ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಪಾಸ್‌ ಉಚಿತ ವಿತರಿಸುವಂತೆ ಪ್ರತಿಭಟನೆ

Last Updated 4 ಅಕ್ಟೋಬರ್ 2021, 15:03 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಪ್ರಸ್ತುತ ಶೈಕ್ಷಣಿಕ ವರ್ಷ ಬಸ್‌ಪಾಸ್ ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಸಂಘಟನೆ (ಎಐಡಿಎಸ್‌ಓ) ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಬಸ್‌ಪಾಸ್‌ ವಿತರಿಸುವವರೆಗೂ ಹಿಂದಿನ ವರ್ಷದ ಪಾಸ್ ಅಥವಾ ಶಾಲಾ-ಕಾಲೇಜಿನ ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಲು ಅನುಮತಿ ನೀಡಬೇಕು. ಈಗಾಗಲೇ ಕಾಲೇಜಿನಲ್ಲಿ ಪ್ರಾಂಶುಪಾಲರ ಮೂಲಕ ಬಸ್ ಪಾಸ್‌ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಈ ಕೂಡಲೇ ಬಸ್ ಪಾಸ್ ಒದಗಿಸಬೇಕು ಎಂದು ಆಗ್ರಹಿಸಿದರು.

ಹಿಂದಿನ ವರ್ಷದ ವಿದ್ಯಾರ್ಥಿಗಳ ಬಸ್ ಪಾಸ್‌ನ ವಿಸ್ತರಣೆಯ ಅವಧಿ ಮುಗಿದಿದೆ. ಆದರೆ ಇನ್ನೂ ಕೆಲವು ಕೋರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿವೆ, ಮತ್ತೆ ಕೆಲವು ಕೋರ್ಸ್ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ವಿದ್ಯಾರ್ಥಿಗಳು ಗ್ರಾಮಗಳಿಂದ ಶಾಲಾ-ಕಾಲೇಜಿಗೆ ಬರಬೇಕಾದರೆ ಬಸ್ ಟಿಕಟ್‌ನ ದರ ಪಾವತಿಸಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಟಿಕೆಟ್ ದರ ಹೊರೆಯಾಗಿ ಪರಿಣಮಿಸಿದೆ. ಒಂದೂವರೆ ವರ್ಷದಿಂದ ಕೋವಿಡ್ ಮಹಾಮಾರಿ ಜನ ಜೀವನವನ್ನು ಸಂಕಷ್ಟಗೊಳಿಸಿದೆ. ಅನೇಕ ಕಡುಬಡವರು ಜೀವನೋಪಾಯಕ್ಕಾಗಿ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುವ ಸಂದರ್ಭ ಉಂಟಾಗಿದೆ. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರದ ಸೌಲಭ್ಯವನ್ನು ಅವಲಂಬಿಸಿರುತ್ತಾರೆ ಎಂದು ಹೇಳಿದರು.

ಲಾಕ್‌ಡೌನ್ ಪರಿಣಾಮ ಕಳೆದ ವರ್ಷ ಬಹುಪಾಲು ಶಾಲಾ-ಕಾಲೇಜಿಗೆ ರಜೆ ಘೋಷಣೆಯಾಗಿದ್ದವು. ಆಫ್‌ಲೈನ್ ತರಗತಿಗಳು ನಡೆದಿಲ್ಲ. ಈ ಕಾರಣದಿಂದಾಗಿ, ವರ್ಷದ ಮೊದಲಲ್ಲೇ ಸಂಪೂರ್ಣ ಬಸ್‌ಪಾಸ್ ದರ ಪಾವತಿಸಿದ್ದರೂ, ವಾರ್ಷಿಕ ಬಸ್‌ಪಾಸ್ ಸುಮಾರು ಅರ್ಧವರ್ಷಕ್ಕೂ ಕಳೆದ ಸಲ ಬಳಕೆ ಆಗಿಲ್ಲ. ಈಗ ಮತ್ತೊಮ್ಮೆ ವಿದ್ಯಾರ್ಥಿಗಳು ವಾರ್ಷಿಕ ಬಸ್‌ಪಾಸ್‌ನ ಸಂಪೂರ್ಣ ವೆಚ್ಚ ಭರಿಸಿ ಪಡೆಯಲು ತೊಂದರೆ ಆಗಿದೆ. ಆರ್ಥಿಕವಾಗಿ ಕುಗ್ಗಿರುವ ಕುಟುಂಬಗಳಿಗೆ ಉಚಿತವಾಗಿ ಪಾಸ್‌ ಒದಗಿಸಬೇಕು ಎಂದರು.

ರಾಜ್ಯದ ಎಲ್ಲ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ಆರ್ಥಿಕ ಸ್ಥಿತಿಗತಿ ಗಮನದಲ್ಲಿ ಇರಿಸಿಕೊಂಡು, ಪ್ರಸ್ತುತ ವರ್ಷದ ಬಸ್‌ಪಾಸ್ ಅನ್ನು ಉಚಿತ ಮಾಡಬೇಕು ಎಂದು ಒತ್ತಾಯಿಸಿದರು.

ಎಐಡಿಎಸ್‌ಓ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಚೀಕಲಪರ್ವಿ, ಕಾರ್ಯದರ್ಶಿ ಪೀರಸಾಬ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT