ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ | ಜಮೀನುಗಳ ಸರ್ವೆ ನಂಬರ್‌ ಮಾಯ: ಸರ್ಕಾರದ ಸೌಲಭ್ಯಗಳಿಂದ ವಂಚಿತರಾದ ರೈತರು

ತಾಂತ್ರಿಕ ಸಮಸ್ಯೆಯಿಂದ ಸೌಲಭ್ಯ ವಂಚಿತ ಯತಗಲ್‌ ರೈತರು
ಮಂಜುನಾಥ ಎನ್‌. ಬಳ್ಳಾರಿ
Published 7 ಜುಲೈ 2024, 23:53 IST
Last Updated 7 ಜುಲೈ 2024, 23:53 IST
ಅಕ್ಷರ ಗಾತ್ರ

ಕವಿತಾಳ: ಸಮೀಪದ ಯತಗಲ್‌ ಗ್ರಾಮದ ಜಮೀನುಗಳ ಸರ್ವೆ ನಂಬರ್‌ಗಳು ‘ದಿಶಾಂಕ್‌’ ಮತ್ತು ‘ಬೆಳೆ ಸಮೀಕ್ಷೆ’ ಆ್ಯಪ್‌ನಲ್ಲಿ ಬಾರದಿರುವುದರಿಂದ ಇಲ್ಲಿನ ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಯತಗಲ್‌ ಸೀಮಾದಲ್ಲಿ ಈ ಮೊದಲು 102 ಸರ್ವೆ ನಂಬರ್‌ಗಳಿದ್ದವು. 1963–64ನೇ ಸಾಲಿನಲ್ಲಿ ನಡೆಸಿದ ಮರು ಸಮೀಕ್ಷೆಯಲ್ಲಿ 228 ಸರ್ವೆ ನಂಬರ್‌ಗಳನ್ನು ಗುರುತಿಸಲಾಗಿದೆ. ಆದರೆ, 228 ಸರ್ವೆ ನಂಬರ್‌ಗಳ ನಕ್ಷೆ ನಮೂದಾಗದಿರುವುದರಿಂದ ‘ದಿಶಾಂಕ್‌’ ಮತ್ತು ‘ಬೆಳೆ ಸಮೀಕ್ಷೆʼ ಆ್ಯಪ್‌ನಲ್ಲಿ ಇಡೀ ಗ್ರಾಮದ ಸರ್ವೆ ನಂಬರ್‌ಗಳು ಕಂಡು ಬರುತ್ತಿಲ್ಲ.

‘ಯತಗಲ್‌ ಸೀಮೆಯ ಯಾವುದೇ ಸರ್ವೆ ನಂಬರ್‌ ತಂತ್ರಾಂಶದಲ್ಲಿ ಕಾಣಿಸುತ್ತಿಲ್ಲ. ಬದಲಿಗೆ ಸಮೀಪದ ನೆಲಕೊಳ, ಕಾಚಾಪುರ, ಆನ್ವರಿ, ನೀಲಗಲ್‌ ಗ್ರಾಮದ ಸರ್ವೆ ನಂಬರ್‌ ತೋರಿಸುತ್ತದೆ. ಅಂದಾಜು 300 ರೈತರು 15 ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದೇವೆ. ನಮ್ಮ ಜಮೀನಿನಲ್ಲಿ ನಿಂತು ಆ್ಯಪ್‌ನಲ್ಲಿ ಪರಿಶೀಲಿಸಿದರೆ ದೂರದ ಗೆಜ್ಜಲಗಟ್ಟಾ ಮತ್ತು ತೋರಣದಿನ್ನಿ ಎಂದು ಬರುತ್ತಿದೆ’ ಎಂದು ರೈತ ಯಮನೂರಪ್ಪ ಅಳಲು ತೋಡಿಕೊಂಡರು.

ತಂತ್ರಾಂಶದಲ್ಲಿನ ತಾಂತ್ರಿಕ ದೋಷದಿಂದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಬೆಳೆ ಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಸರ್ಕಾರದ ಸೌಲಭ್ಯ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ.

‘ಜಮೀನು ಖರೀದಿ, ಮಾರಾಟ, ಅಣ್ಣ–ತಮ್ಮಂದಿರು ಆಸ್ತಿ ವಿಭಾಗ ಮಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಜಿಪಿಎಸ್‌ ಆಗದ ಕಾರಣ ಬೆಳೆ ವಿಮೆ ಪರಿಹಾರವೂ ಸಿಗುತ್ತಿಲ್ಲ’ ಎಂದು ರೈತರು ದೂರುತ್ತಾರೆ.

‘ತಾಂತ್ರಿಕ ಸಮಸ್ಯೆಯಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಈ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ರೈತರಾದ ಸೋಮಣ್ಣ, ರಾಮನಗೌಡ, ಹುಚ್ಚಪ್ಪಗೌಡ ಮಾಲೀ ಪಾಟೀಲ ಆರೋಪಿಸಿದರು.

‘ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಬೆಂಗಳೂರು ಮಟ್ಟದಲ್ಲಿ ಭೂಮಿ ಆ್ಯಪ್‌ನಲ್ಲಿ ಸಮಸ್ಯೆ ಸರಿಪಡಿಸಬೇಕಿದೆ. ತಾಂತ್ರಿಕ ಸಮಸ್ಯೆಯಿಂದ ನಕ್ಷೆ, ಬೆಳೆ ಸಮೀಕ್ಷೆ ಮಾಡಲು ಬರುವುದಿಲ್ಲ. ರೈತರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ’ ಎಂದು ಗ್ರಾಮ ಆಡಳಿತಾಧಿಕಾರಿ ನಿಂಗಪ್ಪ ಹೇಳಿದರು.

ಯತಗಲ್‌ ಗ್ರಾಮದಲ್ಲಿ ನಿಂತು ದಿಶಾಂಕ್‌ ಆ್ಯಪ್‌ನಲ್ಲಿ ಜಮೀನಿನ ಸರ್ವೆ ನಂಬರ್‌ ಹಾಕಿದಾಗ ಬರುತ್ತಿರುವ ಮಾಹಿತಿ
ಯತಗಲ್‌ ಗ್ರಾಮದಲ್ಲಿ ನಿಂತು ದಿಶಾಂಕ್‌ ಆ್ಯಪ್‌ನಲ್ಲಿ ಜಮೀನಿನ ಸರ್ವೆ ನಂಬರ್‌ ಹಾಕಿದಾಗ ಬರುತ್ತಿರುವ ಮಾಹಿತಿ
ಭೂ ದಾಖಲೆಗಳ ಸಹಾಯಕ ನಿರ್ದೇಶಕರನ್ನು (ಎಡಿಎಲ್‌ಆರ್‌) ಸಂಪರ್ಕಿಸಲು ರೈತರಿಗೆ ಸೂಚಿಸಲಾಗಿದೆ. ಬೆಂಗಳೂರು ಮಟ್ಟದಲ್ಲಿ ರೈತರು ಸಮಸ್ಯೆ ಸರಿಪಡಿಸಿಕೊಳ್ಳಬೇಕಿದೆ
ಸುಧಾ ಅರಮನೆ, ಮಸ್ಕಿ ತಹಶೀಲ್ದಾರ್‌
ಜನಸ್ಪಂದನ ಸಭೆಯಲ್ಲಿ ಲಿಖಿತ ದೂರು ಸಲ್ಲಿಸಲಾಗಿದೆ. ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ಯಾವುದೇ ಕ್ರಮ ಕೈಗೊಂಡಿಲ್ಲ.
ಯಮನೂರಪ್ಪ, ಯತಗಲ್‌ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT