ಸಿಎಂ ವಾಸ್ತವ್ಯ: ಉಸಿರುಗಟ್ಟಿದ್ದ ಶಾಲೆಗೆ ಜೀವ!

ಭಾನುವಾರ, ಜೂಲೈ 21, 2019
28 °C

ಸಿಎಂ ವಾಸ್ತವ್ಯ: ಉಸಿರುಗಟ್ಟಿದ್ದ ಶಾಲೆಗೆ ಜೀವ!

Published:
Updated:
Prajavani

ರಾಯಚೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜೂನ್‌ 26 ರಂದು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರೇಗುಡ್ಡಕ್ಕೆ ಗ್ರಾಮ ವಾಸ್ತವ್ಯಕ್ಕಾಗಿ ಬರುವುದರಿಂದ ಗ್ರಾಮದಲ್ಲಿ ಇವರೆಗೂ ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮರುಜೀವ ತುಂಬಿಕೊಂಡಿದೆ.

ಮಕ್ಕಳು ಆಟ ಆಡುವುದಕ್ಕೂ ಜಾಗವಿಲ್ಲದ ಕಿಷ್ಕಿಂದೆಯಂತಹ ಸ್ಥಳದಲ್ಲಿ ನಿರ್ಮಿಸಿದ ಶಾಲಾ ಕೋಣೆಗಳು ಅವ್ಯವಸ್ಥೆಯ ಆಗರವಾಗಿದ್ದವು. ಶಾಲೆಗೆ ಆವರಣ ಗೋಡೆ ಇದ್ದರೂ ಇಲ್ಲದಂತಿತ್ತು. ಹಿಂಭಾಗದ ಗೋಡೆಗೆ ಅಂಟಿಕೊಂಡು ತಿಪ್ಪೆ ರಾಶಿ. ಪ್ರವೇಶದ್ವಾರಕ್ಕೆ ಹೊಂದಿಕೊಂಡು ದನಕರುಗಳನ್ನು ಕಟ್ಟಲಾಗುತ್ತಿದೆ. ಶುಚಿತ್ವವೂ ಇಲ್ಲ, ಸುಸಜ್ಜಿತ ಶೌಚಾಲಯವು ಇಲ್ಲದ ಸ್ಥಿತಿಯಲ್ಲಿ ಸರ್ಕಾರಿ ಶಾಲೆ ಇತ್ತು.

ಮುಖ್ಯಮಂತ್ರಿ ವಾಸ್ತವ್ಯದ ದಿನದಂದು ಮಲಗುವುದಕ್ಕೆ ವ್ಯವಸ್ಥೆ ಮಾಡಿದ ಶಾಲೆಯ ಸ್ಮಾರ್ಟ್ ಕ್ಲಾಸ್‌ನ ಕಿಟಕಿಯ ಪಕ್ಕದಲ್ಲೆ ತಿಪ್ಪೆರಾಶಿ ಇದೆ. ಇಷ್ಟು ದಿನ ಶಾಲಾಕೋಣೆಗೆ ದುರ್ನಾತ ಸೂಸುತ್ತಿತ್ತು. ಆದರೆ, ಕಳೆದ ಒಂದು ವಾರದಲ್ಲಿ ಶಾಲೆಯ ಚಿತ್ರಣ ಸಂಪೂರ್ಣ ಬದಲಾಗಿದೆ.

ಕಳೆಗುಂದಿದ್ದ ಶಾಲಾ ಗೋಡೆಗಳು ಹೊಳಪು ತುಂಬಿಕೊಂಡಿವೆ. ಗೋಡೆಗಳ ಮೇಲೆ ಬಿಡಿಸಿರುವ ವರ್ಣ ವೈವಿಧ್ಯ ಚಿತ್ರಗಳು ಮಕ್ಕಳಲ್ಲಿ ಹೊಸ ಹುರುಪು ತುಂಬಿವೆ. ಶಾಲಾ ಪರಿಸರವು ಶುಚಿತ್ವದಿಂದ ಕಂಗೊಳಿಸಲಾರಂಭಿಸಿದ್ದು, ಮಕ್ಕಳ ಓದಿಗೆ ಈಗಲಾದರೂ ಉತ್ತಮ ಸೌಲಭ್ಯ ಬಂತು ಎನ್ನುವ ಮಾತುಗಳನ್ನು ಗ್ರಾಮಸ್ಥರು ಹೇಳುತ್ತಿದ್ದಾರೆ.

ಶಾಲೆಗೆ ತಲೆ ಎತ್ತರದ ಆವರಣ ಗೋಡೆ ನಿರ್ಮಾಣವಾಗಿದೆ. ಶಿಥಿಲವಾಗಿದ್ದ ಶೌಚಾಲಯಗಳನ್ನು ತೆರವುಗೊಳಿಸಿ ಒಂದೇ ವಾರದಲ್ಲಿ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಮುಖ್ಯಮಂತ್ರಿಯ ಒಂದು ದಿನದ ವಾಸ್ತವ್ಯಕ್ಕಾಗಿ ಶಾಲೆಯು ಹೊಸ ಸ್ವರೂಪ ಪಡೆದಿದೆ.

ಮೊದಲು ಕೆಲಸ; ಆಮೇಲೆ ಹೊಂದಾಣಿಕೆ!
ಮುಖ್ಯಮಂತ್ರಿಗಳ ವಾಸ್ತವ್ಯಕ್ಕಾಗಿ ಸಿದ್ಧತೆಗಳನ್ನು ಭರದಿಂದ ಕೈಗೊಳ್ಳಲಾಗಿದೆ. ಕರೇಗುಡ್ಡ ಗ್ರಾಮದಲ್ಲಿ ವಿದ್ಯುತ್‌, ನೀರು, ರಸ್ತೆ ಹಾಗೂ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಇವೆಲ್ಲ ತುರ್ತು ಕೆಲಸಕ್ಕಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಶಾಸಕರ ನಿಧಿಯಿಂದ ₹50 ಲಕ್ಷ ಒದಗಿಸಿದ್ದಾರೆ. ಅಲ್ಲದೆ, ಆಯಾ ಇಲಾಖೆಗೆ ಒಪ್ಪಿಸಿರುವ ಕೆಲಸಗಳನ್ನು ಅಧಿಕಾರಿಗಳು ಮೊದಲು ಮಾಡಿ ಮುಗಿಸಬೇಕು, ಆನಂತರ ವೆಚ್ಚ ಭರಿಸಲು ಅನುದಾನ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

*
ಶಾಲೆಯ ಕಟ್ಟಡ ಹಳೆಯದಾಗಿತ್ತು. ಮುಖ್ಯಮಂತ್ರಿಗಳು ಶಾಲೆಗೆ ಬರುತ್ತಿರುವ ಕಾರಣ ಶಾಲೆಯ ಕೊಠಡಿಗಳಿಗೆ ಸುಣ್ಣ ಬಣ್ಣ ಹಚ್ಚಿ ಅಲಂಕರಿಸುತ್ತಿರುವುದರಿಂದ ಶಾಲೆಯ ಅಂದ ಹೆಚ್ಚಿದೆ. ಶಾಲೆಯ ಹೊಸ ಕಟ್ಟಡ ನೋಡಿ ನಮಗೆಲ್ಲಾ ಖುಷಿಯಾಗುತ್ತಿದೆ.
–ಭಾರತಿ ಮಹಾಂತೇಶ, 7ನೇ ತರಗತಿ ವಿದ್ಯಾರ್ಥಿನಿ

*
ಶಾಲಾ ಕಟ್ಟಡದ ಹೊಸನೋಟ ನೋಡಿ ನಮಗೆ ಸಂತಸವಾಗುತ್ತಿದೆ.. ಶಾಲೆಯ ಎಲ್ಲಾ ಕೊಠಡಿಗಳಿಗೆ ಫ್ಯಾನ್‌ ,ಹೊಸ ಕಾಂಪೌಂಡ್‌ ಗೋಡೆ ಮತ್ತು ಗೇಟ್‌ಅಳವಡಿಸಲಾಗಿದೆ. ಶಾಲೆಯಲ್ಲಿ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಶಾಲೆಯ ಅಂದ ಚೆಂದ ಹೆಚ್ಚಾಗಿ ಆಕರ್ಷಕವಾಗಿ ಕಾಣುತ್ತಿದೆ.
–ಮನೋಜ್‌ ಅಂಬಯ್ಯ, 7ನೇ ತರಗತಿ ವಿದ್ಯಾರ್ಥಿ,

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !