ಗುರುವಾರ , ಮಾರ್ಚ್ 30, 2023
24 °C

ರಾಯಚೂರು: ಲಿಂಗಸುಗೂರಿನಲ್ಲಿ ನೀರಿನ ಅಭಾವ, ಪರ್ಯಾಗಳ ಹುಡುಕಾಟ

ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ 23 ವಾರ್ಡ್ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ನೀರು ಸಂಗ್ರಹಣಾ ಕೆರೆ ಭಾಗಶಃ ಖಾಲಿ ಆಗುತ್ತ ಬಂದಿದೆ. ಹತ್ತು ದಿನಗಳಿಗೆ ಮಾತ್ರ ಪೂರೈಸುವಷ್ಟು ನೀರು ಸಂಗ್ರಹವಿದ್ದು ಪರ್ಯಾಯ ಮಾರ್ಗಗಳ ಹುಡುಕಾಟ ಈಗ ಆರಂಭವಾಗಿದೆ.

ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಪಕ್ಕದಲ್ಲಿ ಕಾಳಾಪುರ ಬಳಿ ನಿರ್ಮಿಸಿದ ಶಾಶ್ವತ ಕುಡಿವ ನೀರು ಸಂಗ್ರಹಣಾ ಕೆರೆ ಭರ್ತಿ ಮಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಪುರಸಭೆ ಆಡಳಿತ ಮಂಡಳಿ, ಪ್ರತಿಪಕ್ಷ ಸದಸ್ಯರು, ಮುಖ್ಯಾಧಿಕಾರಿಗಳ ರಾಜಕೀಯವೇ ಕಾರಣವಾಗಿದ್ದು, ಜನರಿಗೆ ಸಂಕಷ್ಟಪಡುವಂತಾಗಿದೆ.

ಏಪ್ರಿಲ್‍ ತಿಂಗಳಲ್ಲಿ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಅದಕ್ಕೂ ಮುಂಚೆ ಕೆರೆ ಭರ್ತಿ ಮಾಡಿಕೊಳ್ಳುವಲ್ಲಿ ಪುರಸಭೆ ವಿಫಲವಾಗಿದೆ. ನೀರು ಸ್ಥಗಿತ ನಂತರದಲ್ಲಿ ಮುಖ್ಯಾಧಿಕಾರಿ, ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಸೌಜನ್ಯಕ್ಕೂ ಕೆರೆಯತ್ತ ಮುಖ ಮಾಡಿಲ್ಲ. ಈ ಕುರಿಯು ಆರೋಪ, ಪ್ರತ್ಯಾರೋಪಗಳು ಕೇಳಿಬರುತ್ತಿವೆ.

ತಡವಾಗಿ ಎಚ್ಚೆತ್ತುಕೊಂಡ ಪುರಸಭೆ ಮುಖ್ಯಾಧಿಕಾರಿ ಸಿಬ್ಬಂದಿ ಜುಲೈ 9ರಂದು ಮುಖ್ಯ ನಾಲೆ ಎಂಜಿನಿಯರ್ ಕಚೇರಿಗೆ ಪತ್ರ ಬರೆದು ತುರ್ತಾಗಿ ನೀರು ಹರಿಸಲು ಮನವಿ ಮಾಡಿದ್ದಾರೆ.

ಮುಖ್ಯ ನಾಲೆ ಅಧುನೀಕರಣ ಕಾಮಗಾರಿ ಭರದಿಂದ ನಡೆದಿದ್ದು ಸಧ್ಯದ ಮಟ್ಟಿಗೆ ನೀರು ಹರಿಸುವ ಭರವಸೆ ಹುಸಿಯಾಗಿದೆ. ಪರ್ಯಾಯ ವ್ಯವಸ್ಥೆ ಕಾಣುತ್ತಿಲ್ಲ.

ಎರಡು ದಿನಕ್ಕೊಮ್ಮೆ ಹಿಂದೆ ನೀರು ಪೂರೈಸಲಾಗುತ್ತಿತ್ತು. ತಿಂಗಳಿಂದ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಹತ್ತು ದಿನ ಕಳೆದರೆ ಈ ನೀರು ಪೂರೈಕೆ ಅಸಾಧ್ಯ. ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕಿದ್ದ ಚುನಾಯಿತ ಪ್ರತಿನಿಧಿಗಳು ಮೌನವಾಗಿದ್ದಾರೆ.

’ಇರುವಷ್ಟು ನೀರು ಪೂರೈಸುತ್ತೇವೆ‘ ಎಂದು ಹೆಸರು ಹೇಳಲಿಚ್ಛಿಸದ ನೌಕರರು ತಿಳಿಸಿದ್ದಾರೆ.

‘ಪುರಸಭೆ ಮುಖ್ಯಾಧಿಕಾರಿ, ಆಡಳಿತ ಮಂಡಳಿ ತಿಕ್ಕಾಟದಲ್ಲಿ ಕುಡಿವ ನೀರು ಕೆರೆಗೆ ನೀರು ಭರ್ತಿ ಮಾಡಿಕೊಳ್ಳುವಲ್ಲಿ ವೈಫಲ್ಯತೆ ಎದ್ದು ಕಾಣುತ್ತಿದೆ. ರಾಂಪೂರ ಏತ ನೀರಾವರಿ ಯೋಜನೆ ಅಥವಾ ಬಲದಂಡೆ ನಾಲೆ ಮೂಲಕ ತುರ್ತು ನೀರು ಹರಿಸಲು ಸಂಬಂಧ ಪಟ್ಟ ಅಧಿ
ಕಾರಿಗಳು ಮುಂದಾಗದಿದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ’ ಎಂದು ಪುರಸಭೆ ಮಾಜಿ ಅಧ್ಯಕ್ಷ ಖಾದರಪಾಷ ಎಚ್ಚರಿಕೆ
ನೀಡಿದ್ದಾರೆ.

ಮುಖ್ಯಾಧಿಕಾರಿ (ಪ್ರಭಾರಿ) ಅಭಿಷೇಕ ಪಾಂಡೆ ಮಾತನಾಡಿ ‘ಈಗಿರುವ ನೀರು ಕೆಲ ದಿನ ಮಟ್ಟಿಗೆ ಪೂರೈಸಬಹುದು. ಪರ್ಯಾಯ ವ್ಯವಸ್ಥೆಗೆ ಶಾಸಕರು, ಚುನಾಯಿತ ಪ್ರತಿನಿಧಿಗಳ ಜೊತೆಗೆ ಚರ್ಚಿಸುತ್ತೇವೆ. ಕೆರೆಗೆ ನೀರು ತುಂಬಿಸದೆ ಹೋದರೆ ತೊಂದರೆ ಹೆಚ್ಚು. ತಾವು ಪ್ರಭಾರಿ ಅಧಿಕಾರಿ ವಹಿಸಿಕೊಂಡಿದ್ದು ಸಿಬ್ಬಂದಿ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳುವೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು