ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಸಿದ್ಧತೆ ಪೂರ್ಣ

30,413 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜು
Last Updated 22 ಜೂನ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಕೋವಿಡ್‌ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಿಕೊಂಡು ನಡೆಸುವುದಕ್ಕೆ ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಮ ಕೈಗೊಂಡಿದ್ದಾರೆ.

ಒಟ್ಟು 30,413 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಹೊರಜಿಲ್ಲೆಗಳಲ್ಲಿ ಓದುತ್ತಿದ್ದ ರಾಯಚೂರು ಜಿಲ್ಲೆಯ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮೀಪದ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 83 ಪರೀಕ್ಷಾ ಕೇಂದ್ರಗಳಿದ್ದು, ಎಲ್ಲ ಪರೀಕ್ಷಾ ಕೋಣೆಗಳಲ್ಲಿ ಸ್ಯಾನಿಟೈಜ್‌ ಮಾಡಿಸಲಾಗಿದೆ.

ಪರೀಕ್ಷೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗೂ ನಾಲ್ಕು ಮಾಸ್ಕ್‌ ಉಚಿತವಾಗಿ ಒದಗಿಸಲಾಗುತ್ತಿದೆ. ಇದಕ್ಕಾಗಿ ವಿವಿಧ ಸಂಘ–ಸಂಸ್ಥೆಗಳಿಂದ ಈಗಾಗಲೇ 1.2 ಲಕ್ಷ ಮಾಸ್ಕ್‌ ಸಂಗ್ರಹಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ 10 ಲೀಟರ್‌ ಸ್ಯಾನಿಟೈಜರ್‌ ಒದಗಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ವಹಿಸುವುದಕ್ಕಾಗಿ ಆಶಾ ಕಾರ್ಯಕರ್ತೆಯರು, ದಾದಿಯರನ್ನು ನಿಯೋಜಿಸಲಾಗುತ್ತಿದೆ.

ಸುಮಾರು ಎರಡು ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವಸತಿ ನಿಲಯಗಳಿಗೆ ಮರಳಿದ್ದು, ಅವರಿಗೆ ಭೋಜನ ಹಾಗೂ ಇತರೆ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಕುಡಿಯುವ ನೀರಿನ ಬಾಟಲಿಗಳನ್ನು ವಿದ್ಯಾರ್ಥಿಗಳೆ ತರುವಂತೆ ಸೂಚಿಸಲಾಗಿದೆ. ಆದರೂ ನೀರು ಅಗತ್ಯವಿದ್ದವರಿಗೆ ಪೇಪರ್‌ ಗ್ಲಾಸ್‌ನಲ್ಲಿ ಒದಗಿಸಲು ಅಧಿಕಾರಿಗಳು ಪೂರ್ವ ತಯಾರಿ ಮಾಡಿದ್ದಾರೆ.

ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುವವರು ಕಂಡು ಬಂದರೆ, ಇಂಥವರಿಗೆ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಎರಡು ಹೆಚ್ಚುವರಿ ಕೋಣೆಗಳನ್ನು ಕಾಯ್ದಿರಿಸಿದ್ದು, ಅನಾರೋಗ್ಯ ಕಂಡುಬಂದವರನ್ನು ಈ ಕೋಣೆಯಲ್ಲಿ ಕುಳಿತು ಪರೀಕ್ಷೆ ಬರೆಯಲು ಹೇಳಲಾಗುತ್ತದೆ.

ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮಗಳನ್ನು ನಡೆಯದಂತೆ ನಿಗಾ ವಹಿಸುವುದಕ್ಕೆ ಮತ್ತು ಪರಿಶೀಲನೆ ಮಾಡುವ ಕಾರ್ಯಕ್ಕೆ ಜಿಲ್ಲೆಯಲ್ಲಿ 31 ಸಂಚಾರಿ ಸ್ಕ್ವಾಡ್‌ ತಂಡಗಳನ್ನು ರಚಿಸಲಾಗಿದೆ. ಇದಲ್ಲದೆ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಒಬ್ಬರು ಸ್ಥಳೀಯ ಸ್ಕ್ಯಾಡ್‌ ಇರುತ್ತಾರೆ. ಈ ಬಗ್ಗೆ ಪರೀಕ್ಷೆ ನಡೆಸುವ ಸಿಬ್ಬಂದಿಗೆ ಹಾಗೂ ಅಧಿಕಾರಿಗಳಿಗೆ ಪೂರ್ವ ಸೂಚನೆಗಳನ್ನು ಒದಗಿಸಲಾಗಿದೆ, ಸಭೆಗಳನ್ನು ಮಾಡಲಾಗಿದೆ.

‘ತೆಲಂಗಾಣದ ಕೃಷ್ಣಾದಿಂದ ನಾಲ್ಕು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕೆ ರಾಯಚೂರಿಗೆ ಬರುತ್ತಿದ್ದಾರೆ. ಈ ವಿದ್ಯಾರ್ಥಿಗಳೆಲ್ಲರ ಗಂಟಲು ದ್ರುವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯನ್ನು ಆಧರಿಸಿ ಪರೀಕ್ಷೆಗೆ ಅನುಮತಿ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಸುವುದಕ್ಕೆ ಜಿಲ್ಲೆಯಲ್ಲಿ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT