ಗುರುವಾರ , ಮೇ 19, 2022
24 °C
ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ, ಜಂಗಮ ಸಮಾವೇಶ

‘ವೀರಶೈವ ಲಿಂಗಾಯತ ವಿಭಜನೆ ಸಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು:  ‘ಶರಣರ ಕ್ರಾಂತಿಯ ನೆಲ ಬಸವಕಲ್ಯಾಣದಲ್ಲಿ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡಿ ಅನುಭವ ಮಂಟಪ ನಿರ್ಮಿಸುತ್ತಿದೆ. ಆದರೆ, 12ನೇ ಶತಮಾನದಲ್ಲಿದ್ದ ಅನುಭವ ಮಂಟಪದ ಮೂಲ ಸ್ಥಳ ಈಗ ಕಸಾಯಿಖಾನೆಯಾಗಿ ಪರಿವರ್ತಿತಗೊಂಡಿದೆ’ ಎಂದು ಆಂದೋಲದ ಸಿದ್ಧಲಿಂಗ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಭಾನುವಾರ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಮತ್ತು ಜಂಗಮ ಸಮಾವೇಶದಲ್ಲಿ ಮಾತನಾಡಿದ ಅವರು, ‘ಐದು ಸಾವಿರ ವರ್ಷಗಳ ಹಿಂದೆ ಜಗದ್ಗುರು ರೇಣುಕಾಚಾರ್ಯರಿಂದ ಸ್ಥಾಪಿತ ವೀರಶೈವ ಲಿಂಗಾಯತ ಧರ್ಮ ವಿಘಟನೆಗೆ ಪಕ್ಷವೊಂದರ ಮುಖಂಡರು ಪ್ರಯತ್ನಿಸುತ್ತಿರುವುದು ನೋವಿನ ಸಂಗತಿ. ಜಂಗಮರಾದಿ ವೀರಶೈವ ಲಿಂಗಾಯತರು ಸಂಘಟಿತ ಶಕ್ತಿ ಪ್ರದರ್ಶನ ಮೂಲಕ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು’ ಎಂದು ಮನವಿ ಮಾಡಿದರು.

ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಜಗದ್ಗುರು ರೇಣುಕಾಚಾರ್ಯರಿಂದ ಸ್ಥಾಪಿಸಲ್ಪಟ್ಟ ವೀರಶೈವ ಲಿಂಗಾಯತ ಧರ್ಮ ಅಳುವಿನಂಚಿನಲ್ಲಿದೆ. ಅಂತಹ ಧರ್ಮ ದಲ್ಲಿರುವ ಜಂಗಮ ಸಮುದಾಯ ಮಠ, ಮಾನ್ಯಗಳಿಂದ ಸಮಾಜಕ್ಕೆ ಮಹಾನ್‍ ಕೊಡುಗೆ ನೀಡುತ್ತ ಬಂದಿದೆ. ಅಂತಹ ಜನಾಂಗ ಸಂಕಷ್ಟ ಕಾಲದಲ್ಲಿದ್ದು ಸರ್ಕಾರ ಅಗತ್ಯ ನೆರವಿಗೆ ಮುಂದಾಗಬೇಕು’ ಎಂದರು.

ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ, ಶಾಸಕರಾದ ಡಿ.ಎಸ್‍ ಹೂಲಗೇರಿ, ಶರಣಗೌಡ ಪಾಟೀಲ ಬಯ್ಯಾಪುರ, ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ, ಗುರುಗುಂಟಾ ಸದಾನಂದ ಶಿವಾಚಾರ್ಯರು ಮಾತನಾಡಿ, ‘ಜಂಗಮ ಬಂಧುಗಳು ಸಂವಿಧಾನ ಬದ್ಧ ಹಕ್ಕು ಪಡೆಯಲು ನಮ್ಮದೇನು ಅಭ್ಯಂತರವಿಲ್ಲ. ತಾವು ತಳಮಟ್ಟದಿಂದ ಸಂಘಟಿತರಾಗಿ ಬೆಳದಲ್ಲಿ ನಿಶ್ಚಿತವಾಗಿ ಸೌಲಭ್ಯ ದೊರಕಲಿವೆ’ ಎಂದರು.

ಮೆರವಣಿಗೆ: ಜಗದ್ಗುರು ರೇಣುಕಾಚಾರ್ಯ ಜಯಂತಿ ನಿಮಿತ್ತ ಭಾನುವಾರ ರೇಣುಕರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು. ಕಲಾ ಮೇಳಗಳು ಮೆರವಣಿಗೆಗೆ ಮೆರಗು ನೀಡಿದ್ದವು. ಅಭಿನವ ಗಜದಂಡ ಶಿವಾಚಾರ್ಯ ನೇತೃತ್ವದಲ್ಲಿ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ಕಾರ್ಯಕ್ರಮ ನಡೆಸಿಕೊಡಲಾಯಿತು.

ಅಭಿನವ ಗಜದಂಡ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಸಜ್ಜಲಗುಡ್ಡದ ದೊಡ್ಡ ಬಸವಾರ್ಯ ಸ್ವಾಮೀಜಿ, ಮಸ್ಕಿ ವರರುದ್ರಮುನಿ ಶಿವಾಚಾರ್ಯರು, ಅಂಕುಶದೊಡ್ಡಿ ವಾಮದೇವ ಶಿವಾಚಾರ್ಯರು, ಸಂತೆಕೆ ಲ್ಲೂರು ಮಹಾಂತ ಶಿವಾಚಾರ್ಯರು, ಯರಡೋಣಿ ಮುರುಘೇಂದ್ರ ಸ್ವಾಮೀಜಿ, ಮಾತೆ ಮಾಣಿಕೇಶ್ವರಿ ಮಠದ ನಂದಿಕೇಶ್ವರಿ, ಹುನಕುಂಟಿ ಶರಣಯ್ಯ ತಾತನವರು ನೇತೃತ್ವ ವಹಿಸಿದ್ದರು.  ಅಮರೇಶ ಬಲ್ಲಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಡಾ. ಶಿವಬಸಪ್ಪ ಹೆಸರೂರು,ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ಪ್ರಭುಸ್ವಾಮಿ ಅತ್ತನೂರು, ಕಾರ್ಯದರ್ಶಿ ವೀರಭದ್ರಯ್ಯ ಹಿರೇಮಠ, ಯುವ ಘಟಕ ಅಧ್ಯಕ್ಷ ಅಮರೇಶ ಹಿರೇಮಠ, ಕಾರ್ಯದರ್ಶಿ ವೀರಭದ್ರಯ್ಯ ಗುಂತಗೋಳ. ಮುಖಂಡರಾದ ಶರಣಪ್ಪ ಮೇಟಿ, ಮಲ್ಲಣ್ಣ ವಾರದ, ಕಿಡಿಗಣೆಯ್ಯಸ್ವಾಮಿ, ಅಮರಗುಂಡಪ್ಪ ಮೇಟಿ, ವೀರಶೈವ ಲಿಂಗಾಯತ ಒಳಪಂಗಡಗಳ ಅಧ್ಯಕ್ಷರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.