ಲಿಂಗಸುಗೂರು: ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶಗಳಲ್ಲಿನ ಕುಟುಂಬಗಳ ಶಾಶ್ವತ ಸ್ಥಳಾಂತರ ಕಾರ್ಯ ವರ್ಷದಿಂದ ವರ್ಷಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸುತ್ತಿದೆ. ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ನಿರಾಸಕ್ತಿಯಿಂದ ಸಂತ್ರಸ್ತರು ಪ್ರತಿವರ್ಷ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೃಷ್ಣಾ ನದಿ ಮಧ್ಯದಲ್ಲಿರುವ ಕರಕಲಗಡ್ಡಿಯ 6 ಕುಟುಂಬ 35 ಜನ, ಮ್ಯಾದರಗಡ್ಡಿಯ 10 ಕುಟುಂಬ 68 ಜನ, ವಂಕಮ್ಮನಗಡ್ಡಿ ಎರಡು ಕುಟುಂಬದ 16 ಜನರನ್ನು ಸ್ಥಳಾಂತರಿಸಬೇಕು. ನಡುಗಡ್ಡೆ ಗ್ರಾಮಗಳಾದ ಕಡದರಗಡ್ಡಿ, ಯರಗೋಡಿ, ಯಳಗುಂದಿ, ಹಂಚಿನಾಳಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎನ್ನುವ ಜನರ ಬೇಡಿಕೆಗಳಿಗೆ ಯಾವ ಪಕ್ಷಗಳು ಸ್ಪಂದಿಸಿಲ್ಲ.
ಯಳಗುಂದಿಯ ಸರ್ಕಾರಿ ಜಮೀನನ್ನು ಗುರುತಿಸಿ ಬಡಾವಣೆ ನಿರ್ಮಿಸಿ ಅಗತ್ಯ ಸೌಲಭ್ಯ ಕಲ್ಪಿಸುವ ಜತೆಗೆ ಯೋಜನೆಯೊಂದರಡಿ ಮನೆಗಳ ನಿರ್ಮಾಣದ ಮಾತುಗಳು ಕೇಳಿಬಂದಿದ್ದವು. ಅಕ್ರಮ ಸಾಗುವಳಿದಾರ ರೈತನಿಗೆ ಯಾವ ಭಾಗದಲ್ಲಿ ಎಷ್ಟು ಜಮೀನು ಮಂಜೂರಾಗಿದೆ ಎಂದು ನಿರ್ಧಿರಿಸುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿರುವ ಕಾರಣ ಸ್ಥಳಾಂತರಕ್ಕೆ ಅಡ್ಡಿಯಾಗಿದೆ.
ಮ್ಯಾದರಗಡ್ಡಿ ಆರು ಕುಟುಂಬ ಮತ್ತು ಕಡದರಗಡ್ಡಿಯ ಐದು ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ಕೊಟ್ಟು ಕೈತೊಳೆದುಕೊಂಡಿದೆ. ಮನೆ ನಿರ್ಮಾಣಕ್ಕೆ ನಿಗದಿತ ಆರ್ಥಿಕ ನೆರವು ನೀಡಿಲ್ಲ. ಇದ್ದ ಸ್ಥಿತಿಯಲ್ಲಿಯೇ ಗುಡಿಸಲುಗಳನ್ನು ದುರಸ್ತಿ ಮಾಡಿಕೊಂಡಿದ್ದೇವೆ. ಮನೆಗಳಿಗೆ ಮತ್ತು ತೆಪ್ಪದಲ್ಲಿ ಹೊಲಕ್ಕೆ ಹೊರಟಿದ್ದ ವ್ಯಕ್ತಿ ಮುಳುಗಿ ಮೃತಪಟ್ಟರೂ ಸರ್ಕಾರ ಪರಿಹಾರ ನೀಡಿಲ್ಲ ಎಂದು ಸಂತ್ರಸ್ತೆ ಹನುಮವ್ವ ಅಳಲು ತೋಡಿಕೊಂಡಿದ್ದಾರೆ.
ಪ್ರವಾಹ ಸಂದರ್ಭದಲ್ಲಿ ಅಧಿಕಾರಿಗಳು, ಪ್ರತಿನಿಧಿಗಳು ನಡುಗಡ್ಡೆಯಲ್ಲಿ ಬದುಕು ನಡೆಸಲು ಬಿಡುತ್ತಿಲ್ಲ. ಶಾಶ್ವತ ಸ್ಥಳಾಂತರಕ್ಕೂ ಮುಂದಾಗದೆ ಒಪ್ಪತ್ತಿನ ಗಂಜಿಗೂ ಗತಿ ಇಲ್ಲದಂತೆ ಒಕ್ಕಲೆಬ್ಬಿಸುತ್ತಿದ್ದಾರೆ. ಇನ್ನೊಂದೆಡೆ ನಡುಗಡ್ಡೆ ಗ್ರಾಮಗಳ ಅನುಕೂಲಕ್ಕೆ ಕೃಷ್ಣಾ ನದಿಗೆ ಅಡ್ಡಲಾಗಿ ಗೋನವಾಟ್ಲ ಮತ್ತು ಕಡದರಗಡ್ಡಿ ಮಧ್ಯೆ ಸೇತುವೆ ನಿರ್ಮಾಣ ಭರವಸೆಯಾಗಿಯೆ ಉಳಿದಿದೆ ಎಂದು ಮ್ಯಾದರಗಡ್ಡಿಯ ಮಲ್ಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇತುವೆ ನಿರ್ಮಾಣಗೊಂಡರೆ ಕೇವಲ 14 ಕಿ.ಮೀ ಅಂತರದಲ್ಲಿ ತಾಲ್ಲೂಕು ಕೇಂದ್ರ ತಲಪುತ್ತೇವೆ. ಇಲ್ಲದೆ ಹೋದಲ್ಲಿ ಸುತ್ತುವರೆದು 40 ರಿಂದ 45 ಕಿ.ಮೀ ಪ್ರಯಾಣ ಮಾಡಬೇಕು. ವಯೋವೃದ್ಧರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು ಹಾಗೂ ಪಂಚಾಯಿತಿ ಕೆಲಸಗಳಿಗೆ ಸೇತುವೆ ನಿರ್ಮಾಣಗೊಂಡರೆ ಕೇವಲ 2 ಕಿ.ಮೀ ಅಂತರದಲ್ಲಿಯೆ ಸೌಲಭ್ಯ ಪಡೆಯಬಹುದಾಗಿದೆ ಎನ್ನುತ್ತಾರೆ ನಡುಗಡ್ಡೆ ಗ್ರಾಮಸ್ಥರು.
ನಡುಗಡ್ಡೆ ಗ್ರಾಮಗಳಾದ ಕಡದರಗಡ್ಡಿ, ಯರಗೋಡಿ, ಯಳಗುಂದಿ, ಹಂಚಿನಾಳ, ಕರಕಲಗಡ್ಡಿ, ವಂಕಮ್ಮನಗಡ್ಡಿ, ಮ್ಯಾದರಗಡ್ಡಿ ಪ್ರದೇಶದ ಜನತೆಗೆ ತಾಲ್ಲೂಕು ಕೇಂದ್ರಕ್ಕೆ ಬಂದು ಹೋಗಲು ಹಾಗೂ ಗುಂತಗೋಳ ಗ್ರಾಮ ಪಂಚಾಯಿತಿ ಸೇರಿದಂತೆ ತಾಲ್ಲೂಕು ಜಿಲ್ಲಾ ಕೇಂದ್ರ ಸಂಪರ್ಕಕ್ಕೆ ಹೆಚ್ಚು ಅನುಕೂಲ ಆಗಲಿದೆ. ಕಾರಣ ಸರ್ಕಾರ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ದೊಡ್ಡಬಸಪ್ಪ ಮನವಿ ಮಾಡಿದ್ದಾರೆ.
ಈ ಹಿಂದೆ ಸೇತುವೆ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮಂಜೂರಾಗಿದ್ದ ₹ 4ಕೋಟಿ ಹಣ ಅನ್ಯ ಕಾಮಗಾರಿಗಳಿಗೆ ವರ್ಗಾಯಿಸಲಾಯಿತು. ಈಚೆಗೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ₹ 20ಕೋಟಿ ಬಿಡುಗಡೆ ಆಗಿದೆ. ಸಮೀಕ್ಷೆ ಕಾರ್ಯ ಕೂಡ ನಡೆಯಿತು. ಆದರೆ, ಮುಂದೇನಾಯಿತು ಎನ್ನುವುದು ಚುನಾಯಿತ ಪ್ರತಿನಿಧಿಗಳಿಗೂ ತಿಳಿದಿಲ್ಲ.
ಏಳೂವರೆ ದಶಕಗಳ ಅವಧಿಯಲ್ಲಿ ಆಡಳಿತಕ್ಕೆ ಬಂದಿರುವ ಸರ್ಕಾರಗಳು ಪ್ರೌಢಶಾಲೆ, ಆರೋಗ್ಯ ಸೇವೆ, ನ್ಯಾಯಬೆಲೆ ಅಂಗಡಿ, ಪಶು ಚಿಕಿತ್ಸಾಲಯ, ಗ್ರಂಥಾಲಯ, ವಸತಿ ನಿಲಯಗಳ ಸೌಲಭ್ಯಕ್ಕೆ ಗೋನವಾಟ್ಲ ಅಥವಾ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕು. ಪ್ರವಾಹ ಸಂದರ್ಭದಲ್ಲಿ ಒಂದು ಸಮಸ್ಯೆಯಾದರೆ, ನದಿ ಬತ್ತಿದಾಗ ಬೇರೆ ರೀತಿಯ ಸಮಸ್ಯೆ ಎದುರಿಸುವುದು ಸಾಮಾನ್ಯವಾಗಿದೆ.
ಕೃಷ್ಣಾ ಪ್ರವಾಹ ಬಂದಾಗೊಮ್ಮೆ ರಕ್ಷಣೆ ಹೆಸರಲ್ಲಿ ಮೋಜು ಮಸ್ತಿ ಮಾಡಿ ಕೋಟ್ಯಂತರ ಹಣ ಖರ್ಚು ಮಾಡುತ್ತಿರುವ ಅಧಿಕಾರಿಗಳು, ಪ್ರತಿನಿಧಿಗಳು ನಡುಗಡ್ಡೆ ಜನರ ಶಾಶ್ವತ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಸೇತುವೆ ನಿರ್ಮಾಣಕ್ಕೆ ಮುಂದಾಗದೆ ಹೋದಲ್ಲಿ ಲೋಕಸಭಾ ಚುನಾವಣೆಯನ್ನೇ ಸಾಮೂಹಿಕವಾಗಿ ಬಹಿಷ್ಕರಿಸಲು ಚಿಂತನೆ ನಡೆಸಿದ್ದೇವೆ ಎಂದು ನಡುಗಡ್ಡೆ ಗ್ರಾಮಗಳ ಗ್ರಾಮ ಪಂಚಾಯಿತಿ ಸದಸ್ಯ ತಿರುಪತಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.