ಗುರುವಾರ , ನವೆಂಬರ್ 21, 2019
20 °C
ಅನುಷ್ಠಾನಗೊಳ್ಳದ ರಾಜೀವ್‍ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

ನಿರುಪಯುಕ್ತವಾದ ನೀರು ಶುದ್ಧೀಕರಣ ಘಟಕ

Published:
Updated:
Prajavani

ಸಿಂಧನೂರು: ತಾಲ್ಲೂಕಿನ ರೌಡಕುಂದಾ ಗ್ರಾಮದ ಬಳಿ ನಿರ್ಮಿಸಿದ ರಾಜೀವ್‍ಗಾಂಧಿ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಅಡಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಿದ್ದರೂ ಅದು ಬಳಕೆಗೆ ಬಾರದೆ ನಿರುಪಯುಕ್ತವಾಗಿದ್ದು, ಜಾನುವಾರು ಕಟ್ಟುವ ದೊಡ್ಡಿಯಾಗಿ ಮಾರ್ಪಟ್ಟಿದೆ.

ಕಳೆದ 8 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿಯಿಂದ ₹ 13 ಕೋಟಿ ವೆಚ್ಚದಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ.

ತಾಲ್ಲೂಕಿನ ಗೊರೇಬಾಳ, ರೌಡಕುಂದಾ, ಲಕ್ಷ್ಮಿಕ್ಯಾಂಪ್, ಗೊರೇಬಾಳ ಕ್ಯಾಂಪ್, ಮೂಡಲಗಿರಿಕ್ಯಾಂಪ್, ಬೂದಿವಾಳಕ್ಯಾಂಪ್, ಶ್ರೀಪುರಂಜಂಕ್ಷನ್ ಗ್ರಾಮಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಉದ್ದೇಶದಿಂದಲೇ 2010-11ನೇ ಸಾಲಿನಲ್ಲಿ ಬಹುಗ್ರಾಮ ಯೋಜನೆ ಜಾರಿಗೊಳಿಸಿ ಸಾಲಗುಂದಾ ಗ್ರಾಮದಲ್ಲಿ ಹರಿಯುವ ತುಂಗಭದ್ರಾ ನದಿಯಿಂದ ಏಕಕಾಲಕ್ಕೆ ಏಳು ಗ್ರಾಮಗಳಿಗೆ ನೀರು ಪೂರೈಸಲು ಅನುಕೂಲವಾಗುವ ಮಧ್ಯದ ಗ್ರಾಮವಾದ ರೌಡಕುಂದಾದಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ.

6 ಕಿ.ಮೀ ದೂರದವರೆಗೆ ನೀರು ಸರಬರಾಜು ಮಾಡಲು ಪೈಪುಗಳನ್ನು ಸಹ ಅಳವಡಿಸಲಾಗಿದೆ. ಇಷ್ಟೆಲ್ಲ ವ್ಯವಸ್ಥೆ ಕಲ್ಪಿಸಿದ್ದರೂ ಯಾವೊಂದು ಗ್ರಾಮಕ್ಕೂ ನೀರು ಪೂರೈಕೆ ಇಲ್ಲದೆ ನಿರುಪಯುಕ್ತವಾಗಿದೆ.

ಟೆಂಡರ್ ಪಡೆದಿದ್ದ ಗುತ್ತಿಗೆದಾರರು ಅಸಮರ್ಪಕ ಕಾಮಗಾರಿ ನಡೆಸಿ ಕೈತೊಳೆದುಕೊಂಡಿದ್ದಾರೆ. 2013ರಲ್ಲಿ ಈ ಭಾಗದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಯೋಜನೆ ಉದ್ಘಾಟಿಸಿ ಚಾಲನೆ ನೀಡಿದ್ದರು.

