ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರು ಕಸ್ತೂರಿ ಮೃಗದಂತೆ

ಸಾಧಕರ ಸನ್ಮಾನ ಸಮಾರಂಭದಲ್ಲಿ ಶಿವರಾಜ ಪಾಟೀಲ ಅಭಿಮತ
Last Updated 5 ಡಿಸೆಂಬರ್ 2016, 9:25 IST
ಅಕ್ಷರ ಗಾತ್ರ

ಶಾಂತರಸ ಪ್ರಧಾನ ವೇದಿಕೆ (ರಾಯಚೂರು): ‘ಕನ್ನಡಿಗರು ಕಸ್ತೂರಿ ಮೃಗದಂತೆ. ಅನಾದಿ ಕಾಲದಿಂದ ಬಂದಿರುವ ಜ್ಞಾನ ಭಂಡಾರ ಹಾಗೂ ಹಿರಿಮೆ ಗರಿಮೆಗಳು ನಮಗೆ ಗೊತ್ತಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಬೇಸರ ವ್ಯಕ್ತಪಡಿಸಿದರು.

82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ 82 ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ‘ನಮ್ಮ ಭಾಷೆಗೆ ಸ್ವಂತ ಲಿಪಿ, ವ್ಯಾಕರಣ ಸೇರಿದಂತೆ ಎಲ್ಲವೂ ಇವೆ. ಭಾಷೆಗೆ ಭವ್ಯ ಇತಿಹಾಸ ಇದೆ. ಆದರೆ, ಅದನ್ನು ಮರೆತಿದ್ದೇವೆ’ ಎಂದರು.

‘ಕನ್ನಡಿಗರು ಸಿಕ್ಕರೂ ನಾವು ಇಂಗ್ಲಿಷ್‌ನಲ್ಲೇ ಮಾತನಾಡುತ್ತೇವೆ. ಇಂಗ್ಲಿಷ್‌ ಭಾಷೆ ಮೇಲಿನ ವ್ಯಾಮೋಹ ಅತಿಯಾಗಿದೆ. ನಮ್ಮವರು ಸಿಕ್ಕಾಗ ಕನ್ನಡದಲ್ಲೇ ಮಾತನಾಡುವ ಪರಿಪಾಠ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಹೈದರಾಬಾದ್‌ ಕರ್ನಾಟಕ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಕನ್ನಡದ ಕೆಲಸದಲ್ಲಿ ನಾವು ಮಂಚೂಣಿಯ­ಲ್ಲಿದ್ದೇವೆ. ಇದಕ್ಕೆ ಈ ಸಮ್ಮೇಳನದ ಅಚ್ಚುಕಟ್ಟುತನವೇ ಸಾಕ್ಷಿ’ ಎಂದು ಅಭಿಮಾನಪಟ್ಟರು.

ಹಿರಿಯ ಕವಿ ದೊಡ್ಡರಂಗೇಗೌಡ ಆಶಯ ಭಾಷಣ ಮಾಡಿ, ‘ಒಂದು ಕಾಲದಲ್ಲಿ ಟೀ ಮಾರುತ್ತಿದ್ದ ಬಾಲಕ ಇಂದು ದೇಶದ ಪ್ರಧಾನಿಯಾಗಿದ್ದಾರೆ. ರಾಮೇಶ್ವರದ ಸಮೀಪದ ಹಳ್ಳಿಯೊಂದ­ರಲ್ಲಿ ದಿನಪತ್ರಿಕೆ ಹಾಕುತ್ತಿದ್ದ ಹುಡುಗ ದೇಶದ ರಾಷ್ಟ್ರಪತಿಯಾಗಿದ್ದರು. ಸಾಧನೆಯ ಹಾದಿ ಕಲ್ಲು ಮುಳ್ಳಿನಿಂದ ಕೂಡಿರುತ್ತದೆ. ಇದನ್ನು ಅರಿತು ನಾವೆಲ್ಲ ಮುನ್ನಡೆಯಬೇಕು’ ಎಂದು ಹೇಳಿದರು.

ಸನ್ಮಾನಿತರ ಅಸಮಾಧಾನಕಾರ್ಯ­ಕ್ರಮ ನಿರೂಪಕಿ ಎಲ್ಲ ಸನ್ಮಾನಿತರ ಪರಿಚಯವನ್ನು ಮೊದಲೇ ಸಿದ್ಧಪಡಿಸಿ­ಕೊಂಡು ಬಂದಿದ್ದರು. ಈ ನಡುವೆ, ಕಾರ್ಯಕ್ರಮಕ್ಕೆ 10 ಮಂದಿ ಸನ್ಮಾನಿತರು ಗೈರುಹಾಜರಾಗಿದ್ದರು. ನಿರೂಪಕಿ ಇದನ್ನು ಅರಿಯದೆ ಪಟ್ಟಿಯಲ್ಲಿದ್ದ ಪ್ರಕಾರ ಹೆಸರು ಹೇಳುತ್ತಾ ಹೋದರು. ಸನ್ಮಾನದ ವೇಳೆಯೂ ಈ ಗೊಂದಲ ಮುಂದುವರಿಯಿತು.

ಕೆಲವರ ಪರಿಚಯವನ್ನು ದೀರ್ಘವಾಗಿ ಹೇಳಿದರು. ಉಳಿದಂತೆ ‘ನಾಡು ನುಡಿಗೆ ಸಲ್ಲಿಸಿದ ಸೇವೆಗೆ ಸನ್ಮಾನ ಮಾಡಲಾಗುತ್ತಿದೆ’ ಎಂದರು. ಇದು ಸನ್ಮಾನಿತರ ಅಸಮಾಧಾನಕ್ಕೂ ಕಾರಣವಾಯಿತು. ಸನ್ಮಾನಿತರೊಬ್ಬರು ಮೈಕ್‌ ಬಳಿ ಬಂದು, ‘ಕೆಲವರ ಪರಿಚಯ ಮಾತ್ರ ಮಾಡುತ್ತಿದ್ದೀರಿ. ನಮ್ಮ ಸಾಧನೆ ಕುರಿತು ಉಲ್ಲೇಖವೇ ಇಲ್ಲ. ಅಪಮಾನ ಮಾಡುತ್ತಿದ್ದೀರಿ’ ಎಂದು ಕಿಡಿಕಾರಿದರು. ದ್ವಿತೀಯಾರ್ಧದಲ್ಲಿ ಈ ಲೋಪ ಆಗದಂತೆ ಎಚ್ಚರ ವಹಿಸಿದರು.

*
ಸಾಹಿತ್ಯ ಸಮ್ಮೇಳನ ಜಾತ್ರೆ ಅಲ್ಲ, ನುಡಿ ಹಬ್ಬ. ಜನಸಾಮಾನ್ಯರಿಗೆ ಇಲ್ಲಿ ಸುಲಭದಲ್ಲಿ ಸಾಹಿತಿಗಳು ಹಾಗೂ ವಿಮರ್ಶಕರೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ.
-ಶಿವರಾಜ ಪಾಟೀಲ,
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT