ಗುರುವಾರ , ಆಗಸ್ಟ್ 5, 2021
22 °C
ಬಪ್ಪೂರು ರಸ್ತೆಗೆ ಡಾಂಬರ್ ಮೇಲೆ ಡಾಂಬರ್: ಸಾರ್ವಜನಿಕರ ವಿರೋಧ

ಸಿಂಧನೂರು: ಹಾದಿ ತಪ್ಪಿದ ರಸ್ತೆ ಸುಧಾರಣಾ ಕಾಮಗಾರಿ

ಡಿ.ಎಚ್.ಕಂಬಳಿ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ನಗರದ ಕುಷ್ಟಗಿ ಮುಖ್ಯ ರಸ್ತೆಯಿಂದ ಮಲ್ಲಾಪುರ ಕ್ರಾಸ್‍ವರೆಗೆ ಬಪ್ಪೂರು ರಸ್ತೆ ಸುಧಾರಣಾ ಕಾಮಗಾರಿ ಹೆಸರಿನಲ್ಲಿ ರಸ್ತೆಗೆ ಡಾಂಬರ್ ಮೇಲೆ ಡಾಂಬರ್ ಹಾಕುವ ಮೂಲಕ ಸುಧಾರಣಾ ಕಾಮಗಾರಿಯ ಹಾದಿಯನ್ನೇ ತಪ್ಪಿಸಲಾಗುತ್ತಿದೆ ಎಂದು ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕುಷ್ಟಗಿ ರಸ್ತೆಯಿಂದ ಹಿರೇಹಳ್ಳದವರೆಗೆ ರಸ್ತೆಯನ್ನು ಅಗೆದು ಮರಂ ತುಂಬಿ ವೆಟ್‍ಮಿಕ್ಸ್ ಹಾಕಿ ಹೊಸದಾಗಿ ಡಾಂಬರ್ ಹಾಕಲಾಗುತ್ತಿದೆ. ಅದರಂತೆ ಸರ್ಕಾರಿ ಉಗ್ರಾಣದಿಂದ ಮಲ್ಲಾಪುರ ಅಡ್ಡರಸ್ತೆಯವರೆಗಿನ 1 ಕಿ.ಮೀ ರಸ್ತೆಯನ್ನು ಆಳಕ್ಕೆ ಅಗೆದು ಮರಂ ಮತ್ತು ವೆಟ್ ಮಿಕ್ಸ್ ಹಾಕಿ ನಂತರ ಡಾಂಬರೀಕರಣ ಮಾಡಲಾಗುತ್ತಿದೆ.

ಆದರೆ, ಹಿರೇಹಳ್ಳದಿಂದ ಸರ್ಕಾರಿ ಉಗ್ರಾಣ ನಿಗಮದವರೆಗೆ 1 ಕಿ.ಮೀ ಮಾತ್ರ ಡಾಂಬರ್ ಹಾಕಿದ ರಸ್ತೆಯಿದ್ದು, ಅದರ ಮೇಲೆಯೇ ಡಾಂಬರ್ ಹಾಕುವ ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಹೇಳುತ್ತಾರೆ.

‘3 ಕಿ.ಮೀ ರಸ್ತೆಯಲ್ಲಿ 2 ಕಿ.ಮೀ ಸುಸಜ್ಜಿತವಾಗಿ, ಇನ್ನೊಂದು ಕಿ.ಮೀ., ಮಾತ್ರ ತೇಪೆ ಹಾಕುವ ಕೆಲಸ ಮಾಡಿದರೆ ಒಂದೆರೆಡು ವರ್ಷವೂ ಉಳಿಯಲಾರದು‘ ಎಂದು ಎಪಿಎಂಸಿ ಮಾಜಿ ನಿರ್ದೇಶಕ ಟಿ.ಪಂಪನಗೌಡ ರೈತರ ಸಂಘದ ಮುಖಂಡ ನಾಗರೆಡ್ಡೆಪ್ಪ ಸಾಹುಕಾರ ಆಪಾದಿಸಿದ್ದಾರೆ.

‘3 ಕಿ.ಮೀ ರಸ್ತೆಯಲ್ಲಿ ಎರಡು ಕಡೆ ಸುಸಜ್ಜಿತವಾಗಿ ರಸ್ತೆ ನಿರ್ಮಿಸಿ ಮಧ್ಯದ ಒಂದು ಕಿ.ಮೀ. ಕಳಪೆ ಮಾಡುವುದಕ್ಕೆ ಬಿಡುವದಿಲ್ಲ‘ ಎಂದು ನಗರಸಭೆ ಸದಸ್ಯ ಹನುಮೇಶ ಕುರುಕುಂದಿ, ಶಂಕ್ರಪ್ಪ, ಶರಣಪ್ಪ ಚಿರತ್ನಾಳ, ಹುಸೇನಸಾಬ ತಿಳಿಸಿದ್ದಾರೆ.

ರಸ್ತೆ ನಿರ್ಮಾಣದಲ್ಲಿ ತಾರತಮ್ಯ ಒಂದು ಕಡೆಯಾದರೆ ಕುಡಿಯುವ ನೀರಿನ ಪೈಪ್‍ನ್ನು ಒಡೆದು ಹಾಕಿದ್ದಾರೆ. ನಾಲ್ಕು ತಿಂಗಳಿನಿಂದ ಹಳ್ಳದ ಕಡೆಯ ನಿವಾಸಿಗಳಿಗೆ ಕುಡಿಯುವ ನೀರಿಲ್ಲ. ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ ಸೇರಿದಂತೆ ಎಲ್ಲ ರಾಜಕಾರಣಿಗಳು ಪೈಪ್‍ಲೈನ್ ಹಾಕಿ ಕುಡಿಯುವ ನೀರು ಪೂರೈಕೆಗೆ ಅನುಕೂಲ ಮಾಡಿಕೊಡುವಂತೆ ತಿಳಿಸಿದಾಗ್ಯೂ ಗುತ್ತಿಗೆದಾರ ಉಮೇಶ ಪಾಟೀಲ ಗಮನಕ್ಕೆ ತೆಗೆದುಕೊಳ್ಳದೆ ಸಾರ್ವಜನಿಕರಿಗೆ ಕುಡಿಯುವ ನೀರು ಇಲ್ಲದೆ ಮಾಡಿದ್ದಾರೆ ಎಂದು ನಗರಸಭೆ ಸದಸ್ಯ ಹನುಮೇಶ ಕುರುಕುಂದಾ ಆರೋಪಿಸಿದ್ದಾರೆ.

‘ರಸ್ತೆ ಪೂರ್ಣ ದುರಸ್ತಿಗೆ ಆದ್ಯತೆ’

‘ರಸ್ತೆಯ ಎರಡೂ ಪಕ್ಕದಲ್ಲಿ ಅಗೆದು ಡಾಂಬರ್ ರಸ್ತೆಯಿಂದ ನೀರು ಹರಿದು ಹೋಗುವ ವ್ಯವಸ್ಥೆ ಮಾಡುತ್ತೇವೆ. ಸರ್ಕಾರದ ಉಗ್ರಾಣ ನಿಗಮದಿಂದ ಮಲ್ಲಾಪುರ ರಸ್ತೆಯವರೆಗಿನ 1 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಆದ್ದರಿಂದ ರಸ್ತೆಯನ್ನು ಪೂರ್ಣ ಅಗೆದು ಪುನರ್ ರಚಿಸಲಾಗಿದೆ. ಆದರೆ ಹಳ್ಳದಿಂದ ಉಗ್ರಾಣದವರೆಗಿನ 1 ಕಿ.ಮೀ ರಸ್ತೆ ಉತ್ತಮವಾಗಿದೆ. ಆದಕಾರಣ ದುರ್ಬಲವಾಗಿರುವ ಭಾಗವನ್ನು ಮಾತ್ರ ತೆಗೆದು ಪುನಃ ರಸ್ತೆ ಸುಧಾರಿಸಲಾಗುವುದು‘ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜನಿಯರ್ ಸಿ.ಎಸ್.ಪಾಟೀಲ್ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು