ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಲ್ಲೊಂದು ‘ಇಂಗ್ಲಿಷ್‌ ಓದುವ ಕೋಣೆ’

ಶೈಕ್ಷಣಿಕ ಅಂಗಳ
Last Updated 9 ಏಪ್ರಿಲ್ 2014, 7:10 IST
ಅಕ್ಷರ ಗಾತ್ರ

ದೇವದುರ್ಗ: ಸರ್ಕಾರಿ ಶಾಲೆಯ ಮಕ್ಕಳಲ್ಲಿ ಇಂಗ್ಲಿಷ್‌ ಭಾಷೆಯ ಕೀಳರಿಮೆ ದೂರ ಮಾಡುವ ಜೊತೆಗೆ ಸರಳ ಮತ್ತು ಅರ್ಥಗರ್ಭಿತವಾಗಿ ಪ್ರಾಥಮಿಕ ಹಂತದಲ್ಲಿಯೇ   ಇಂಗ್ಲಿಷ್‌ ಭಾಷೆಯ ಅಭಿರುಚಿ ಹೆಚ್ಚಿಸಲು ತಾಲ್ಲೂಕಿನಲ್ಲಿ ವಿನೂತನವಾಗಿ ಇಂಗ್ಲಿಷ್‌  ಓದುವ ಕೋಣೆ (ಇಂಗ್ಲಿಷ್‌ ಲ್ಯಾಂಗ್ವೇಜ್‌ ಲ್ಯಾಬ್‌)ಯನ್ನು ಜಾರಿ­ಗೊಳಿಸಿ­ರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಸರ್ವ ಶಿಕ್ಷಣ ಅಭಿಯಾನದಲ್ಲಿ ಬಿಆರ್‌ಪಿ­ಯಾಗಿ ಕಾರ್ಯನಿರ್ವಹಿಸುತ್ತಿರುವ ನಾಗರಾಜ ಅರಳಿಮರ ಅವರು ಕಂಡುಕೊಂಡ ಕನಸಿನ ಯೋಜನೆಗೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನ ಮತ್ತು ಇಲಾಖೆಯ ಇಸಿಒ, ಬಿಆರ್‌ಪಿ, ಸಿಆರ್‌ಪಿಗಳ ಮತ್ತು ಶಾಲಾ ಶಿಕ್ಷಕರ ಸಹಕಾರದಿಂದ ಇಂಗ್ಲಿಷ್‌ ಓದುವ ಕೋಣೆ ಎಂಬ ವಿನೂತನವಾದ ಕಾರ್ಯಕ್ರಮ ಇಂದು ತಾಲ್ಲೂಕಿನ ಸರ್ಕಾರಿ ಶಾಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷೆ ಮತ್ತು ಕಲಿಕೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿರುವುದು  ವಿಶೇಷವಾಗಿದೆ.

ಆದ್ಯತೆ: ಸರ್ಕಾರಿ ಯೋಜನೆ  ಅಲ್ಲದಿದ್ದರೂ ಬಿಆರ್‌ಪಿ ನಾಗರಾಜ ಅರಳಿಮರ ಅವರು ಶಾಲೆಯಲ್ಲಿನ ಸಂಪನ್ಮೂಲವನ್ನು ಬಳಕೆ ಮಾಡಿಕೊಂಡು ಇಂಗ್ಲಿಷ್‌ ಭಾಷೆಯ ವಾತಾವರಣ ನಿರ್ಮಾಣ ಮಾಡಲು ಮುಂದಾ­ಗಿರುವುದರಿಂದ ಜಿಲ್ಲೆಯಲ್ಲಿಯೇ ದೇವದುರ್ಗ ತಾಲ್ಲೂಕು ಮಾದರಿಯಾಗಿದೆ. 

ಇಂಗ್ಲಿಷ್‌ ಭಾಷೆಯ ಕಲಿಕೆ ಮತ್ತು ಜ್ಞಾನದ ಅನಿರ್ವಾಯತೆಯನ್ನು ಹೆಚ್ಚಿಸುವುದು, ನಲಿ, ಕಲಿ ಹಂತದಲ್ಲಿ ಇಂಗ್ಲಿಷ್‌ ಬೋಧನೆ ಹಾಗೂ ಕಲಿಕೆಗೆ ಹೆಚ್ಚು ಆದ್ಯತೆ ನೀಡುವುದು ಮತ್ತು ಇಂಗ್ಲಿಷ್‌ ಕಲಿಕೆಗೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಿಕೊಂಡು ಮಕ್ಕಳಲ್ಲಿ ಇಂಗ್ಲಿಷ್‌ ಭಾಷೆಯ ಬಗ್ಗೆ ಆಸಕ್ತಿ ತುಂಬುವುದರ ಬಗ್ಗೆ ಅವರು ಹಾಕಿಕೊಂಡ ಯೋಜನೆಗಳು ಇಂದು ಬಹುತೇಕ ಶಾಲೆಯಲ್ಲಿ ಯಶಸ್ವಿಯಾಗಿರುವುದು ಕಂಡು ಬಂದಿದೆ.

ಸುಲಭ ಕಲಿಕೆ: ಈಗಾಗಲೇ ತಾಲ್ಲೂಕಿನ ಬಹುತೇಕ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅಲ್ಲಿನ ಸಾಮಗ್ರಿಗಳನ್ನು ಬಳಕೆ ಮಾಡಿಕೊಂಡು ಇಂಗ್ಲಿಷ್‌ ಓದುವ ಕೋಣೆ ಎಂಬ ವಿನೂತನವಾದ ಯೋಜನೆಯನ್ನು ಜಾರಿಗೊಳಿಸಲಾಗಿದೆ.

  ಪ್ರತಿ ಶಾಲೆಯಲ್ಲಿ  ಒಂದು ಕೋಣೆಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಇಂಗ್ಲಿಷ್‌ ಭಾಷೆಗೆ ಸಂಬಂಧಿಸಿದ ಅಕ್ಷರ ಮತ್ತು ಚಿತ್ರಗಳನ್ನು ಬರೆಯಲಾಗಿದೆ. ಆ ಶಾಲೆಯ ಯಾವುದೇ ತರಗತಿಯ ಮಕ್ಕಳಿಗೆ ಇಂಗ್ಲಿಷ್‌ ಅವಧಿ ಇದ್ದರೂ ಈ ಕೋಣೆಗೆ ಬಂದು ಕುಳಿತುಕೊಳ್ಳಲು ಹೇಳಿಕೊಡಲಾಗಿದೆ.

  ಕೋಣೆಗೆ ಬಂದ ವಿದ್ಯಾರ್ಥಿಗಳಿಗೆ ಬಹು ಬೇಗನ ಅರ್ಥವಾಗುವಂಥ ಶಬ್ದ ಮತ್ತು ಚಿತ್ರಗಳನ್ನು ಬರೆಯಲಾಗಿದೆ. ಕೋಣೆಯ ಗೋಡೆಯ ಮೇಲೆ ಬರೆದ ಅಕ್ಷರಗಳನ್ನು ಮಕ್ಕಳು ಸುಲಭವಾಗಿ ಅದೇ ರೀತಿ ಬರೆಯಲು ಗೋಡೆಯ ಕೆಳಗೆ ಸಾಕಷ್ಟು ಸ್ಥಳವನ್ನು ಬಿಡಲಾಗಿದೆ. ಇದರಿಂದ ಮಕ್ಕಳಿಗೆ ಅಕ್ಷರ ಜ್ಞಾನ ಮತ್ತು ಭಾಷೆಯ ತಿಳುವಳಿಕೆಯನ್ನು ಸುಲಭವಾಗಿ ಹೇಳಿಕೊಡಲು ಸಾಧ್ಯವಾಗುತ್ತದೆ. 

  ಇದರ ಜೊತೆಗೆ ಇಂಗ್ಲಿಷ್‌ ಬಗ್ಗೆ ಮಕ್ಕಳಲ್ಲಿ ಹೊಸ ವಾತಾವರಣ ಸೃಷ್ಟಿಸುವುದು, ಮಕ್ಕಳಲ್ಲಿ ಇಂಗ್ಲಿಷ್‌ ಭಾಷೆ ಬಗ್ಗೆ ಇದ್ದ ಭಯವನ್ನು ಕಡಿಮೆ ಮಾಡಿ ಆತ್ಮ ವಿಶ್ವಾಸ ಹಾಗೂ ಕಲಿಕಾ ಉತ್ಸಾಹ ಹೆಚ್ಚಾಗುವಂತೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎನ್ನತ್ತಾರೆ ನಾಗರಾಜ ಅರಳಿಮರ.

ಭಾಷೆ ಬೆಳವಣಿಗೆಗೆ ಸಹಕಾರಿ
ಇಂಗ್ಲಿಷ್‌ ಓದುವ ಕೋಣೆ ಎಂಬ ವಿನೂತನವಾದ ಕಲಿಕಾ ಯೋಜನೆಯನ್ನು ಜಿಲ್ಲೆ ಸೇರಿದಂತೆ ರಾಜ್ಯ ವ್ಯಾಪ್ತಿ ವಿಸ್ತರಣೆ ಮಾಡಿದರೆ ಸರ್ಕಾರಿ ಶಾಲೆಯ ಪ್ರಾಥಮಿಕ ಮಕ್ಕಳಿಗೆ ಅನುಕೂಲವಾಗಲಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪ್ರತ್ಯೇಕವಾದ ಕೋಣೆಯನ್ನು ನಿರ್ಮಾಣ ಮಾಡುವುದು, ಹೆಚ್ಚು ಶಿಕ್ಷಕರಿಗೆ ಆರ್‌ಐಇ ಇಂಗ್ಲಿಷ್‌  ತರಬೇತಿ ಪಡೆಯಲು ಅವಕಾಶ ನೀಡುವುದು, ಪ್ರತ್ಯೇಕವಾದ ಅನುದಾನ ನೀಡುವುದು. ಈ ಯೋಜನೆ  ಜಾರಿಗಾಗಿ ಸ್ಥಳೀಯ ಮಟ್ಟದಲ್ಲಿ ಮುಖ್ಯ­ಗುರುಗಳಿಗೆ ಕಟ್ಟುನಿಟ್ಟಿನ ಆದೇಶ ಜಾರಿ ಮಾಡುವುದು  ಮೊದಲಾದವುಗಳಿಂದ ಮಕ್ಕಳಲ್ಲಿ ಇಂಗ್ಲಿಷ್‌ ಭಾಷೆ ಬೆಳವಣಿಗೆಗೆ ಸಹಕಾರಿಗುತ್ತದೆ.
–ನಾಗರಾಜ ಅರಳಿಮರ, ಬಿಆರ್‌ಪಿ 

‘ಉತ್ತಮ ಸ್ಪಂದನೆ’
ಸಾಮಾನ್ಯ ವರ್ಗದಲ್ಲಿ ಮಕ್ಕಳಿಗೆ ಇಂಗ್ಲಿಷ್‌ ಬೋಧನೆಗಿಂತ ಪ್ರತ್ಯೇ­ಕವಾದ ಇಂಗ್ಲಿಷ್‌ ಓದುವ ಕೋಣೆ ಮಾಡಿರು­ವುದರಿಂದ ಮಕ್ಕಳಲ್ಲಿ ಕುತೂಹಲ ಹೆಚ್ಚಾಗಿ ಇಂಗ್ಲಿಷ್‌ ಕಲಿಕೆಗೆ ಉತ್ತಮ ಸ್ಪಂದನೆ ಕಂಡು ಬಂದಿದೆ.
–ಉಮಾ ಮಹೇಶ್ವರಿ, ಶಿಕ್ಷಕಿ

‘ಕಲಿಯುವ ಉತ್ಸಾಹ ಹೆಚ್ಚಾಗಿದೆ’
ಪ್ರತಿನಿತ್ಯ ಒಂದೇ ಕೋಣೆ­ಯಲ್ಲಿಯೇ ಎಲ್ಲ ವಿಷಯಗಳನ್ನು ಕಲಿ­ಯು­ವುದರಿಂದ ಬೇಸ­ರ­ವಾಗುತ್ತಿತ್ತು. ನನಗೆ ಇಂಗ್ಲಿಷ್‌ ಓದುವ ಕೋಣೆ ಎಂದರೆ ಬಹಳಷ್ಟು ಇಷ್ಟ. ಕೋಣೆಯಲ್ಲಿ ಬಣ್ಣ,ಬಣ್ಣದ ಇಂಗ್ಲಿಷ್‌ ಪದ,ಚಿತ್ರಗಳು ನೋಡುವ ಮೂಲಕ ಕಲಿಯಬೇಕೆಂಬ ಉತ್ಸಾಹ ಹೆಚ್ಚಾಗಿದೆ.
–ರೇವತಿ, 5ನೇ ತರಗತಿ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT