ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ: ಗ್ರಾಹಕರಿಗೆ ಹೊರೆಯಾದ ಸ್ಟ್ಯಾಂಪ್‌ ಡ್ಯೂಟಿ

Published 24 ಫೆಬ್ರುವರಿ 2024, 5:48 IST
Last Updated 24 ಫೆಬ್ರುವರಿ 2024, 5:48 IST
ಅಕ್ಷರ ಗಾತ್ರ

ಕವಿತಾಳ (ರಾಯಚೂರು ಜಿಲ್ಲೆ): ಸಹಕಾರ ಸಂಘಗಳಲ್ಲಿ ಗ್ರಾಹಕರು ಪಡೆಯುವ ಸಾಲದ ಮೊತ್ತದ ಮೇಲೆ ಶೇ 2ರಷ್ಟು ಸ್ಟ್ಯಾಂಪ್‌ ಡ್ಯೂಟಿ ವಿಧಿಸುವ ಮೂಲಕ ರಾಜ್ಯ ಸರ್ಕಾರ ಮಧ್ಯಮ ವರ್ಗದ ಗ್ರಾಹಕರು ಮತ್ತು ಗ್ರಾಮೀಣ ಭಾಗದ ಸಹಕಾರ ಸಂಘಗಳ ಮೇಲೆ ಪ್ರಹಾರ ನಡೆಸಿದೆ. ಸರ್ಕಾರದ ಈ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಗ್ರಾಮೀಣ ಭಾಗದ ಬಹುತೇಕ ಸಹಕಾರ ಸಂಘಗಳಲ್ಲಿ ಬಡ, ಮಧ್ಯಮ ವರ್ಗದ ರೈತರು, ಸಣ್ಣ ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಿಗಳು ವಿವಿಧ ವಸ್ತು, ಆಸ್ತಿಗಳನ್ನು ಅಡವಿಟ್ಟು ಸಾಲ ಪಡೆಯುತ್ತಾರೆ. ವಿವಿಧ ರೀತಿಯ ಸಾಲ ಪಡೆಯುವ ಗ್ರಾಹಕರು ಇದೀಗ ಸಾಲದ ಮೊತ್ತಕ್ಕೆ ಶೇ 2ರಷ್ಟು ಸ್ಟ್ಯಾಂಪ್‌ ಡ್ಯೂಟಿ ಕೊಡಬೇಕಾಗಿರುವುದರಿಂದ ಸರ್ಕಾರದ ನಡೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇನ್ನೊಂದೆಡೆ ಸಣ್ಣ ಹಾಗೂ ಮಧ್ಯಮ ವರ್ಗದ ಗ್ರಾಹಕರನ್ನೇ ನಂಬಿಕೊಂಡು ವ್ಯವಹರಿಸುತ್ತಿರುವ ಸಹಕಾರ ಸಂಘಗಳಿಗೆ ಇತ್ತ ಸರ್ಕಾರದ ಆದೇಶ ಪಾಲಿಸಲೂ ಆಗದೆ, ಅತ್ತ ಗ್ರಾಹಕರಿಗೆ ಸಾಲ ನೀಡಲೂ ಸಾಧ್ಯವಾಗದೆ ಪರದಾಡುತ್ತಿವೆ.

ಗ್ರಾಹಕರು ಸಂಘದಲ್ಲಿ ನಡೆಸುವ ವ್ಯವಹಾರ ಆಧರಿಸಿ ಅವರಿಗೆ ವೈಯಕ್ತಿಕ ಸಾಲ ಸೇರಿದಂತೆ ವಿವಿಧ ರೀತಿಯ ಸಾಲ ನೀಡುವಾಗ ಕನಿಷ್ಠ ₹100ರಿಂದ ₹300 ಮುಖಬೆಲೆಯ ಸ್ಟ್ಯಾಂಪ್‌ ಪೇಪರ್‌ ಮೇಲೆ ಒಪ್ಪಂದ ಮಾಡಿಕೊಳ್ಳಲಾಗುತ್ತಿತ್ತು. ಈಗ ಹೊಸ ನಿಯಮದ ಪ್ರಕಾರ ಸ್ಟ್ಯಾಂಪ್‌ ಪೇಪರ್‌ ಖರೀದಿಸುವಾಗ ಸಾಲದ ಮೊತ್ತ ನಮೂದಿಸಿದರೆ ಸ್ವಯಂಚಾಲಿತವಾಗಿ ಶೇ 2ರಷ್ಟು ಶುಲ್ಕದ ಜತೆಗೆ ಜಿಎಸ್‌ಟಿ ಸೇರಿ ಒಟ್ಟು ಮೊತ್ತ ತೋರಿಸುತ್ತದೆ. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ₹ 1 ಲಕ್ಷ ಮೊತ್ತದ ಸಾಲ ಪಡೆಯಲು ಶೇ 2ರ ಲೆಕ್ಕಾಚಾರದಲ್ಲಿ ಈಗ ₹ 2,000 ಸ್ಟ್ಯಾಂಪ್‌ ಡ್ಯೂಟಿಯನ್ನೇ ಪಾವತಿಸಬೇಕಾಗಿರುವುದು ಗ್ರಾಹಕರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

‘‌ಹೊಸ ನಿಯಮದ ಪ್ರಕಾರ ಸ್ಟ್ಯಾಂಪ್‌ ಪೇಪರ್‌ ಖರೀದಿಸಿ ಒಪ್ಪಂದ ಮಾಡಿಕೊಂಡು ಸಾಲ ಪಡೆಯಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಆರು ಗ್ರಾಹಕರು ಸಾಲ ಪಡೆಯದೆ ವಾಪಸಾಗಿದ್ದಾರೆ’ ಎಂದು ಸಹಕಾರ ಸಂಘದ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಸರಳ ದಾಖಲೆಗಳ ಜತೆಗೆ ತುರ್ತಾಗಿ ಸಾಲ ನೀಡುವ ಕಾರಣ ಸಹಕಾರ ಸಂಘಗಳಲ್ಲಿ ಸಾಲ ಪಡೆಯುತ್ತೇವೆ. ಈ ಮೊದಲು ₹100 ಮೊತ್ತದ ಸ್ಟ್ಯಾಂಪ್‌ ಡ್ಯೂಟಿ ನೀಡುತ್ತಿದ್ದೆವು. ಈಗ ಸಾಲದ ಮೊತ್ತಕ್ಕೆ ಶೇ 2ರಷ್ಟು ಸ್ಟ್ಯಾಂಪ್‌ ಡ್ಯೂಟಿ, ಅದರ ಜತೆಗೆ ಸಂಘಗಳು ವಿಧಿಸುವ ಸೇವಾ ಶುಲ್ಕ ಭರಿಸುವುದು ಕಷ್ಟ ಸಾಧ್ಯ. ಹೀಗಾಗಿ ಖಾಸಗಿ ವ್ಯಕ್ತಿಗಳ ಹತ್ತಿರ ಕೈ ಸಾಲ ಪಡೆಯುವುದು ಉತ್ತಮ ಅನಿಸುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಹಕರೊಬ್ಬರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT