ಶುಕ್ರವಾರ, ಡಿಸೆಂಬರ್ 4, 2020
24 °C

ರಾಯಚೂರು ವಿವಿ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಪ್ರಸಕ್ತ ವರ್ಷದಿಂದಲೇ ರಾಯಚೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳನ್ನು ಕಾರ್ಯಾರಂಭ ಮಾಡುವಂತೆ ಒತ್ತಾಯಿಸಲು ಜಿಲ್ಲೆಯಿಂದ ನಿಯೋಗದ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ರಾಯಚೂರು ವಿಶ್ವವಿದ್ಯಾಲಯ ಹೋರಾಟ ಸಮಿತಿಯ ಸಂಚಾಲಕ ರಝಾಕ್ ಉಸ್ತಾದ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ವಿಶ್ವವಿದ್ಯಾಲಯವೆಂದು ಸರ್ಕಾರ ಘೋಷಿಸಿದ ಬಳಿಕ ಮೂರು ಜನ ವಿಶೇಷ ಅಧಿಕಾರಿಗಳ ನೇಮಕ ಮಾಡಲಾಗಿದೆ. ಆದರೆ, ವಿಶ್ವವಿದ್ಯಾಲಯ ಮಾತ್ರ ಆರಂಭಗೊಂಡಿಲ್ಲ. ಈ ವರ್ಷವೂ ವಿಶ್ವವಿದ್ಯಾಲಯ ಆರಂಭಗೊಳ್ಳುವುದು ಅನುಮಾನ ಮೂಡುತ್ತಿದೆ. ರಾಯಚೂರು ವಿಶ್ವವಿದ್ಯಾಲಯದ ಬೆಳವಣಿಗೆ ಗಮನಿಸಿದರೆ ರಾಜ್ಯ ಸರ್ಕಾರ ಪಂಚವಾರ್ಷಿಕ ಯೋಜನೆಯಂತಾಗಿದೆ ಎಂದು ಟೀಕಿಸಿದರು.

ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ವಿಫಲರಾಗಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ನವೆಂಬರ್ 17ರಂದು ರಾಜ್ಯದ ಪದವಿ ಕಾಲೇಜು, ವಿಶ್ವವಿದ್ಯಾಲಯಗಳ ಆರಂಭ ಮಾಡಲು ಆದೇಶ ಹೊರಡಿಸಿದೆ. ಆದರೆ ರಾಯಚೂರು ವಿಶ್ವವಿದ್ಯಾಲಯ ವಿಷಯದಲ್ಲಿ ಸ್ಪಷ್ಟತೆಯಿಲ್ಲದೇ ಅನುದಾನದ ಕುಂಟು ನೆಪ ಹೇಳಲಾಗುತ್ತಿದೆ ಎಂದು ದೂರಿದರು.

ಪ್ರಸಕ್ತ ಸಾಲಿನಲ್ಲಿಯೇ ರಾಯಚೂರು ವಿಶ್ವವಿದ್ಯಾಲಯ ಆರಂಭಿಸುವಂತೆ ಒತ್ತಾಯಿಸಿ ಜಿಲ್ಲೆಯ ಪ್ರತಿನಿಧಿಗಳೊಂದಿಗೆ ಉನ್ನತ ಶಿಕ್ಷಣ ಸಚಿವರ ಬಳಿ ನಿಯೋಗದಿಂದ ಭೇಟಿ ಮಾಡಿ ಒತ್ತಡ ಹಾಕಲಾಗುವುದು. ಸರ್ಕಾರ ಕೂಡಲೇ ರಾಯಚೂರು ವಿಶ್ವವಿದ್ಯಾಲಯ ಆರಂಭಕ್ಕೆ ಅಗತ್ಯಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ್ಯವಹಿಸಿದಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಹೋರಾಟ ಸಮಿತಿಯ ಸದಸ್ಯ ಶಿವಕುಮಾರ ಯಾದವ, ಮಹಮ್ಮದ್ ರಫಿ, ವೀರೇಶ ಹೀರಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.