ಪ್ರಾರಂಭದ ವರ್ಷ ಸುಮಾರು 3 ರಿಂದ 4 ಗ್ರಾಮಗಳಿಗೆ ಉತ್ತಮವಾಗಿ ನೀರು ಪೂರೈಸಿತು. ನಂತರ ಸಮರ್ಪಕ ನಿರ್ವಹಣೆ ಇಲ್ಲದೆ ಮತ್ತು ಅಧಿಕಾರಿಗಳ ನಿಷ್ಕಾಳಜಿಯಿಂದ ನೀರೊದಗಿಸುವ ಕಾರ್ಯ ಸ್ಥಗಿತಗೊಂಡಿತು. ನಿತ್ಯ ನದಿ ಪಕ್ಕದಲ್ಲಿ ಮೋಟರ್ ಚಾಲನೆ ಮಾಡುವವರು, ಶುದ್ಧೀಕರಣ ಘಟಕದಿಂದ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ವ್ಯವಸ್ಥೆ ಇಲ್ಲದಾಗಿ ಯೋಜನೆ ಉದ್ದೇಶ ಬುಡಮೇಲಾಗಿದೆ.

ನೀರು ಪೂರೈಕೆ ಇಲ್ಲದ ಕಾರಣ ಶುದ್ಧೀಕರಣ ಘಟಕಕ್ಕೆ ನೀರು ಸಂಗ್ರಹಿಸುವ ಹೊರ ತೊಟ್ಟಿಗಳು ತ್ಯಾಜ್ಯದಿಂದ ತುಂಬಿವೆ. ಪಂಪ್‍ಸೆಟ್ ಕೊಠಡಿಯು ಶಿಥಿಲಗೊಂಡಿದೆ. ವಿದ್ಯುತ್ ಪರಿವರ್ತಕದಿಂದ ನೀರೆತ್ತುವ ಪಂಪ್‍ವರೆಗೆ ವೈರ್ ಅಳವಡಿಸಿದ ಸ್ಥಳದಲ್ಲಿ ಬೃಹತಾಕಾರದ ಬಿರುಕು ಕಾಣಿಸಿದ್ದು ಗೋಡೆ ಬೀಳುವಂತಿದೆ.

ನದಿ ನೀರು ಸಂಗ್ರಹಣೆಗಾಗಿ ಆಳವಾಗಿ ನಿರ್ಮಿಸಿದ ತಳಮಟ್ಟದ ಶುದ್ಧೀಕರಣ ನೀರಿನ ತೊಟ್ಟಿಯಲ್ಲಿ ಅರಿದ ಬಟ್ಟೆ, ಚಪ್ಪಲಿ, ಘನತ್ಯಾಜ್ಯ ವಸ್ತುಗಳು ಬಿದ್ದು ದುರ್ವಾಸನೆ ಬೀರುತ್ತಿದ್ದು, ಹಾವು, ಚೇಳು ಸೇರಿಕೊಂಡಿರುವುದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ.

ಗ್ರಾಮೀಣ ಪ್ರದೇಶಗಳಿಗೆ ನೀರಿನ ಸಮಸ್ಯೆ ಎದುರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಕೋಟಿಗಟ್ಟಲೇ ಹಣ ವ್ಯಯಿಸಿ ನಿರ್ಮಿಸಿದ ಯೋಜನೆ ಸಂಪೂರ್ಣವಾಗಿ ಹಾಳಾಗಿದ್ದರೂ ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದಕ್ಕೆ ಲಿಂಗರಾಜ, ರಾಮರೆಡ್ಡಿ, ಪುರುಷೋತ್ತಮ, ಸತ್ಯನಾರಾಯಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಸಂಬಂಧಿಸಿದ ಅಧಿಕಾರಿಗಳು ಘಟಕವನ್ನು ಆರಂಭಿಸುವ ಮೂಲಕ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಏಳು ಗ್ರಾಮಸ್ಥರೆಲ್ಲರೂ ಸೇರಿ ಶ್ರೀಪುರಂಜಂಕ್ಷನ್ ಬಳಿ ರಸ್ತೆ ಸಂಚಾರ ತಡೆದು ಪ್ರತಿಭಟಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಪ್ರತಿಕ್ರಿಯಿಸಿ (+)