ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಹಿರಿಮೆ ಉಳಿವಿಗೆ ಚಿಂತನೆ ಅಗತ್ಯ

Last Updated 7 ಅಕ್ಟೋಬರ್ 2011, 8:50 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಕಲೆ, ಸಾಹಿತ್ಯ, ಸಂಗೀತ ಆರಾಧಕರು, ಕಲಾವಿದರು ಸಾಕಷ್ಟಿದ್ದಾರೆ. ಜಿಲ್ಲೆಯ ಕಲೆ,ಇತಿಹಾಸ ಮತ್ತು ಸಾಂಸ್ಕೃತಿಕ ಹಿರಿಮೆಯ ಬಗ್ಗೆ ಅಭಿಮಾನ ಹೊಂದಿರಬೇಕು. ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ನಿರಂತರ ಪ್ರಯತ್ನಿಸಬೇಕು ಎಂದು ಶಾಸಕ ಸಯ್ಯದ್ ಯಾಸಿನ್ ಹೇಳಿದರು.

ಬುಧವಾರ ಇಲ್ಲಿನ ಮಕ್ಕಾ ದರವಾಜಾದಲ್ಲಿ ನಗರಸಭೆಯು ದಸರಾ ಹಬ್ಬದ ಅಂಗವಾಗಿ ಆಯೋಜಿಸಿದ್ದ  ಬಹುಭಾಷಾ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದಾಸರು, ಶರಣರು, ಸಂತರು ನಡೆದಾಡಿ ಭೂಮಿ ಇದು. ಈ ನೆಲದಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಸದಾ ಪ್ರೋತ್ಸಾಹಿಸುತ್ತಿರಬೇಕು.  ಕನ್ನಡ, ಹಿಂದಿ, ಉರ್ದು ಭಾಷೆಗಳ ವಿದ್ವಾಂಸರು ಸಾಕಷ್ಟಿದ್ದಾರೆ. ಹಲವಾರು ಕಲಾವಿದರಿದ್ದಾರೆ. ಅಂಥ ಮಹನೀಯರ ಬದುಕನ್ನು ದಾಖಲಿಸುವ ಪ್ರಯತ್ನ ಆಗಬೇಕು. ನಗರಸಭೆ ಈ ದಿಶೆಯಲ್ಲಿ ಪ್ರಯತ್ನ ನಡೆಸಿದರೆ ತಮ್ಮ ಶಾಸಕರ ನಿಧಿಯಡಿ ಅನುದಾನ ಕಲ್ಪಿಸುವ ಭರವಸೆ ನೀಡಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ ಕರಿಯಪ್ಪ ಮಾಸ್ತರ್, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಉನ್ನತ ಪ್ರಶಸ್ತಿ ಪಡೆದ ಜಿಲ್ಲಾ ಸ್ಕೌಟ್ಸ್ ಆಯುಕ್ತ ಕೆ ತಿಮ್ಮಯ್ಯ, ತಿರುಪತಿ ತಿರುಮಲ ದೇವಸ್ಥಾನದಿಂದ ಸಂಗೀತ ಸೇವೆಗೆ ಒಂದು ಲಕ್ಷ ಪ್ರಥಮ ಪ್ರಶಸ್ತಿ ಗಳಿಸಿದ ಶ್ರೀ ಕೃಷ್ಣ ಸಂಗೀತ ವಿದ್ಯಾಲಯದ ಕೊಪ್ರೇಶಾಚಾರ ಅವರನ್ನು ನಗರಸಭೆ ವತಿಯಿಂದ ಅತಿಥಿಗಳು ಸನ್ಮಾನಿಸಿದರು.

ಜಿಲ್ಲೆಯ ಸಾಹಿತಿಗಳಾದ ಬಿ.ಜಿ ಹುಲಿ, ರಾಮಣ್ಣ ಹವಳೆ ಅವರು ಜಿಲ್ಲೆಯ ಸಾಂಸ್ಕೃತಿಕತೆ ಬಗ್ಗೆ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಮಮತಾ ಸುಧಾಕರ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ ವಸಂತಕುಮಾರ, ಜಿಲ್ಲಾ ಕಸಾಪ ಅಧ್ಯಕ್ಷ ಅಯ್ಯಪ್ಪ ತುಕ್ಕಾಯಿ, ನಗರಸಭ ಉಪಾಧ್ಯಕ್ಷೆ ಸುಲೋಚನಾ ಕೆ, ಬಂಡಾಯ ಸಾಹಿತಿ ಭಗತರಾಜ್ ನಿಜಾಮಕರ ಹಾಗೂ ಇತರರಿದ್ದರು.

ಬಹುಭಾಷಾ ಕವಿಗೋಷ್ಠಿ
ಡಾ. ಬಸವಲಿಂಗ ಸೊಪ್ಪಿಮಠ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಹಿರಿಯ ಕವಿಗಳಾದ ಶಾಮಸುಂದರ ಪಟವಾರಿ, ವಹಿದ್ ವಾಜೀದ್, ಆಂಜನೇಯ ಜಾಲಿಬೆಂಚಿ, ಶೇಖರ ಅರ್ಕಸಾಲಿ, ಪಂಪಾಪತಿಶಾಸ್ತ್ರಿ, ಯುವ ಕವಿಗಳಾದ ಶಂಕರರಾವ ಉಭಾಳೆ, ರಮೇಶಬಾಬು ಯಾಳಗಿ, ಈರಣ್ಣ ಬೆಂಗಾಲಿ, ಜಾಕೋಬ್ ಕುರುಡಿ, ಅಯ್ಯಪ್ಪಯ್ಯ ಹುಡಾ ಅವರು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.
ಕೃಷ್ಣ ಸಂಗೀತ ವಿದ್ಯಾಲಯದ ಮಕ್ಕಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT