ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮವಾಗಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ

ಜಿಲ್ಲೆಯಲ್ಲಿ 1,407 ವಿದ್ಯಾರ್ಥಿಗಳು ಗೈರುಹಾಜರಿ
Last Updated 25 ಜೂನ್ 2020, 12:53 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಗುರುವಾರದಿಂದ ಸುಗಮವಾಗಿ ಆರಂಭವಾಗಿವೆ. ಪರೀಕ್ಷಾ ಕೇಂದ್ರ ವಿಳಾಸದ ಬಗ್ಗೆ ಕೆಲವು ವಿದ್ಯಾರ್ಥಿಗಳು, ಪಾಲಕರು ಗೊಂದಲಕ್ಕೀಡಾಗಿ ಅತ್ತಿತ್ತ ಓಡಾಡಿದ ಪ್ರಸಂಗಗಳು ನಡೆದಿರುವುದನ್ನು ಬಿಟ್ಟರೆ ಯಾವುದೇ ಅಹಿತಕರ ಪ್ರಸಂಗಗಳು ಕಂಡುಬಂದಿಲ್ಲ.

ಪರೀಕ್ಷಾ ಕೇಂದ್ರಗಳ ಆಸುಪಾಸು ಪಾಲಕರು ಹಾಗೂ ಸಂಬಂಧಿಗಳು ನೆರೆದಿದ್ದ ನೋಟ ಸಾಮಾನ್ಯವಾಗಿತ್ತು. ಜನದಟ್ಟಣೆ ಆಗದಂತೆ ಪೊಲೀಸರು ಚದುರಿಸುತ್ತಿರುವುದು ಕಂಡುಬಂತು. ಅಕ್ಕಪಕ್ಕದ ಅಂಗಡಿಗಳಲ್ಲಿ ಜನ ಸಾಮಾಯಿಸಿದ್ದರು. ರಾಯಚೂರು ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಎದುರು ಜನದಟ್ಟಣೆ ಅತಿಯಾಗಿತ್ತು. ಗುಂಪು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಪರೀಕ್ಷೆ ಆರಂಭವಾಗುವ ಎರಡು ತಾಸು ಮೊದಲೇ ಪರೀಕ್ಷಾ ಕೇಂದ್ರಗಳ ಎದುರು ವಿದ್ಯಾರ್ಥಿಗಳು ಹಾಜರಾಗಿದ್ದರು. ಹೊರಗಡೆ ದಟ್ಟಣೆ ಏರ್ಪಟ್ಟಿದ್ದರೂ ಕೊಠಡಿಗಳಿಗೆ ಅಂತರ ಪಾಲನೆ ಮಾಡಿ, ಬಿಡಲಾಯಿತು. ಆಶಾ ಕಾರ್ಯಕರ್ತೆಯರು, ಎಎನ್‌ಎಂಗಳು ಥರ್ಮಲ್‌ ಸ್ಕ್ಯಾನರ್‌ನಿಂದ ತಪಾಸಣೆ ಮಾಡಿದರು. ಸ್ಯಾನಿಟೈಜರ್‌ ನೀಡಲಾಯಿತು. ಪ್ರತಿ ಕೊಠಡಿಯಲ್ಲಿ 20 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.

ಟಾಗೋರ್‌ ಮಹಾವಿದ್ಯಾಲಯ, ಸರ್ಕಾರಿ ಬಾಲಕಿಯರ ಪದವಿಪೂರ್ವ ಮಹಾವಿದ್ಯಾಲಯ, ಎಲ್‌ವಿಡಿ ಕಾಲೇಜು, ಇನ್‌ಫೆಂಟ್‌ ಜೀಸಸ್‌ ಶಾಲೆ ಸುತ್ತಮುತ್ತಲೂ ಮಧ್ಯಾಹ್ನ ಪರೀಕ್ಷೆ ಮುಗಿಯುವವರೆಗೂ ಸಂಬಂಧಿಗಳು ಕಾಯುತ್ತಾ ನಿಂತಿದ್ದರು.

ಮರುಪರೀಕ್ಷೆ ಬರೆದ 2,887 ವಿದ್ಯಾರ್ಥಿಗಳ ಹೊರತಾಗಿ ಈ ವರ್ಷ ಹೊಸದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು 27,544 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 1,407 ವಿದ್ಯಾರ್ಥಿಗಳು ಗೈರುಹಾಜರಿಯಾಗಿದ್ದರು. ರಾಯಚೂರು ತಾಲ್ಲೂಕಿನಲ್ಲಿ ಅತಿಹೆಚ್ಚು 7,983 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಎರಡನೇ ಅತಿಹೆಚ್ಚು ಲಿಂಗಸುಗೂರು ತಾಲ್ಲೂಕಿನಲ್ಲಿ 5,480 ಅತಿಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT