ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ದಟ್ಟಣೆ ನಿಯಂತ್ರಣಕ್ಕೆ ಸಿಗ್ನಲ್ ದೀಪ

ಪುರಸಭೆಯ 14ನೇ ಹಣಕಾಸು ಯೋಜನೆಯಲ್ಲಿ ₹ 20.4ಲಕ್ಷ ವೆಚ್ಚ
Last Updated 16 ಏಪ್ರಿಲ್ 2021, 5:29 IST
ಅಕ್ಷರ ಗಾತ್ರ

ಮಾನ್ವಿ: ಪಟ್ಟಣದಲ್ಲಿ ವಾಹನಗಳ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ದೀಪಗಳ ಅಳವಡಿಕೆಗೆ ಸ್ಥಳೀಯ ಪುರಸಭೆ ಆಡಳಿತ ಮುಂದಾಗಿದೆ.

ಸದಾ ಜನ ಜಂಗುಳಿ, ವಾಹನಗಳ ಸಂಚಾರ ಹೆಚ್ಚಾಗಿರುವ ರಾಯಚೂರು ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಪಟ್ಟಣದ ಮಧ್ಯಭಾಗದಲ್ಲಿರುವ ಬಸವ ವೃತ್ತ ಹಾಗೂ ಸಿಂಧನೂರು ರಸ್ತೆಯ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಸಿಗ್ನಲ್ ದೀಪಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ.

ಪುರಸಭೆಯ 2019-20ನೇ ಸಾಲಿನ 14ನೇ ಹಣಕಾಸು ಯೋಜನೆಯ ₹ 20.04 ಲಕ್ಷ ವೆಚ್ಚದಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲಿ ಸೇವೆ ಒದಗಿಸಲಿವೆ.

ಪಟ್ಟಣದ ಮುಖಾಂತರ ರಾಜ್ಯ ಹೆದ್ದಾರಿ ಹಾದು ಹೋಗಿರುವುದರಿಂದ ನಿತ್ಯ ಅಂತರರಾಜ್ಯ ಸರಕು ಸಾಗಣೆ ವಾಹನಗಳು, ಮರಳು ಸಾಗಣಿಕೆಯ ಟಿಪ್ಪರ್‍ಗಳ ಸಂಚಾರ ಅಧಿಕವಾಗಿದೆ. ತಾಲ್ಲೂಕಿನ ಗ್ರಾಮೀಣ ಭಾಗದಿಂದ ಪ್ರತಿ ದಿನ ನೂರಾರು ಸಂಖ್ಯೆಯ ಆಟೊ ವಾಹನ, ಟಂ ಟಂ ಗಾಡಿಗಳು, ಲಾರಿ ಮತ್ತು ಟ್ರ್ಯಾಕ್ಟರ್‌ಗಳು ತಾಲ್ಲೂಕು ಕೇಂದ್ರವಾದ ಮಾನ್ವಿ ಪಟ್ಟಣಕ್ಕೆ ಬರುತ್ತವೆ.

ಪಟ್ಟಣದ ಪ್ರಮುಖ ವೃತ್ತಗಳಲ್ಲಿ ದ್ವಿಚಕ್ರ ವಾಹನಗಳ ಸವಾರರು ಅತೀ ವೇಗವಾಗಿ ವಾಹನಗಳನ್ನು ಓಡಿಸುವುದು ಸಾಮಾನ್ಯವಾಗಿದೆ. ಬಸವ ವೃತ್ತ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತಗಳಲ್ಲಿ ಪಾದಚಾರಿಗಳು ಆತಂಕದಿಂದ ರಸ್ತೆ ದಾಟಬೇಕಾದ ಪರಿಸ್ಥಿತಿ ಇದೆ. ಕಾರಣ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ದೀಪಗಳ ಅಳವಡಿಕೆಯಿಂದ ವಾಹನಗಳ ಸಂಚಾರ ನಿಯಂತ್ರಣಕ್ಕೆ ಬರಲಿದೆ.

ಸ್ಥಳೀಯ ಶಾಸಕ ರಾಜಾ ವೆಂಕಟಪ್ಪ ನಾಯಕ ಪಟ್ಟಣದಲ್ಲಿ ರಾಜ್ಯಹೆದ್ದಾರಿಯ ಮಧ್ಯೆ ರಸ್ತೆ ವಿಭಜಕ ನಿರ್ಮಾಣ, ವಿದ್ಯುದ್ದೀಪಗಳ ಅಳವಡಿಕೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿವತಿಯಿಂದ ₹ 1ಕೋಟಿ ಅನುದಾನ ನೀಡಿದ್ದಾರೆ.

ಈ ಕಾಮಗಾರಿ ಅಡಿಯಲ್ಲಿ ಎಪಿಎಂಸಿಯಿಂದ ಕಲ್ಮಠದ ಧ್ಯಾನ ಮಂದಿರದವರೆಗೆ ಹಾಗೂ ಸೂರ್ಯ ರೈಸ್ ಮಿಲ್‍ನಿಂದ ಹೊಸ ಎಲ್‍ಐಸಿ ಕಚೇರಿವರೆಗೆ ರಸ್ತೆ ಮಧ್ಯೆ ವಿಭಜಕ ನಿರ್ಮಾಣ, ವಿದ್ಯುದ್ದೀಪಗಳ ಅಳವಡಿಕೆ ಉದ್ದೇಶ ಹೊಂದಲಾಗಿದೆ. ಆಡಳಿತಾತ್ಮಕ ಮಂಜೂರಾತಿ ದೊರೆತ ನಂತರ ಲೋಕೋಪಯೋಗಿ ಇಲಾಖೆವತಿಯಿಂದ ಸದರಿಕಾಮಗಾರಿ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ಪಟ್ಟಣದಲ್ಲಿ
ಸಂಚಾರ ನಿಯಂತ್ರಣಕ್ಕೆ ಪುರಸಭೆ ಕೈಗೊಂಡಿರುವ ಕ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT