ಸೌಲಭ್ಯ, ಚಿಕಿತ್ಸೆಗೆ ಪರದಾಡುವ ದಂಪತಿ; ಅಸಹಾಯಕವಾದ ಬುದ್ಧಿಮಾಂದ್ಯ ಮಕ್ಕಳ ಕುಟುಂಬ

ಗುರುವಾರ , ಜೂನ್ 27, 2019
29 °C
ಕುಟುಂಬದ ಗೋಳು ಕೇಳುವವರು ಯಾರು

ಸೌಲಭ್ಯ, ಚಿಕಿತ್ಸೆಗೆ ಪರದಾಡುವ ದಂಪತಿ; ಅಸಹಾಯಕವಾದ ಬುದ್ಧಿಮಾಂದ್ಯ ಮಕ್ಕಳ ಕುಟುಂಬ

Published:
Updated:
Prajavani

ಲಿಂಗಸುಗೂರು: ತಾಲ್ಲೂಕಿನ ರಾಮಲೂಟಿ ಗ್ರಾಮದಲ್ಲಿ ಒಂದೇ ಕುಟುಂಬದಲ್ಲಿ ಮೂರು ಮಕ್ಕಳು ಬುದ್ಧಿಮಾಂದ್ಯ ಮತ್ತು ಬಹು ಅಂಗವಿಕಲತೆಯಿಂದ ಬಳಲುತ್ತಿದ್ದು ಕನಿಷ್ಠ ಸೌಲಭ್ಯ ಮತ್ತು ಚಿಕಿತ್ಸೆ ಸಿಗಬಹುದು ಎನ್ನುವ ಪಾಲಕರ ನಿರೀಕ್ಷೆ ಹುಸಿಯಾಗಿದ್ದು, ಅವರ ಪರದಾಟವು ಮನ ಕಲಕುತ್ತದೆ.

ಗುರುಗುಂಟಾ ಹೋಬಳಿಯ ರಾಮಲೂಟಿಯಲ್ಲಿ ಪರಮಣ್ಣ ಮಲ್ಲಪ್ಪ ಕಕ್ಕೇರಿ ಮತ್ತು ದುರುಗಮ್ಮ ಪರಮಣ್ಣ ದಂಪತಿ ಕುಟುಂಬಕ್ಕೆ ಇರುವ ಎರಡು ಎಕರೆ ಜವಳು ಭೂಮಿ ಇದೆ. ಅದರಲ್ಲಿ ಹಿಡಿ ಕಾಳು ಬೆಳೆಯದೆ ಗ್ರಾಮದಲ್ಲಿಯೆ ಕೂಲಿ ಮಾಡಿಕೊಂಡು ಮಕ್ಕಳನ್ನು ಜೋಪಾನ ಮಾಡುತ್ತ ಸಂಕಷ್ಟದ ಬದುಕು ಕಟ್ಟಿಕೊಂಡಿದ್ದಾರೆ. ದಂಪತಿಯ ಪೈಕಿ ಒಬ್ಬರು ಕೂಲಿಗೆ ಹೋದರೆ ಒಬ್ಬರು ಮಕ್ಕಳನ್ನು ಜೋಪಾನ ಮಾಡುವ ಅನಿವಾರ್ಯತೆ ಇದೆ.

ಈ ದಂಪತಿಗೆ ಮಾಳಪ್ಪ (14), ಬಸವರಾಜ (10), ರೇಣಮ್ಮ (9) ಎಂಬ ಮೂರು ಮಕ್ಕಳಿದ್ದಾರೆ. ಮೂವರು ಹುಟ್ಟುತ್ತಲೆ ಬುದ್ದಿಮಾಂದ್ಯ, ಬಹುಅಂಗವಿಕಲತೆ ಶಾಪದಿಂದ ನರಳಾಡುತ್ತಿವೆ. ಮಕ್ಕಳ ಚಿಂತಾಜನಕ ಸ್ಥಿತಿಯನ್ನು ನೋಡಿದವರು ಕಣ್ಣೀರಿಟ್ಟು ಹೀಗಾಗಬಾರದಿತ್ತು ಎಂದು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದು ಬಿಟ್ಟರೆ ಬೇರೆ ಸಹಾಯಕ್ಕೂ ಮುಂದಾಗುತ್ತಿಲ್ಲ.

‘ಹಿರಿಯ ಮಗ ಮಾಳಪ್ಪ ಹುಟ್ಟಿದಾಗಲೆ ಬುದ್ದಿಮಾಂದ್ಯ ಮತ್ತು ಅಂಗವಿಕಲತೆ ಹೊಂದಿದ್ದ. ಆಗಿನಿಂದಲೆ ಚಿಕಿತ್ಸೆ ಕೊಡಿಸುತ್ತ ಬರಲಾಗಿದೆ. ಆನಂತರದಲ್ಲಿ ಜನಿಸಿದ ಬಸವರಾಜ, ರೇಣಮ್ಮ ಕೂಡ ಇಂತಹುದೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಾಯಚೂರು, ವಿಜಯಪುರದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಸಾಕಾಗಿ ಎಲ್ಲವೂ ಹಣೆಬರಹ ಎಂದು ಮೌನಕ್ಕೆ ಶರಣಾಗಿದ್ದೇವೆ’ ಎಂದು ಪರಮಣ್ಣ ಅಸಹಾಯಕತೆ ವ್ಯಕ್ತಪಡಿಸಿದರು.

‘ಬುದ್ದಿಮಾಂದ್ಯ ಮಕ್ಕಳ ಚಿಕಿತ್ಸೆ, ಕುಟುಂಬ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ದಂಪತಿ ಪೈಕಿ ಒಬ್ಬರೆ ಕೂಲಿ ಮಾಡಿ ತರುವ ಹಣದಿಂದ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಕೆಲ ತಿಂಗಳಿಂದ ಎರಡು ಮಕ್ಕಳಿಗೆ ಅಂಗವಿಕಲ ಮಾಸಾಶನ ಬರುತ್ತಿದೆ. ಅದರಲ್ಲಿಯೆ ತುತ್ತಿನ ಚೀಲ ತುಂಬಿಸಿಕೊಳ್ಳುತ್ತ ದಿನಗಳ ಕಳೆಯುತ್ತಿದ್ದೇವೆ’ ಎಂದು ದುರುಗಮ್ಮ ಕಣ್ಣೀರಿಡುತ್ತ ಹೇಳಿದರು.

‘ಬುದ್ದಿಮಾಂದ್ಯ ಮತ್ತು ಬಹುಅಂಗವಿಕಲತೆ ಹೆಚ್ಚಾಗಿ ಸಂಬಂಧಿಗಳಲ್ಲಿಯೆ ಮದುವೆ ಮಾಡುವುದರಿಂದ ಸಹಜ ಕಾಯಿಲೆಯಾಗಿದೆ. ಕೆಲ ಸಂದರ್ಭಗಳಲ್ಲಿ ಆಹಾರ ಪದ್ಧತಿ, ಮಹಿಳೆ ಗರ್ಭಚೀಲದಲ್ಲಿ ಅಂಗಾಂಗಳ ಬೆಳವಣಿಗೆಗೆ ಪೂರಕ ವಾತಾವರಣ ಇರದಿರುವುದು, ವೈರಲ್‌ ಡಿಸೀಜ್‌, ಕ್ರೊಮೊಜೋಮ್ಸ್‌ನಂತ ಇತರೆ ಕಾರಣಗಳು ಇರಬಹುದು’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ.

ನವಜೀವನ ಅಂಗವಿಕಲರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವಿರುಪಾಕ್ಷಯ್ಯ ಕಾಳಾಪುರ, ಮುಖಂಡರಾದ ಅಸ್ಕಿಹಾಳ ನಾಗರಾಜ ಅವರನ್ನು ಪ್ರಜಾವಾಣಿಗೆ ಸಂಪರ್ಕಿಸಿದಾಗ ‘ತಮಗೆ ರಾಮಲೂಟಿಯ ಕಕ್ಕೇರಿ ಕುಟುಂಬದವರ ಬಗ್ಗೆ ಮಾಹಿತಿ ದೊರೆತಿಲ್ಲ. ಬುದ್ದಿಮಾಂದ್ಯ ಕುಟುಂಬಸ್ಥರನ್ನು ಸಂಪರ್ಕಿಸಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಾಧ್ಯವಾದ ಸೌಲಭ್ಯ ಕೊಡಿಸಲು ಪ್ರಯತ್ನಿಸುವುದಾಗಿ’ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !