ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಮಾದರಿಯ ನೋಟು ಚಲಾವಣೆಗೆ ಪರದಾಟ

ಹಳ್ಳಿಗರು, ಕೆಲವು ವರ್ತಕರು ₹100ರ ನೋಟು ಪಡೆಯಲು ಹಿಂದೇಟು
ಮಂಜುನಾಥ ಎನ್ ಬಳ್ಳಾರಿ
Published 28 ಏಪ್ರಿಲ್ 2024, 5:08 IST
Last Updated 28 ಏಪ್ರಿಲ್ 2024, 5:08 IST
ಅಕ್ಷರ ಗಾತ್ರ

ಕವಿತಾಳ: ಸದ್ಯ ಚಲಾವಣೆಯಲ್ಲಿರುವ ಯಾವುದೇ ನೋಟು ಬಂದ್ ಆಗದಿದ್ದರೂ ₹100ರ ಮುಖ ಬೆಲೆಯ ಹಳೆ ಮಾದರಿಯ ನೋಟು ಚಲಾವಣೆಗೆ ಸಾರ್ವಜನಿಕರು, ವಿಶೇಷವಾಗಿ ಗ್ರಾಮೀಣ ಭಾಗದ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಳ್ಳಿಗಳಲ್ಲಿನ ಸಣ್ಣ–ಪುಟ್ಟ ಕಿರಾಣಿ ಅಂಗಡಿಗಳು, ಹೋಟೆಲ್, ಡಬ್ಬಾ ಅಂಗಡಿಗಳ ವ್ಯಾಪಾರಿಗಳು ಮತ್ತು ಕೂಲಿಕಾರರು ₹100ರ ಮುಖ ಬೆಲೆಯ ಹಳೆ ಮಾದರಿಯ ನೋಟು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದವರು ನೋಟು ಚಲಾವಣೆಗೆ ಪರದಾಡುತ್ತಿದ್ದಾರೆ.

2024ರ ಮಾರ್ಚ್‌ ಅಂತ್ಯಕ್ಕೆ ನೋಟು ಬಂದ್ ಆಗಿದೆ ಎನ್ನುವ ವದಂತಿ ಹಬ್ಬಿತ್ತು. ಆದ್ದರಿಂದ ನೋಟು ಪಡೆಯಲು ಕೆಲವು ವರ್ತಕರು ಹಿಂದೇಟು ಹಾಕುತ್ತಿದ್ದಾರೆ. ಹಳೆ ಮಾದರಿಯ ₹50ರ ಮುಖ ಬೆಲೆಯ ನೋಟು ಪಡೆಯಲು ನಿರ್ವಾಹಕರೊಬ್ಬರು ನಿರಾಕರಿಸಿದ ಕಾರಣ ಈಚೆಗೆ ಬಸ್‌ವೊಂದರಲ್ಲಿ ಗಲಾಟೆ ನಡೆದಿದೆ.

‘ಈಚೆಗೆ ಹಳ್ಳಿಗೆ ಹೋದಾಗ ಬೈಕ್ ಪಂಕ್ಚರ್ ಆಯಿತು. ಅಲ್ಲಿನ ಅಂಗಡಿಯಲ್ಲಿ ಪಂಕ್ಚರ್ ಹಾಕಿಸಿದೆ. ನನ್ನ ಬಳಿಯಿದ್ದ ಹಳೆ ಮಾದರಿಯ ₹100ರ ನೋಟು ನೀಡಿದಾಗ ಅಂಗಡಿಯಾತ ಅದನ್ನು ಪಡೆಯಲು ನಿರಾಕರಿಸಿದ. ಕೊನೆಗೆ ₹500ರ ನೋಟು ನೀಡಿ ಚಿಲ್ಲರೆ ಪಡೆಯಲು ಹರಸಾಹಸ ಪಡಬೇಕಾಯಿತು’ ಎಂದು ಕವಿತಾಳ ನಿವಾಸಿ ಬಸವರಾಜ ತಿಳಿಸಿದರು.

‘ಹಳ್ಳಿಗಳಲ್ಲಿ ಬಹುತೇಕರು ಹಳೆ ಮಾದರಿಯ ನೋಟು ಪಡೆಯಲು ಹಿಂದೇಟು ಹಾಕುತ್ತಾರೆ. ಅದೇ ರೀತಿ ಅಂಗಡಿಯವರು ಹಳೆ ನೋಟುಗಳನ್ನು ನೀಡುತ್ತಾರೆ. ನಾವು ವಾಪಸ್ ನೀಡಿದರೆ ತೆಗೆದುಕೊಳ್ಳುವುದಿಲ್ಲ. ನಾವು ಅವುಗಳನ್ನು ಬ್ಯಾಂಕ್‌ ಜಮಾ ಮಾಡುತ್ತಿದ್ದೇವೆ’ ಎಂದು ಸಹಕಾರ ಸಂಘದ ಪಿಗ್ಮಿ ಸಂಗ್ರಹಕಾರ ದೇವರಾಜ ನಾಗಲೀಕರ ಹೇಳಿದರು.

‘ಹಳೆ ಮಾದರಿಯ ₹100ರ ಮುಖ ಬೆಲೆಯ ನೋಟು ಬಂದ್ ಆಗಿಲ್ಲ. ಈ ಕುರಿತು ಆರ್‌ಬಿಐ ಯಾವುದೇ ಸೂಚನೆ ನೀಡಿಲ್ಲ. ವದಂತಿ ನಂಬಿಕೊಂಡು ನೋಟು ಸ್ವೀಕರಿಸಲು ನಿರಾಕರಿಸುವುದು ತಪ್ಪು. ಹಾಗೊಂದು ವೇಳೆ ತೀರಾ ಹಾಳಾದ ನೋಟುಗಳಿದ್ದರೆ ಮತ್ತು ಮಾರುಕಟ್ಟೆಯಲ್ಲಿ ಚಲಾವಣೆ ಸಾಧ್ಯವಾಗದಿದ್ದರೆ ಬ್ಯಾಂಕ್‌ಗೆ ಬಂದು ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ’ ಎಂದು ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಎಸ್.ಅರುಣಕುಮಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT