ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಇದೆ

ಶ್ರೀ ರಮಾನಂದ ತೀರ್ಥ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಕರ್ತ ಸುಗತ ಶ್ರೀನಿವಾಸ ವಿಷಾದ
Last Updated 10 ಫೆಬ್ರುವರಿ 2019, 14:23 IST
ಅಕ್ಷರ ಗಾತ್ರ

ರಾಯಚೂರು: ಕರ್ನಾಟಕ ಎನ್ನುವ ಪದ ಹೇಳುವಾಗ ಮೈಸೂರು ಪ್ರಾಂತಕ್ಕೆ ಸೇರಿದ ಭಾಗವನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಪ್ರಾದೇಶಿಕ ಅಸಮಾನತೆ ಈಗಲೂ ಇದೆ ಎಂದು ಪತ್ರಕರ್ತ ಸುಗತ ಶ್ರೀನಿವಾಸ್‌ ವಿಷಾದ ವ್ಯಕ್ತಪಡಿಸಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹೈದರಾಬಾದ್ ಕರ್ನಾಟಕ ಜನಾಂದೊಲದಿಂದ ಭಾನುವಾರ ಏರ್ಪಡಿಸಿದ್ದ ಶ್ರೀ ಸ್ವಾಮಿ ರಮಾನಂದ ತೀರ್ಥ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಆದಾಯದಲ್ಲಿ ಬೆಂಗಳೂರಿನಿಂದಲೇ ಶೇ 63 ರಷ್ಟು ಪಾಲಿದೆ. ಆದರೆ, ಅದು ಅಷ್ಟೊಂದು ಶರವೇಗದಲ್ಲಿ ಬೆಳೆಯಬೇಕಾದರೆ ಉತ್ತರ ಕರ್ನಾಟಕದ ಭಾಗದ ಜನರ ಕೊಡುಗೆ ಅಪಾರ ಎಂಬುದನ್ನು ಆಳುವ ಸರ್ಕಾರಗಳು ಮನಗಾಣಬೇಕು ಎಂದರು.

‘ತಮ್ಮ ಆದಾಯ ಹೆಚ್ಚು ಎಂಬ ಕಾರಣಕ್ಕೆ ಕರ್ನಾಟಕ ಏಕೀಕರಣಕ್ಕೆ ಮೈಸೂರು ಪ್ರಾಂತ್ಯದ ಜನ ವಿರೋಧಿಸಿದ್ದರು. ಅಂದು ಅವರು ತೋರಿದ್ದ ಪ್ರಾದೇಶಿಕ ತಾರತಮ್ಯ ಇಂದಿಗೂ ಮುಂದುವರಿದಿದೆ’ ಎಂದು ಹೇಳಿದರು.

‘ಈ ಭಾಗದ ರಾಜಕಾರಣಿಗಳ ಭಾಷೆಯು ಅಧಿಕಾರದಿಂದ ಕೂಡಿದೆ. ಅದು ರಾಜಕೀಯ ಭಾಷೆಯಾದಾಗ ಮಾತ್ರ ಇಲ್ಲಿಯೂ ಬದಲಾವಣೆ ಕಾಣಲು ಸಾಧ್ಯ. ಜಾತಿ, ಧರ್ಮ ಹೆಸರಿನಲ್ಲಿ ಅಧಿಕಾರ ಕೇಳುತ್ತಾರೆ. ಕೆಡಕಿನ ವಿಚಾರಗಳಿಗೆ ಮಾತ್ರ ಈ ಭಾಗವನ್ನು ಗುರುತಿಸುವ ಸ್ಥಿತಿ ಬರಬಾರದು’ ಎಂದರು.

ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಮಾತನಾಡಿ, ‘ನಮ್ಮ ರಾಜ್ಯ ಇಬ್ಬರು ಮಹಾನ್ ಸಾಧಕರನ್ನು ಬಿಟ್ಟುಕೊಟ್ಟಿದೆ. ಒಬ್ಬರು ಭೀಮಸೇನ್ ಜೋಷಿ, ಮತ್ತೊಬ್ಬರು ರಮಾನಂದ ತೀರ್ಥರು. ಈ ಇಬ್ಬರು ಮಾಡಿದ ಸಾಧನೆ ವರ್ಣಿಸುವುದು ಕಷ್ಟ. ಇಬ್ಬರೂ ಕನ್ನಡಿಗರು ಎನ್ನುವುದೇ ಖುಷಿಯ ವಿಚಾರ’ ಎಂದು ಹೇಳಿದರು.

’ಈ ಭಾಗದ ಜನಪ್ರತಿನಿಧಿಗಳ ಆಯ್ಕೆ ಬಗ್ಗೆ ಜನ ಚಿಂತಿಸಬೇಕಿದೆ. ಕಾಲ ಬದಲಾದಂತೆ ಜನರೂ ಬದಲಾಗಬೇಕು. ಹೈದರಾಬಾದ್ ವಿಮೋಚನೆಗೆ ರಮಾನಂದ ತೀರ್ಥರ ಹೋರಾಟ ಎಂದಿಗೂ ಮರೆಯುವಂಥದ್ದಲ್ಲ. ಅವರ ಹೆಸರಿನಲ್ಲಿ ಜಿಲ್ಲೆಯಲ್ಲಿ ಒಂದು ರಾಜಕೀಯ ತರಬೇತಿ ಶಾಲೆ ತೆರೆಯಬೇಕು’ ಎಂದು ಒತ್ತಾಯಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟಗಾರ ರಾಘವೇಂದ್ರ ಕುಷ್ಟಗಿ, ‘ಈ ಪ್ರಶಸ್ತಿ ನೀಡುವ ಮೂಲಕ ಸಾಧಕರು ಹಾಗೂ ರಮಾನಂದ ತೀರ್ಥರನ್ನು ಸ್ಮರಿಸುತ್ತಿದ್ದೇವೆ’ ಎಂದರು.

ಹೈದರಾಬಾದ್‌ ಕರ್ನಾಟಕದಲ್ಲಿ 371–ಜೆ ಜಾರಿಯಿಂದ ವೃತ್ತಿಪರ ಕೋರ್ಸ್‌ಗಳಲ್ಲಿ ಮತ್ತು ಉದ್ಯೋಗದಲ್ಲಿ ಈ ಭಾಗದ ಯುವಕರಿಗೆ ವಿಪುಲ ಅವಕಾಶಗಳು ಸಿಗುತ್ತಿವೆ. ಆದರೆ, ಈ ಮೀಸಲಾತಿಗಾಗಿ ಹೋರಾಟ ನಡೆಸಿದ್ದ ವೈಜನಾಥ ಪಾಟೀಲ ಅವರನ್ನು ಯಾರೂ ನೆನಪಿಸಿಕೊಳ್ಳುತ್ತಿಲ್ಲ ಎಂದು ವಿಷಾದಿಸಿದರು.

ನಾರಾಯಣಪುರ ಬಲದಂಡೆ ಕಾಲುವೆ ಹೋರಾಟದ ಪ್ರಮುಖ ರೂವಾರಿ ಚಂದ್ರಶೇಖರ್ ಬಾಳೆ ಅವರಿಗೆ ಶ್ರೀ ರಮಾನಂದ ತೀರ್ಥ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ.ಕಿರಣ ಖೇಣೇದ್, ನಾಗರಿಕ ವೇದಿಕೆ ಅಧ್ಯಕ್ಷ ಭಂಡೂರಾವ್ ಚಾಗಿ ಮಾತನಾಡಿದರು. ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ಭಂಡಾರಿ ವೀರಣ್ಣ ಶೆಟ್ಟಿ, ಬೆಂಗಳೂರಿನ ಮಹಿಳಾ ಒಕ್ಕೂಟದ ಕಮಲಾ ಚಂದ್ರಶೇಖರ್ ಬಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT