ಸೋಮವಾರ, ಅಕ್ಟೋಬರ್ 21, 2019
23 °C
ಕಲ್ಯಾಣ ಕರ್ನಾಟಕ ಜಿಲ್ಲೆಗಳ ವಾಣಿಜ್ಯೋದ್ಯಮ ಸಂಘಗಳ ಸಭೆ

‘ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಬೇಕಿದೆ’

Published:
Updated:
Prajavani

ರಾಯಚೂರು: ಹಿಂದುಳಿದಿರುವ ಈ ಭಾಗದಲ್ಲಿ ಉದ್ಯೋಗದ ಸಮಸ್ಯೆ ಗಂಭೀರವಾಗಿದ್ದು, ಕೈಗಾರಿಕೆಗಳಿಂದ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಕೆಲಸವಾಗಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಬೆಂಗಳೂರಿನ ಎಫ್‌ಕೆಸಿಸಿಐ ಹಾಗೂ ರಾಯಚೂರು ವಾಣಿಜ್ಯೋದ್ಯಮ ಸಂಘದಿಂದ ಶನಿವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ವಾಣಿಜ್ಯೋದ್ಯಮ ಸಂಘಗಳ ಸಭೆ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಪದವಿ ಓದಿದವರು ಕೂಡ ಉದ್ಯೋಗವಿಲ್ಲದೇ ಮನೆಯಲ್ಲಿದ್ದಾರೆ. ಇದು ಅಭಿವೃದ್ಧಿ ಸಾಧಿಸಲು ಸಮಸ್ಯೆಯಾಗಿದೆ. ಆದ್ದರಿಂದ ಸರ್ಕಾರದಿಂದ ಕೈಗಾರಿಕೆಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಮೂಲ ಸೌಕರ್ಯದ ಕೊರತೆಯೂ ಈ ಭಾಗದಲ್ಲಿ ಅಗಾಧವಾಗಿದ್ದು, ಪ್ರಮುಖವಾಗಿ ಕೃಷಿ ಕ್ಷೇತ್ರಕ್ಕೆ ಸೌಕರ್ಯ ಕಲ್ಪಿಸಬೇಕು. ಕೇಂದ್ರ ಸರ್ಕಾರದಿಂದ ಮಹತ್ವಕಾಂಕ್ಷೆ ಜಿಲ್ಲೆಯನ್ನಾಗಿ ಆಯ್ಕೆ ಮಾಡಿರುವುದರಿಂದ ಈ ಅವಕಾಶವನ್ನು ಬಳಸಿಕೊಂಡು ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಮಾತನಾಡಿ, ಮಹತ್ವಾಕಾಂಕ್ಷೆ ಜಿಲ್ಲೆಯ ಕಾರ್ಯಾಗಾರದ ಚರ್ಚೆಯಲ್ಲಿ ಕೈಗಾರಿಕೆಗಳ ವಿಷಯವನ್ನು ಮರೆಯಲಾಗಿತ್ತು. ಸಮಗ್ರ ಅಭಿವೃದ್ಧಿಗೆ ಕೈಗಾರಿಕೆಗಳ ಪಾತ್ರವೂ ಅಗತ್ಯವಾಗಿದ್ದು, ಈಗ ಆಯೋಜಿಸಿರುವ ಈ ಕಾರ್ಯಕ್ರಮ ಅದಕ್ಕೆ ಪೂರಕವಾಗಿದೆ. ಈ ಅವಕಾಶ ಬಳಸಿಕೊಂಡು ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಎರಡು ನದಿಗಳಿದ್ದರೂ, ಕುಡಿಯುವ ನೀರಿನ ಸಮಸ್ಯೆ ಕಾಣುತ್ತಿದ್ದೇವೆ. ಕೈಗಾರಿಕೆಗಳ ನಿರ್ವಹಣೆಗೆ ನೀರು ಪ್ರಮುಖವಾಗಿ ಬೇಕಾಗಿದ್ದು, ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಕೈಗಾರಿಕೆಗಳ ಅಭಿವೃದ್ಧಿ ಆಗುವುದಿಲ್ಲ. ಇದಕ್ಕಾಗಿ ನೀರಿನ ಸಮಸ್ಯೆ ಬಗೆಹರಿಸಲು ಯೋಜನೆ ಹಾಕಿಕೊಳ್ಳಲಾಗುತ್ತದೆ ಎಂದರು.

ತಾಲ್ಲೂಕು ಕೇಂದ್ರಗಳಲ್ಲಿ 50ರಿಂದ 100 ಎಕರೆಯ ಭೂ ಬ್ಯಾಂಕ್ ಸ್ಥಾಪಿಸಲಾಗುತ್ತದೆ. ಇಲ್ಲಿಯೇ ಬೆಳೆಯುವ ಪದಾರ್ಥಗಳ ಮೌಲ್ಯವರ್ಧನೆ ಮಾಡಿದರೆ ಲಾಭದಾಯಕವಾಗಲಿದೆ ಎಂದು ತಿಳಿಸಿದರು.

ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಪಾಲಿಸಿ ರೂಪಿಸುವುದು ಅಗತ್ಯವಿದೆ. ಕಲಬುರ್ಗಿಯಲ್ಲಿ ಇರುವ ಜರ್ಮನ್‌ ಮಾದರಿ ಕೌಶಲ್ಯ ಕೇಂದ್ರವನ್ನು ಇಲ್ಲಿಯೂ ಸ್ಥಾಪನೆ ಮಾಡಬೇಕು. ಅದಾಗದಿದ್ದರೆ ಅದರ ಶಾಖೆ ಆರಂಭಿಸಬೇಕು. ಆಗ ಸರೋಜಿನಿ ಮಹಿಷಿ ವರದಿ ಪ್ರಕಾರ ಉದ್ಯೋಗ ಒದಗಿಸಲು ಅನುಕೂಲವಾಗಲಿದೆ ಎಂದರು.

ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ ಮಾತನಾಡಿ, ಜಗತ್ತಿನಲ್ಲಿ ಕೆಲವೇ ದೇಶಗಳು ಪ್ರಮುಖವಾಗಿ ಪ್ರಗತಿ ಸಾಧಿಸಿದಂತೆ ಭಾರತವನ್ನು ಅಭಿವೃದ್ಧಿ ಮಾಡಲು ನರೇಂದ್ರಮೋದಿ ಅವರು ರೈತರ ಆದಾಯ ದ್ವಿಗುಣ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಅದಕ್ಕಾಗಿ ವಿಧಾನಗಳನ್ನು ಬದಲಾಯಿಸಿಕೊಂಡು ಹೊಸರೂಪ ನೀಡುವ ಅಗತ್ಯವಿದೆ ಎಂದು ಹೇಳಿದರು.

ದೊಡ್ಡ ಕೈಗಾರಿಕೆಗಳು ಈ ಭಾಗದಲ್ಲಿ ಸ್ಥಾಪನೆಯಾದರೆ ಅಭಿವೃದ್ಧಿಯಾಗಲಿದ್ದು, ಅದಕ್ಕಾಗಿ ವಿಮಾನಯಾನ ಸೌಕರ್ಯ ಪ್ರಮುಖವಾಗಿದೆ. ಸಾಫ್ಟ್‌ವೇರ್ ಕಂಪೆನಿ ಈ ಭಾಗಕ್ಕೆ ಬರಬೇಕಾದ ಅಗತ್ಯವಿದೆ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೊಹಮ್ಮದ ಇರ್ಫಾನ್, ಶಿಲ್ಪಾ ಕಂಪೆನಿಯ ವಿಷ್ಣುಕಾಂತ ಭೂತಡ, ತ್ರಿವಿಕ್ರಮ ಜೋಷಿ, ಪೆರಿಕಲ ಸುಂದರ, ಪ್ರಸಾದ, ಸುಧಾಕರ ಶೆಟ್ಟಿ ಇದ್ದರು.

Post Comments (+)