ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ: ಗ್ರಾಮಸ್ಥರ ಪ್ರತಿಭಟನೆ

Last Updated 23 ಜುಲೈ 2013, 10:52 IST
ಅಕ್ಷರ ಗಾತ್ರ

ಲಿಂಗಸುಗೂರ: ಅನ್ನಭಾಗ್ಯ ಯೋಜನೆ ಅನುಷ್ಠಾನದಲ್ಲಿ ತಾಲ್ಲೂಕು ಆಡಳಿತ ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ನಿರ್ಲಕ್ಷ್ಯ ಖಂಡಿಸಿ ಸೋಮವಾರ ಮಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರಣಪ್ಪ ಹುಲ್ಲೂರು ನೇತೃತ್ವದಲ್ಲಿ ಗ್ರಾಮಸ್ಥರು ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಳೆದ ಹತ್ತು ದಿನಗಳ ಹಿಂದೆಯೇ ರಾಜ್ಯ ಸರ್ಕಾರ `ಅನ್ನಭಾಗ್ಯ' ಯೋಜನೆಗೆ ಚಾಲನೆ ನೀಡಿದ್ದರೂ ಆಹಾರ ಇಲಾಖೆ ತಾಲ್ಲೂಕಿನಲ್ಲಿ ಪರಿಪೂರ್ಣವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಮಟ್ಟೂರು ಗ್ರಾಮದಲ್ಲಿ ರೂ. 1ಕ್ಕೆ 1ಕೆಜಿ ಅಕ್ಕಿ ನೀಡುವ ಬದಲು ರೂ. 1.50ಪೈಸೆಗೆ 1ಕೆಜಿ ಅಕ್ಕಿ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಯೂನಿಟ್ ಆಧರಿಸಿ ಒಬ್ಬರಿಗೆ 10 ಕೆಜಿ, ಇಬ್ಬರಿಗೆ 20ಕೆಜಿ, ಮೂರಕ್ಕಿಂತ ಹೆಚ್ಚು ಜನರಿದ್ದಲ್ಲಿ 30ಕೆಜಿ ಅಕ್ಕಿ ನೀಡಬೇಕು. ಆದರೆ ನ್ಯಾಯಬೆಲೆ ಅಂಗಡಿಯವರು ಒಬ್ಬರಿಗೆ 6-8ಕೆಜಿ, ಇಬ್ಬರಿಗೆ 15-18ಕೆಜಿ, ಮೂರಕ್ಕಿಂತ ಹೆಚ್ಚು ಜನರಿದ್ದವರಿಗೆ 25-28ಕೆಜಿ ಅಕ್ಕಿ ಮಾತ್ರ ನೀಡಲಾಗುತ್ತಿದೆ. ಪ್ರಶ್ನಿಸುವವರಿಗೆ ತಮ್ಮ ಕಾರ್ಡ್‌ಗೆ ಅಕ್ಕಿ ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.

ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಶಿರಸ್ತೆದಾರ ಬಿ.ಕೆ. ಕುಲಕರ್ಣಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತದ ಯಾವುದೇ ತಪ್ಪುಗಳಿಲ್ಲ. ಈ ಕುರಿತಂತೆ ನ್ಯಾಯಬೆಲೆ ಅಂಗಡಿ ಮಾಲೀಕರ ಜತೆ ಮಾತನಾಡಿ ನ್ಯಾಯ ಒದಗಿಸಲಾಗುವುದು. ಅನಗತ್ಯ ಗೊಂದಲ ಬೇಡ ಎಂದು ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಮಾತನಾಡಿ, ಗುಡಿಹಾಳ, ಮಟ್ಟೂರು, ಕಡದರಗಡ್ಡಿ, ಯರಗೋಡಿ ಸೇರಿದಂತೆ ತಾಲ್ಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯ ಯೋಜನೆ ಅನುಷ್ಠಾನ ಸಂಪೂರ್ಣ ವಿಫಲವಾಗಿದೆ ಆರೋಪಿಸಿದರು.

ಪ್ರತಿಭಟನೆಯಲ್ಲಿ ಮಟ್ಟೂರು ಗ್ರಾಮ ಪಂಚಾಯಿತಿ ಸದಸ್ಯ ಹೊಳಿಯಪ್ಪ, ಬೀರಪ್ಪ. ಮುಖಂಡರಾದ ಶರಣಪ್ಪ ಬಳ್ಳಾರಿ, ಬಸವರಾಜ, ಶಿವಗ್ಯಾನಪ್ಪ, ಕರಿಯಪ್ಪ ಕರಡಿ, ಈರಪ್ಪ, ಹುಲಗಪ್ಪ ಹರಿಜನ, ಹನುಮಂತ ಚಲುವಾದಿ, ಅಮರಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT