ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಚಾರದ ‘ ಬರಗಾಲ ಬಿಸಿ ಊಟ ಯೋಜನೆ’

ದಾಖಲೆಗಳಲ್ಲಿ ಭರ್ತಿ ಲೆಕ್ಕ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲ, ಮುಚ್ಚಿದ ಶಾಲೆಗಳು
Last Updated 26 ಏಪ್ರಿಲ್ 2016, 7:29 IST
ಅಕ್ಷರ ಗಾತ್ರ

ದೇವದುರ್ಗ : ತೀವ್ರ ಬರಗಾಲ ಎದುರಿಸುತ್ತಿರುವ ಪ್ರದೇಶಗಳಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗೆ ರಜೆಯಲ್ಲಿಯೂ ಮಧ್ಯಾಹ್ನದ ಬಿಸಿ ಊಟ ನೀಡಲು ಸರ್ಕಾರ ಆದೇಶ ಜಾರಿಗೊಳಿಸಿದರೂ, ಶಿಕ್ಷಕರ ಅಸಡ್ಡೆಯಿಂದ ಯೋಜನೆ ಜಾರಿ ಸಮರ್ಪಕವಾಗಿಲ್ಲ. ತಾಲ್ಲೂಕಿನಲ್ಲಿ 1ರಿಂದ 7ನೇ ತರಗತಿ ಇರುವ  ಸರ್ಕಾರಿ ಶಾಲೆಗಳ ಸಂಖ್ಯೆ 300ಕ್ಕೂ ಹೆಚ್ಚು ಇದೆ. 

ಬೇಸಿಗೆ ರಜೆಯಲ್ಲಿಯೂ ಶಾಲೆಯನ್ನು ಬೆಳಗ್ಗೆ 9.30 ಗಂಟೆಗೆ ತೆರೆದು ಮಧ್ಯಾಹ್ನ 12.30ಕ್ಕೆ ಮಕ್ಕಳಿಗೆ ಬಿಸಿ ಊಟ ನೀಡಿದ ನಂತರ ಮುಚ್ಚಲು ಆದೇಶದಲ್ಲಿ ತಿಳಿಸಲಾಗಿದೆ.

ಶಿಕ್ಷಕರಿಗೆ ಬಿಸಿ ಊಟದ ಜವಾಬ್ದಾರಿ  ವಹಿಸಲಾಗಿದೆ. ನಿರ್ಲಕ್ಷ್ಯ ಕಂಡು ಬಂದರೆ ಸಂಬಂಧಿಸಿದ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ  ಕ್ಷೇತ್ರ ಶಿಕ್ಷಣಾಧಿಕಾರಿ ರವಾನಿಸಿದ ಜ್ಞಾಪನ ಪತ್ರದಲ್ಲಿ ತಿಳಿಸಲಾಗಿದೆ.

ಕೆ. ಇರಬಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಗಡ್ಡಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೋಮವಾರ  ಮಧ್ಯಾಹ್ನ ಬಾಗಿಲು ಮುಚ್ಚಲಾಗಿತ್ತು.
ಶಿಕ್ಷಕರು ತಾಂಡಾಕ್ಕೆ ಅಪರೂಪಕ್ಕೆ ಬರುತ್ತಾರೆ ಇದೇ ಕಾರಣಕ್ಕೆ ಮಕ್ಕಳು ಶಾಲೆಗೆ ಬಂದಿಲ್ಲ. ಮಧ್ಯಾಹ್ನದ ಬಿಸಿ ಊಟ ನಡೆದಿಲ್ಲ ಎಂದು ತಾಂಡಾದ ಶಂಕ್ರಪ್ಪ ರಾಠೋಡ್‌ ಎಂಬವರು ತಿಳಿಸಿದರು.

ಕೋತಿಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ 150ಕ್ಕೂ ಹೆಚ್ಚು ಇದೆ. ಬರಗಾಲದ ಬಿಸಿ ಊಟ ಯೋಜನೆಗೆ ಸುಮಾರು 70 ಜನ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸುವುದಾಗಿ ಒಪ್ಪಿಗೆ ಪತ್ರ ನೀಡಿದ್ದಾರೆ ಎಂದು ಮುಖ್ಯ ಶಿಕ್ಷಕ ಇದ್ರೀಶ್‌ ತಿಳಿಸಿದ್ದಾರೆ. ಆದರೆ ಸೋಮವಾರ ಕೇವಲ 4 ಜನ ಮಕ್ಕಳು ಮಾತ್ರ ಹಾಜರಿದ್ದರು.  ಪ್ರತಿದಿನ  70 ಮಕ್ಕಳು ಊಟ ಮಾಡುತ್ತಿರುವುದಾಗಿ ಇಲಾಖೆಗೆ ಮಾಹಿತಿ ನೀಡಲಾಗಿದೆ.

ಇದರಿಂದ ಖಜಾನೆಗೆ ಕೋಟಿಗಟ್ಟಲೇ ನಷ್ಟವಾಗುತ್ತಿದೆ. ಅಧಿಕಾರಿಗಳು ಮೌನವಾಗಿದ್ದಾರೆ. ಮಾನಸಗಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ತರಾತುರಿಯಲ್ಲಿ ಶಾಲೆಗೆ ಬೀಗ ಹಾಕಿ ಹೋಗಿರುವುದಾಗಿ ಗ್ರಾಮದ ರಮೇಶ ಎಂಬವರು ದೂರಿದ್ದಾರೆ.   ಪ್ರತಿಕ್ರಿಯೆಗೆ ಅಧಿಕಾರಿಗಳು ಲಭಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT