ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ-ಕಾಲೇಜ್ ಬಂದ್, ಸಂಚಾರ ಅಬಾಧಿತ

ಇಂದು ಕೇಂದ್ರ ಕಾರ್ಮಿಕ ಸಂಘಟನೆಗಳಿಂದ ಮುಷ್ಕರ
Last Updated 20 ಫೆಬ್ರುವರಿ 2013, 7:42 IST
ಅಕ್ಷರ ಗಾತ್ರ

ರಾಯಚೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇದೇ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಇದೇ 20 ಮತ್ತು 21ರಂದು ನೀಡಿರುವ ಅಖಿಲ ಭಾರತ ಮುಷ್ಕರ ಕರೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸುತ್ತಿವೆ.

ಮುಷ್ಕರ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಂದಿನಂತೆಯೇ ಬಸ್‌ಗಳು ರಸ್ತೆಗಿಳಿಯಲಿವೆ. ಪೆಟ್ರೊಲ್ ಪಂಪ್ ಕಾರ್ಯನಿರ್ವಹಿಸಲಿವೆ ಎಂದು ಸಂಬಂಧಪಟ್ಟ ಸಂಸ್ಥೆಗಳ ಮುಖ್ಯಸ್ಥರು ತಿಳಿಸಿದ್ದಾರೆ.

ಮುಷ್ಕರದಲ್ಲಿ ಮೈಕ್ ಬಳಕೆಗೆ ಅವಕಾಶವಿಲ್ಲ. ಶಾಂತಿ ಸುವ್ಯವಸ್ಥೆಗೆ ಎಚ್ಚರಿಕೆ ವಹಿಸಲಾಗಿದೆ ಎಂದು ಸಹಾಯಕ ಆಯುಕ್ತರಾದ ಮಂಜುಶ್ರೀ ಹೇಳಿದ್ದಾರೆ.ಶಾಲೆ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜ ತಿಳಿಸಿದ್ದಾರೆ.

ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಮುಷ್ಕರ ನಡೆದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗಬಹುದು. ಗ್ರಾಮೀಣ ಭಾಗದಲ್ಲಿ ಇಂಥ ಸಮಸ್ಯೆ ಆಗುವುದಿಲ್ಲ. ಹೀಗಾಗಿ ಒಂದೊಂದು ಕಡೆ ವಿಭಿನ್ನ ಪರಿಸ್ಥಿತಿ ಇರುತ್ತದೆ. ಹೀಗಾಗಿ ಆಲ್ಲಿನ ಪರಿಸ್ಥಿತಿ ಅವಲೋಕಿಸಿ ಆಯಾ ಶಾಲಾ ಮುಖ್ಯಸ್ಥರು ಶಾಲೆಗೆ ರಜೆ ಘೋಷಣೆ ನಿರ್ಧಾರ ಕೈಗೊಳ್ಳುವರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಸ್ ಪರಮೇಶ್ವರ ತಿಳಿಸಿದ್ದಾರೆ.

ಸಾರಿಗೆ ಅಧಿಕಾರಿ ಹೇಳಿಕೆ: ಮುಷ್ಕರ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತದ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಎಂದಿನಂತೆ ಬಸ್ ರಸ್ತೆಗೆ ಇಳಿಯಲಿವೆ. ಒಂದು ಬಸ್‌ನಲ್ಲಿ ಕನಿಷ್ಠ 35ರಿಂದ 40 ಜನ ಪ್ರಯಾಣಿಕರಿದ್ದರೆ ಆ ಬಸ್ ನಿಲ್ದಾಣದಿಂದ ಹೊರಗೆ ರಸ್ತೆಗೆ ಇಳಿಯಲು ಅನುಮತಿ ನೀಡಲಾಗಿದೆ. ಕನಿಷ್ಠ ಪ್ರಯಾಣಿಕರಿಲ್ಲದಿದ್ದರೆ ಅಂಥ ಬಸ್ ಸಂಚಾರಿಸುವುದಿಲ್ಲ.

ಡಿಸೇಲ್ ದರ ಹೆಚ್ಚಾಗಿದೆ. ಖಾಲಿ ಖಾಲಿ ಬಸ್ ಸಂಚಾರದಿಂದ ನಿಗಮಕ್ಕೆ ಹೆಚ್ಚಿನ ನಷ್ಟ ಆಗುತ್ತದೆ. ಈ ನಷ್ಟ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗೀಯ ಅಧಿಕಾರಿ ವೆಂಕಟೇಶ್ವರೆಡ್ಡಿ `ಪ್ರಜಾವಾಣಿ'ಗೆ ತಿಳಿಸಿದರು.

20 ಮತ್ತು 21ರಂದು ನಡೆಯುವ ಮುಷ್ಕರದಲ್ಲಿ ನಮ್ಮ ಸಾರಿಗೆ ಸಂಸ್ಥೆಯ ನೌಕರರು ಯಾರು ಭಾಗವಹಿಸುತ್ತಾರೋ ಅಂಥವರ ಆಯಾ ದಿನದ ವೇತನವನ್ನು ಕಡಿತಗೊಳಿಸಲು ಇಲಾಖೆ ಆದೇಶಿಸಿದೆ. ಅದನ್ನು ಅನುಸರಿಸಲಾಗುವುದು. ಒಟ್ಟಾರೆ ಪರಿಸ್ಥಿತಿಗನುಗುಣವಾಗಿ ಬಸ್ ಸಂಚಾರ ಇರಲಿದೆ ಎಂದು ಹೇಳಿದರು.

ಪೆಟ್ರೊಲ್ ಪಂಪ್ ಬಂದ್ ಇಲ್ಲ: ಮುಷ್ಕರ ಹಿನ್ನೆಲೆಯಲ್ಲಿ ಪೆಟ್ರೊಲ್ ಪಂಪ್ ಬಂದ್ ಬಗ್ಗೆ ಇದುವರೆಗೆ ನಿರ್ಧಾರ ಕೈಗೊಂಡಿಲ್ಲ. ಪೆಟ್ರೊಲ್ ಪಂಪ್ ಮಾಲೀಕರ ಸಂಘದಿಂದ ಪಂಪ್ ಬಂದ್ ಮಾಡುವ ಬಗ್ಗೆ ಸೂಚನೆ ಬಂದಿಲ್ಲ. ಹೀಗಾಗಿ ಎಂದಿನಂತೆಯೇ ಪೆಟ್ರೊಲ್ ಪಂಪ್ ಕಾರ್ಯನಿರ್ವಹಿಸಲಿವೆ ಎಂದು ರಾಯಚೂರು ಪೆಟ್ರೊಲ್ ಪಂಪ್ ಮಾಲೀಕರ ಮುಖಂಡ ನವೀನ್‌ಕುಮಾರ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT