ಬುಧವಾರ, ಸೆಪ್ಟೆಂಬರ್ 22, 2021
21 °C
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಅಧ್ಯಕ್ಷತೆಯಲ್ಲಿ ಸಂವಾದ ಸಭೆ

ಲಸಿಕೆ ಅಭಿಯಾನಕ್ಕೆ ಧರ್ಮಗುರುಗಳೆ ರಾಯಭಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಅಭಿಯಾನ ಯಶಸ್ವಿ ಆಗುವುದಕ್ಕೆ ಧರ್ಮಗುರುಗಳೆ ರಾಯಭಾರಿ ಆಗಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಅವರು ಸಹಕಾರ ಕೋರಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿವಿಧ ಧರ್ಮಗುರುಗಳ ಹಾಗೂ ಸಮಾಜ ಮುಖಂಡರ ಜೊತೆಗೆ ಕೋವಿಡ್‌ ಲಸಿಕಾ ಅಭಿಯಾನ ಕುರಿತಾದ ಸಂವಾದದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಥಳೀಯವಾಗಿ ಜನರು ಆಡಳಿತಕ್ಕಿಂತಲೂ ಧಾರ್ಮಿಕ ಮುಖಂಡರ ಸೂಚನೆಗಳನ್ನು ಪಾಲನೆ ಮಾಡುತ್ತಾರೆ. ಹೀಗಾಗಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ಕೋವಿಡ್ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ಕೋವಿಡ್ ಮಹಾಮಾರಿ ಸಂಪೂರ್ಣ ನಿಯಂತ್ರಿಸುವುದಕ್ಕೆ ಜಿಲ್ಲಾಡಳಿತವು ಲಸಿಕೆ ಅಭಿಯಾನ ನಡೆಸುತ್ತಿದೆ. ಜಿಲ್ಲೆಯಲ್ಲಿ ಇನ್ನೂ ಅನೇಕರು ಲಸಿಕೆ ಹಾಕಿಸಿಕೊಂಡಿಲ್ಲ. ಈ ಬಗ್ಗೆ ಗೊಂದಲಗಳು, ಆತಂಕಗಳು ಇರುವ ಕಾರಣ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ಪ್ರತಿದಿನ 25 ಸಾವಿರ ಹಾಗೂ ಮಹಾ ಲಸಿಕೆ ದಿನಗಳಾದ ಬುಧವಾರ ಮತ್ತು ಶುಕ್ರವಾರ 50 ಸಾವಿರ ಕೋವಿಡ್ ಲಸಿಕೆ ಗುರಿ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ, ಹೋಟೆಲ್‌ಗಳು, ನ್ಯಾಯಬೆಲೆ ಅಂಗಡಿ ಸೇರಿದಂತೆ ಜನಸಾಂದ್ರತೆ ಸ್ಥಳಗಳಲ್ಲಿ ಲಸಿಕೆ ಅಭಿಯಾನವನ್ನು ಆರಂಭಿಸಿದ್ದು, ಲಸಿಕೆ ಕೇಂದ್ರಗಳಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದರು.

ಮಸೀದಿ, ಚರ್ಚ್ ಮತ್ತು ದೇವಸ್ಥಾನಗಳಿಗೆ ಬರುವ ಭಕ್ತಾದಿಗಳಿಗೆ ಮೊದಲ‌ ಮತ್ತು ಎರಡನೆಯ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಲಸಿಕೆ ಪಡೆಯದ ಭಕ್ತಾದಿಗಳಿಗೆ ಸ್ಥಳದಲ್ಲಿ ಅಭಿಯಾನಕ್ಕೆ ನಿಯೋಜಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸ್ಥಳದಲ್ಲೇ ಲಸಿಕೆ ನೀಡಲು ಪ್ರೇರೇಪಿಸಬೇಕು. ಲಸಿಕೆ ಅಭಿಯಾನ ಶೇ 100 ರಷ್ಟು ಯಶಸ್ವಿಯಾಗಲು ಧರ್ಮಗುರುಗಳು ಸಮುದಾಯದ ಜನರಿಗೆ ಜಾಗೃತಿ ಮೂಡಿಸಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಅಸಿಫ್ ಮಾತನಾಡಿ, ‘ನಾನು, ನನ್ನ ಕುಟುಂಬದ ಸದಸ್ಯರು ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೂ 7 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ. ಯಾರಿಗೂ ಅಡ್ಡ ಪರಿಣಾಮ ಆಗಿಲ್ಲ ಎಂದು ಹೇಳಿದರು.

ಮೆಥೋಡಿಸ್ಟ್ ಚರ್ಚ್ ಫಾದರ್ ರೆವರೆಂಡ್ ಎ. ಸೀಮೋನ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 60 ಹಾಗೂ ರಾಯಚೂರು ನಗರದಲ್ಲಿ ಮೂರು ಚರ್ಚ್‌ಗಳಿದ್ದು ಪ್ರತಿ ಭಾನುವಾರ ಚರ್ಚ್‌ಗಳಿಗೆ ಬರುವ ಕ್ರೈಸ್ತರಿಗೆ ಲಸಿಕೆ ಅಭಿಯಾನ ಮಾಡಬೇಕು. ಇದಕ್ಕೆ ಅಗತ್ಯ ಚರ್ಚ್ ಆಡಳಿತ ಮಂಡಳಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಉಚಿತ ಲಸಿಕೆ ಅಭಿಯಾನ ಮಾಡುತ್ತಿದ್ದು ಶ್ಲಾಘನೀಯ ಎಂದರು.

ಮುಸ್ಲಿಂ ಮುಖಂಡ ಸೈಯದ್ ಶಾ ನಾಸಿರುದ್ದೀನ್ ಖಾದ್ರಿ ಹಾಗೂ ಶೇಕ್ ಅಲಿ ಶಹೀದ್ ದರ್ಗಾದ ಸೈಯದ್ ಮುರ್ಷಿದ್ ಜಾನಿಖಾದ್ರಿ ಮಾತನಾಡಿ, ಕೋವಿಡ್ ಮಹಾಮಾರಿ ಕ್ಯಾನ್ಸರ್‌ಗಿಂತ ಭಯಾನಕವಾದುದು. ಕೊವಿಡ್‌ನಿಂದಾಗಿ ಸಾವಿರಾರು ಜನ ಸಾವನ್ನಪ್ಪಿದ್ದು ದುರಾದೃಷ್ಟಕರ. ಕೋವಿಡ್ ನಿರ್ಮೂಲನೆಗೆ ಲಸಿಕೆಒಂದೇ ಅಸ್ತ್ರ. ಮುಸ್ಲಿಮರು ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುವ ಕಾರಣ ಅಂದು ಲಸಿಕೆ ಅಭಿಯಾನ ಕೈಗೊಂಡರೆ, ಅದಕ್ಕೆ ಸಹಕರಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಉಪ ವಿಭಾಗೀಯ ಅಧಿಕಾರಿ ಸಂತೋಷ ಕಾಮಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಕೆ.ನಾಗರಾಜ, ತಹಶೀಲ್ದಾರ್ ಡಾ. ಹಂಪಣ್ಣ ಸಜ್ಜನ್, ಆರೋಗ್ಯ ಅಧಿಕಾರಿ ಡಾ.ವಿಜಯ, ನಗರಸಭೆ ಪೌರಾಯುಕ್ತ ಕೆ. ಮುನಿಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಶಾಕೀರ್ ಸೇರಿದಂತೆ ಸರ್ವಧರ್ಮದ ಮುಖಂಡರು ನಗರಸಭೆ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.