ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಕುಂಠ ಏಕಾದಶಿ: ವೆಂಕಟೇಶ್ವರ ವಿಶೇಷ ಪೂಜೆ

ನವೋದಯ ಶಿಕ್ಷಣ ಸಂಸ್ಥೆ ಕ್ಯಾಂಪಸ್‌ನಲ್ಲಿ ಭಕ್ತರ ದಂಡು
Last Updated 25 ಡಿಸೆಂಬರ್ 2020, 13:15 IST
ಅಕ್ಷರ ಗಾತ್ರ

ರಾಯಚೂರು: ವೈಕುಂಠ ಏಕಾದಶಿ ನಿಮಿತ್ತ ನಗರ ಸೇರಿದಂತೆ ಜಿಲ್ಲೆಯಾದ್ಯಂತ ವೆಂಕಟೇಶ್ವರ ದೇವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನೆರವೇರಿದವು. ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ತೆರಳಿ ಭಕ್ತಿ ಸಮರ್ಪಿಸಿದರು.

ರಾಯಚೂರು ನವೋದಯ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಭಕ್ತಿ ಸಂಭ್ರಮದೊಂದಿಗೆ ವೈಕುಂಠ ಏಕಾದಶಿ ಆಚರಣೆ ಮಾಡಲಾಯಿತು. ದೇವಸ್ಥಾನದೊಳಗೆ ಹಸಿರು ತೋರಣಗಳು ಹಾಗೂ ವರ್ಣವೈವಿಧ್ಯದಿಂದ ಕೂಡಿದ ಹೂವಿನ ಅಲಂಕಾರವು ಚಿತ್ತಾಕರ್ಷಕವಾಗಿತ್ತು. ತಿರುಮಲ ತಿರುಪತಿಯ ದೇವಸ್ಥಾನದಲ್ಲಿ ನಡೆಯುವ ಪೂಜಾ ವಿಧಿವಿಧಾನಗಳ ರೀತಿಯಲ್ಲೇ ದೇವರಿಗೆ ಪೂಜೆ ನೆರವೇರಿಸಲಾಯಿತು. ಸಾರ್ವಜನಿಕರು ಕೂಡಾ ಸರದಿಯಲ್ಲಿ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಜನರು ಈ ದೇವಸ್ಥಾನಕ್ಕೆ ಭೇಟಿ ನೀಡಿದರು.

ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶ್ವರ ಶ್ರೀದೇವಿ, ಭೂದೇವಿಯವರ ಉತ್ಸವ ಮೂರ್ತಿಗಳ ಪೂಜಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಆರ್. ರೆಡ್ಡಿ, ಸ್ವಾತಿ ರೆಡ್ಡಿ ಹಾಗೂ ಕುಟುಂಬದ ಸದಸ್ಯರೆಲ್ಲರೂ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಭಕ್ತಿ ಸಮರ್ಪಿಸಿದರು. ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳನ್ನು ಅರ್ಚಕರು ಆರಂಭಿಸಿದ್ದರು.

ಉಪ್ಪಾರವಾಡಿ ಬಡಾವಣೆಯ ವೆಂಕಟೇಶ್ವರದೇವಸ್ಥಾನ, ನೀಲಕಂಠೇಶ್ವರ ಬಡಾವಣೆಯಲ್ಲಿ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿಯೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ವೈಕುಂಠ ಏಕಾದಶಿ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ತೆರಳಿ ಭಕ್ತರು ವೆಂಕಟೇಶ್ವರನ ದರ್ಶನ ಪಡೆದು ಪುನೀತರಾದರು. ರಾಜಮಾತಾ ದೇವಸ್ಥಾನ ಆವರಣವು ಭಕ್ತರಿಂದ ತುಂಬಿತ್ತು. ವಿಶೇಷವಾಗಿ ಅಲಂಕರಿಸಿದ್ದ ವೆಂಕಟೇಶ್ವರ ಮತ್ತು ಶ್ರೀದೇವಿಯನ್ನು ನೋಡಿ ಭಕ್ತರು ಧನ್ಯತೆ ಅನುಭವಿಸಿದರು.

ಪ್ರತಿ ದೇವಸ್ಥಾನಗಳಲ್ಲಿಯೂ ವಿಶೇಷ ಹೂವಿನ ಅಲಂಕಾರ ಗಮನ ಸೆಳೆಯುವಂತಿತ್ತು. ಕೆಲ ದೇವಸ್ಥಾನಗಳಲ್ಲಿ ವಿದ್ಯುತ್‌ ದೀಪಾಲಂಕಾರವು, ಎಣ್ಣೆ ದೀಪದ ಅಲಂಕಾರವು ಹಾಗೂ ವಿಶಾಲವಾಗಿ ಬಿಡಿಸಿದ್ದ ರಂಗೋಲಿ ಭಕ್ತಭಾವ ಹೆಚ್ಚಿಸಿದವು.

ವೈಕುಂಠ ಏಕಾದಶಿಯು ಮಹತ್ವದ ದಿನವಾಗಿದ್ದರಿಂದ ಬಹಳಷ್ಟು ಭಕ್ತರು ಉಪವಾಸ ಆಚರಿಸುವ ಸಂಪ್ರದಾಯ ಪಾಲನೆ ಮಾಡಿದರು. ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಸ್ಯಾನಿಟೇಜರ್ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಲ್ಲದೇ ಪ್ರತಿಯೊಬ್ಬ ಭಕ್ತರು ಮಾಸ್ಕ್ ಧರಿಸಿಕೊಂಡು ಹಾಗೂ ಅಂತರ ಕಾಪಾಡಿಕೊಂಡು ಬರಲು ಭಕ್ತರಿಗೆ ದೇವಸ್ಥಾನದ ಸಮಿತಿಯಿಂದ ಮನವಿ ಮಾಡಲಾಗಿತ್ತು. ಹೀಗಾಗಿ ಎಲ್ಲರೂ ಮಾಸ್ಕ್ ಧರಿಸಿದ್ದರು.

ಗಾಜಗಾರಪೇಟೆಯ ಬಡಾವಣೆಯಲ್ಲಿರುವ ಶ್ರೀನಗರೇಶ್ವರ ದೇವಸ್ಥಾನದಲ್ಲಿಯೂ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆಯನ್ನು ಭಕ್ತರು ಸಲ್ಲಿಸಿದರು. ಮಹಿಳಾ ಭಜನಾ ಮಂಡಳಿಯಿಂದ ಪಾರಾಯಣ ಕಾರ್ಯಕ್ರಮ ನಡೆಯಿತು.

ವೈಕುಂಠ ಏಕಾದಶಿ ದಿನದಂದು ವೈಕುಂಠದಲ್ಲಿ ಬಾಗಿಲು ತೆರೆದಿರುತ್ತದೆ. ಹೀಗಾಗಿ ಈ ದಿನದಂದು ವೆಂಕಟೇಶ್ವರ ವಿಶೇಷವಾಗಿ ಭಕ್ತರಿಗೆ ನೇರವಾಗಿ ದರ್ಶನ ಕರುಣಿಸುತ್ತಾನೆ ಎನ್ನುವ ನಂಬಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT