ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ರಕ್ಷಣೆಗೆ ಶಸ್ತ್ರ ಹಿಡಿಯಲು ಸಿದ್ಧ: ಸಿ.ಟಿ. ರವಿ

Published 17 ಅಕ್ಟೋಬರ್ 2023, 11:40 IST
Last Updated 17 ಅಕ್ಟೋಬರ್ 2023, 11:40 IST
ಅಕ್ಷರ ಗಾತ್ರ

ಲಿಂಗಸುಗೂರು (ರಾಯಚೂರು): ‘ಶಾಸ್ತ್ರ ಮತ್ತು ಶಸ್ತ್ರಗಳಿಂದ ಧರ್ಮ ಮತ್ತು ರಾಷ್ಟ್ರ ರಕ್ಷಣೆ ಸಾಧ್ಯ. ಧರ್ಮ ರಕ್ಷಣೆಗಾಗಿ ಶಸ್ತ್ರ ಹಿಡಿಯಲು ಮುಂದಾಗಬೇಕು’ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

ಸೋಮವಾರ ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ‘ಅರಿವಿನ ದೀವಿಗೆ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ದಸರೆಯಲ್ಲಿ ಆಯುಧ ಪೂಜೆ ಮಾಡುವ ಉದ್ದೇಶವೇ ವಿಜಯದ ಸಂಕೇತ. ದುಷ್ಟ ಶಕ್ತಿಗಳನ್ನು ನಾಶ ಮಾಡಲು ಶಕ್ತಿ ಪೂಜೆ ಮಾಡಬೇಕು. ಇದು ದಸರಾ ಹಬ್ಬದ ಮೂಲ ಉದ್ದೇಶ’ ಎಂದರು.

‘ಸನಾತನ ಧರ್ಮದ ನಾಶಕ್ಕೆ ಹುನ್ನಾರ ನಡೆದಿರುವ ಸಂಗತಿ ಚರ್ಚೆಯಲ್ಲಿದೆ. ಆದಿಯು ಇಲ್ಲದ, ಅಂತ್ಯವೂ ಇಲ್ಲದ ಸನಾತನ ಧರ್ಮ ನಾಶಕ್ಕೆ ಸಾಕಷ್ಟು ಪ್ರಯತ್ನಗಳು ನಡೆದು ಹೋಗಿವೆ. ವಿದೇಶಿ ಭಾವನಾತ್ಮಕ ಮತ ಗಳಿಕೆಗೆ ಒಂದು ಧರ್ಮದ ನಾಶಕ್ಕೆ ಯತ್ನ ನಡೆದಿದೆ. ಧರ್ಮ, ರಾಷ್ಟ್ರ ರಕ್ಷಣೆಗೆ ಸ್ವಾಮೀಜಿಗಳು ಮುಂದಾಗಬೇಕು’ ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ನಡೆದ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಸ್ವಾಮೀಜಿ, ‘ಸ್ವಸ್ಥ ಸಮಾಜ ನಿರ್ಮಾಣಕ್ಕೆ ಧರ್ಮ ಮತ್ತು ರಾಷ್ಟ್ರಾಭಿಮಾನ ಮೂಡಿಸಬೇಕಿದೆ. ಋಷಿಮುನಿಗಳು ಮತ್ತು ಆಚಾರ್ಯರು ನೀಡಿರುವ ವಿಚಾರಧಾರೆಗಳಿಂದ ಸುಭದ್ರ ರಾಷ್ಟ್ರ ನಿರ್ಮಾಣಗೊಂಡಿದೆ. ಧರ್ಮ ಮತ್ತು ರಾಷ್ಟ್ರ ಮನುಷ್ಯನ ಎರಡು ಕಣ್ಣುಗಳಿದ್ದಂತೆ’ ಎಂದರು.

‘ಪರಿಶುದ್ಧ ಬದುಕಿಗೆ ಧರ್ಮ ಬೇಕು. ಸಾಮಾಜಿಕ ಮತ್ತು ರಾಷ್ಟ್ರ ಪ್ರಜ್ಞೆ ಬೆಳೆಸುವ ಅಗತ್ಯವಿದೆ. ಸಮಸ್ತ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ ಎಂಬುದನ್ನು ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಉಲ್ಲೇಖಿಸಿದ್ದಾರೆ. ಅಸುರಿ ಶಕ್ತಿಗಳನ್ನು ನಿರ್ನಾಮಗೊಳಿಸಿ ದೈವಿ ಶಕ್ತಿ ಬೆಳೆಸುವುದೇ ಧರ್ಮದ ಮೂಲ ಉದ್ದೇಶವಾಗಿದೆ. ಧರ್ಮ ಸಂಸ್ಕರಣೆಗೆ ಋಷಿಮುನಿಗಳ, ಮಹಾತ್ಮರ ಕೊಡುಗೆ ಅಪಾರ’ ಎಂದು ಹೇಳಿದರು.

ಮಾನ್ವಿ ಹಿರೇಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಾತನಾಡಿ, ‘ಸುಭದ್ರ ರಾಷ್ಟ್ರ ನಿರ್ಮಾಣ ಪ್ರಚಾರಕರಾದ ಖಾವಿಧಾರಿಗಳು, ದೇಶದ ಆಂತರಿಕ ರಕ್ಷಕ ಪಡೆ. ಮಾನವನನ್ನು ಪರಿಪೂರ್ಣತೆಯೆಡೆಗೆ ಕರೆದೊಯ್ಯುವ ಶಕ್ತಿ ಧರ್ಮಕ್ಕೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಸ್ವಾಮೀಜಿಗಳು ಎಚ್ಚರಿಕೆ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT