ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ತಪ್ಪಿಲ್ಲ ಬಿಡಾಡಿ ದನಗಳ ಉಪಟಳ

ನಗರಸಭೆ ಮತ್ತು ಪೊಲೀಸರು ಆರಂಭಿಸಿದ್ದ ಕಾರ್ಯಾಚರಣೆ ಆರ್ಧಕ್ಕೆ ನಿಂತಿದೆ
Last Updated 18 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ವಾಹನಗಳ ಸಂಚಾರಕ್ಕೆ ಉಪಟಳವಾಗಿರುವ ಬಿಡಾಡಿ ದನಗಳನ್ನು ತೆರವುಗೊಳಿಸುವುದಕ್ಕಾಗಿ ಪೊಲೀಸರ ನೆರವಿನೊಂದಿಗೆ ನಗರಸಭೆಯು ಆರಂಭಿಸಿದ್ದ ಕಾರ್ಯಾಚರಣೆಯು ಇನ್ನೂ ಫಲ ನೀಡಿಲ್ಲ. ಎಲ್ಲಿ ನೋಡಿದರೂ ರಸ್ತೆಗಳ ಮದ್ಯೆ ದನಗಳ ಬೀಡಾರ ಕಾಣುತ್ತಿದೆ.

ರಾಷ್ಟ್ರೀಯ ಹೆದ್ದಾರಿ, ಬಡಾವಣೆಯ ರಸ್ತೆಗಳಲ್ಲೆಲ್ಲ ಬಿಡಾಡಿ ದನಕರುಗಳ ಠಿಕಾಣಿ ಹೂಡುತ್ತಿರುವುದರಿಂದ ಸಾರ್ವಜಿನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ದನಗಳ ಗುಂಪು ನೋಡಿ ಆತಂಕ ಪಡುತ್ತಿದ್ದಾರೆ. ಕೆಲವರು ದನಗಳನ್ನು ಬೇರೆ ಕಡೆಗೆ ಕಳುಹಿಸುವುದಕ್ಕೆ ಪ್ರಯತ್ನಿಸಿದರೂ ಸಫಲರಾಗುವುದಿಲ್ಲ.

ಕಳೆದ ತಿಂಗಳು ಬಿಡಾಡಿ ದನಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಿರುವುದನ್ನು ನೋಡಿ ಜನರು ಹರ್ಷಗೊಂಡಿದ್ದರು. ಆದರೆ, ಬಿಡಾಡಿ ದನಗಳನ್ನು ಹೊರಗೆ ಬಿಡುತ್ತಿರುವ ಜನಕ್ಕೆ ತಾಪತ್ರಯ ಎದುರಾಗಿತ್ತು. 450 ದನಗಳನ್ನು ಕಾರ್ಯಾಚರಣೆ ಮೂಲಕ ಹಿಡಿಯಲಾಗಿತ್ತು. ನಗರದ ಮಹಿಳಾ ಸಮಾಜ ಮೈದಾನ, ಕರ್ನಾಟಕ ಸಂಘದ ಆವರಣ ಹಾಗೂ ರೈತ ಸಮುದಾಯ ಭವನದ ಬಳಿ ಇರಿಸಲಾಗಿತ್ತು. ಅವುಗಳಿಗೆ ನಗರಸಭೆಯಿಂದಲೇ ಮೇವು ಹಾಗೂ ನೀರು ಒದಗಿಸುವ ಕಾರ್ಯ ಮಾಡಲಾಗುತ್ತಿದೆ.

ಅರ್ಧದಷ್ಟು ದನಕರುಗಳ ಮಾಲೀಕರು ದಂಡ ಪಾವತಿಸಿ ತೆಗೆದುಕೊಂಡು ಹೋಗಿದ್ದಾರೆ. 150 ಕ್ಕೂ ಹೆಚ್ಚು ದನಗಳನ್ನು ಆಲ್ಕೂರು ಗೋಶಾಲೆಯವರು ತೆಗೆದುಕೊಂಡು ಹೋಗಿದ್ದಾರೆ. ಇನ್ನು ಸುಮಾರು 80 ರಷ್ಟು ದನಗಳ ವಿಲೇವಾರಿ ಬಾಕಿ ಇದೆ. ರೈತ ಸಮುದಾಯ ಭವನದ ಬಳಿ ಇರಿಸಲಾಗಿದ್ದು, ಮೇವು ಒದಗಿಸುವುಕ್ಕಾಗಿ ನಗರಸಭೆಯು ಇವರೆಗೂ ₹1 ಲಕ್ಷ ವೆಚ್ಚ ಮಾಡಿದೆ.

ಕಾರ್ಯಾಚರಣೆಯಿಂದ ಸ್ವಲ್ಪ ಮಟ್ಟಿಗೆ ಬಿಡಾಡಿ ದನಗಳ ಸಂಖ್ಯೆ ಕಡಿಮೆಯಾಗಿದ್ದರೂ ಉದ್ದೇಶ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ. ವಾಹನಗಳ ಸಂಚಾರಕ್ಕೆ ಎದುರಾಗುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸವನ್ನು ಪೊಲೀಸ್‌ ಇಲಾಖೆಯವರು ಇನ್ನೂ ಮುಂದುವರಿಸಿದ್ದಾರೆ.

‘ಬಿಡಾಡಿ ದನಗಳನ್ನು ಹಿಡಿದುಕೊಂಡು ತರುವುದು ಸುಲಭವಲ್ಲ. ಇದಕ್ಕಾಗಿ ನಗರಸಭೆ ಸಿಬ್ಬಂದಿ, ಸಾರ್ವಜನಿಕರ ಸಹಕಾರ ತುಂಬಾ ಮುಖ್ಯ. ವಾರ್ಡ್‌ವಾರು ಸಾರ್ವಜನಿಕರ ನೆರವು ಪಡೆಯುವ ಬಗ್ಗೆ ಯೋಜಿಸಲಾಗಿದೆ. ಜನರ ಸಹಕಾರ ಸಿಗಬಹುದು ಅಥವಾ ದನಗಳನ್ನು ವಿಲೇವಾರಿಗೊಳಿಸುವುದು ಕಷ್ಟವಾಗುತ್ತಿದೆ. ಬಿಡಾಡಿ ದನಗಳನ್ನು ಹಿಡಿಯವ ಕಾರ್ಯಾಚರಣೆ ಶೀಘ್ರ ಮತ್ತೆ ಮುಂದುವರಿಸುವುದಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಹೇಳಿದರು.

ನಿಯಮಾನುಸಾರ ಬಿಡಾಡಿ ದನಗಳನ್ನು ಹರಾಜು ಮಾಡುವುದಕ್ಕೆ ಆರಂಭದಲ್ಲಿ ನಗರಸಭೆ ಅಧಿಕಾರಿಗಳು ಆರಂಭದಲ್ಲಿ ಯೋಜಿಸಿದ್ದರು. ದನಗಳು ಮಾಂಸ ತಿನ್ನುವವರ ಪಾಲಾಗಬಹುದು ಎನ್ನುವ ಆತಂಕದಿಂದ ಕೈಬಿಡಲಾಗಿದೆ. ಮಠಗಳು, ಸಂಘ ಸಂಸ್ಥೆಗಳು ನಡೆಸುತ್ತಿರುವ ಗೋಶಾಲೆಗಳಿಗೆ ಮಾಲೀಕರಿಲ್ಲದ ಬಿಡಾಡಿ ದನಗಳನ್ನು ಒದಗಿಸುವುದಕ್ಕೆ ಅಧಿಕಾರಿಗಳು ಕಾಯುತ್ತಿದ್ದಾರೆ. ಆಸಕ್ತ ಮಠಮಾನ್ಯಗಳಿಂದ ನಗರಸಭೆಗೆ ಸಂಪರ್ಕಿಸಬಹುದಾಗಿದೆ.

***

ಬಿಡಾಡಿ ದನಗಳನ್ನೆಲ್ಲ ಹಿಡಿದಿಟ್ಟುಕೊಂಡರೆ ನಿರ್ವಹಣೆ ಮಾಡುವುದಕ್ಕೆ ಕಷ್ಟವಾಗುತ್ತದೆ. ಮೊದಲ ಹಂತದಲ್ಲೂ ಹಿಡಿದಿದ್ದ ದನಗಳಲ್ಲಿ ಅರ್ಧದಷ್ಟು ಮಾಲೀಕರು ದಂಡ ತೆಗೆದುಕೊಂಡು ಹೋಗಿದ್ದಾರೆ. ಇನ್ನರ್ಧದಷ್ಟು ಗೋಶಾಲೆಗೆ ನೀಡಲಾಗಿದೆ.

-ಮಲ್ಲಿಕಾರ್ಜುನ ಗೋಪಿಶೆಟ್ಟಿ, ಪೌರಾಯುಕ್ತ

ಬಿಡಾಡಿ ದನಗಳನ್ನು ಪಡೆಯುವಂತಹ ದೊಡ್ಡಮಟ್ಟದ ಗೋಶಾಲೆಗಳು ಲಭ್ಯ ಇಲ್ಲದ ಕಾರಣ, ಸದ್ಯಕ್ಕೆ ತಾಂತ್ರಿಕ ತೊಂದರೆಯಿಂದ ಕಾರ್ಯಾಚರಣೆ ಸ್ಥಗಿತವಾಗಿದೆ. ಆದಷ್ಟು ಬೇಗನೆ ಮತ್ತೆ ಕಾರ್ಯಾಚರಣೆ ಆರಂಭಿಸುವಂತೆ ನಗರಸಭೆಗೆ ತಿಳಿಸುತ್ತೇವೆ.

-ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ನಗರದಲ್ಲಿ ಬಿಡಾಡಿ ದನಗಳಿಂದ ಮಕ್ಕಳು ಸೇರಿದಂತೆ ನಾಗರಿಕರು ತೊಂದರೆ ಎದುರಿಸುವಂತಾಗಿದೆ. ಆದ್ದರಿಂದ ಬಿಡಾಡಿ ದನಗಳನ್ನು ರಸ್ತೆಗಳಲ್ಲಿ ಬಿಡದಂತೆ ಮಾಲೀಕರು ಪೋಷಣೆ ಮಾಡಲು ನಗರಸಭೆ ಕ್ರಮ ಜರುಗಿಸಬೇಕು.

– ಜ್ಯೋತಿ ವಿಜಯಕುಮಾರ, ಗೃಹಿಣಿ

ಬಿಡಾಡಿ ದನಗಳು ರಸ್ತೆಗಳಲ್ಲಿ ಮಲಗುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ನಗರಸಭೆ ಕೈಗೊಂಡಿರುವ ಕಾರ್ಯಾಚರಣೆ ಮುಂದುವರೆಸಬೇಕು.
– ಚನ್ನಬಸವ ಜಾನೇಕಲ್‌, ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT