿ ಶಿಕ್ಷಣವನ್ನು ಸಂಕೇತ ಕಾಲೇಜಿನಲ್ಲಿಯೇ ಮುಂದುವರಿಸುತ್ತಿದ್ದೇನೆ. ಛಲವಿದ್ದರೆ ಎಲ್ಲವನ್ನು ಸಾಧಿಸಬಹುದು ಎನ್ನುವ ನಂಬಿಕೆ ನನ್ನದು.

ಪದವಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಯಾರಿ ಮಾಡಿಕೊಳ್ಳುತ್ತೇನೆ. ಈ ಬಗ್ಗೆ ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನ ಪಡೆದುಕೊಳ್ಳುತ್ತೇನೆ. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಪುಸ್ತಕಗಳನ್ನು ಖರೀದಿಸುವ ಯೋಜನೆ ಇದೆ. ಗ್ರಂಥಾಲಯದಿಂದಲೂ ಪುಸ್ತಕಗಳನ್ನು ತಂದುಕೊಂಡು ಓದಬೇಕಿದೆ. ಜೀವನದಲ್ಲಿ ಐಎಎಸ್‌/ಕೆಎಎಸ್‌ನಂತಹ ಉನ್ನತ ಪರೀಕ್ಷೆಗಳನ್ನು ಪಾಸು ಮಾಡಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT